ಕೊಲ್ಕೊತ್ತಾ: ಇತ್ತೀಚಿನ ದಿನಗಳಲ್ಲಿ ಭಾರತದ ನೆರೆ ರಾಷ್ಟ್ರ ಪಾಕಿಸ್ಥಾನ ಪದೇ ಪದೇ ಪರಮಾಣು ಅಸ್ತ್ರ ಗುಮ್ಮನನ್ನು ಭಾರತದ ವಿರುದ್ಧ ಛೂ ಬಿಡುತ್ತಿರುವುದು ಏಷ್ಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಳವಳವನ್ನು ಉಂಟು ಮಾಡಿದೆ. ಆದರ ಭಾರತ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೇ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನವನ್ನು ಕಟ್ಟಿಹಾಕುವ ತನ್ನ ರಾಜತಾಂತ್ರಿಕ ಕಾರ್ಯವನ್ನು ಮುಂದುವರೆಸಿದೆ.
ಈ ನಡುವೆ ಭಾರತೀಯ ಸೇನೆಯ ಪೂರ್ವ ವಿಭಾಗದ ಲೆಫ್ಟಿನೆಂಟ್ ಜನರಲ್ ಎಂ.ಎಂ. ನರಾವಣೆ ಅವರು ಪಾಕಿಸ್ಥಾನದ ಪರಮಾಣು ಅಸ್ತ್ರದ ಗುಮ್ಮನಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೆಳಿದ್ದಾರೆ. ಕೊಲ್ಕೊತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಈ ಮಾತುಗಳನ್ನು ಹೆಳಿದ್ದಾರೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ತಮ್ಮ ದೇಶವನ್ನು ಉದ್ದೇಶಿಸಿ ಮಾಡಿದ ಇತ್ತೀಚಿನ ಭಾಷಣದಲ್ಲಿ ಪರಮಾಣು ಬಾಂಬ್ ದಾಳಿ ವಿಚಾರವನ್ನು ಪ್ರಸ್ತಾಪಿಸಿದ್ದರು. ‘ಭಾರತ ಮತ್ತು ಪಾಕಿಸ್ತಾನ ದೇಶಗಳ ಬಳಿ ಪರಮಾಣು ಅಸ್ತ್ರವಿದೆ. ಒಂದುವೇಳೆ ಈ ಎರಡು ದೇಶಗಳ ನಡುವೆ ಯುದ್ಧ ಸಂಭವಿಸಿದರೆ ಅದರ ಪರಿಣಾಮ ಏಷ್ಯಾ ಖಂಡದ ಮೇಲೆಲ್ಲಾ ಆಗುತ್ತದೆ’ ಎಂದು ಇಮ್ರಾನ್ ಖಾನ್ ಅವರು ಭಾರತವೂ ಸೇರಿದಂತೆ ವಿಶ್ವದ ರಾಷ್ಟ್ರಗಳಿಗೆ ತಮ್ಮಲ್ಲಿರುವ ಪರಮಾಣು ಅಸ್ತ್ರದ ಗುಮ್ಮನನ್ನು ಛೂ ಬಿಟ್ಟಿದ್ದರು.
‘ನಾವು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ ಮತ್ತು ನಾವೇನೇ ಮಾಡಿದರೂ ಸಹ ಅದು ದೀರ್ಘಕಾಲೀನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡೇ ಯೋಜನೆ ರೂಪಿಸಿರುತ್ತೇವೆ’ ಎಂದು ಲೆಫ್ಟಿನೆಂಟ್ ಜನರಲ್ ನರಾವಣೆ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟರು. ‘ನಮ್ಮದು ಈಗ 1962ರಲ್ಲಿ ಇದ್ದ ಸೇನೆಯಲ್ಲ. ಇತಿಹಾಸ ಪುನರಾವರ್ತನೆ ಮಾಡಬೇಡಿ ಎಂದು ಚೀನಾ ನಮಗೆ ಕಿವಿ ಮಾತು ಹೇಳುವುದಾದರೆ, ನಾವೂ ಕೂಡ ಅವರಿಗೆ ಅದನ್ನೇ ಹೇಳಬಯಸುತ್ತೇವೆ’ ಎಂದು ಪಾಕಿಸ್ತಾನದ ಪರಮಾಪ್ತ ಚೀನಾ ದೇಶಕ್ಕೂ ಸಹ ಲೆಫ್ಟಿನೆಂಟ್ ಜನರಲ್ ಅವರು ಎಚ್ಚರಿಕೆ ನೀಡುವ ಮಾತುಗಳನ್ನಾಡಿದ್ದಾರೆ.
1962ರ ಚೀನಾ ಯುದ್ಧದಲ್ಲಿ ಉಂಟಾಗಿದ್ದು ಸೇನೆಯ ಸೋಲಲ್ಲ ಅದು ರಾಜತಾಂತ್ರಿಕ ವೈಫಲ್ಯ. ಆ ಹೋರಾಟದಲ್ಲಿ ನಮ್ಮ ಸೇನೆಯ ಎಲ್ಲಾ ವಿಭಾಗಗಳೂ ತಮಗೆ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿಯೇ ನಿರ್ಬಹಿಸಿದ್ದವು. ಆ ಬಳಿಕದ ದಿನಗಳಲ್ಲಿ ನಮ್ಮ ವೈಫಲ್ಯವನ್ನು ಗುರುತಿಸಿಕೊಂಡು ಅದನ್ನು ಸರಿಪಡಿಸಿಕೊಳ್ಳುವ ಗಂಭೀರ ಪ್ರಯತ್ನಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಡೋಕ್ಲಾಂ ವಿಚಾರದಲ್ಲಿ ಚೀನಾ ಇನ್ನೂ ಸಹ ಸಿದ್ಧತೆಯ ಕೊರತೆಯಲ್ಲಿದೆ. ಒಂದುವೇಳೆ ಇದೀಗ ಯುದ್ಧ ಸಂಭವಿಸಿದರೂ ಅದನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ದವಾಗಿದೆ. ಇದರ ಕುರಿತಾಗಿ ಯಾರೂ ಗಾಬರಿಪಡುವ ಅಗತ್ಯವೇ ಇಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅವರು ಹೇಳಿದರು.