Advertisement

ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಸಚಿವರು: ಕಲ್ಮನಿ

06:25 PM Dec 31, 2021 | Team Udayavani |

ಕಾರವಾರ: ರಾಜ್ಯದಲ್ಲಿ ಡಿ.10 ರಿಂದ 430 ಪ್ರಥಮ ದರ್ಜೆ ಸರ್ಕಾರಿ ಕಾಲೇಜುಗಳ 14000 ಅತಿಥಿ ಉಪನ್ಯಾಸಕರು ಧರಣಿ, ಸತ್ಯಾಗ್ರಹ ನಡೆಸುತ್ತಿದ್ದರೂ, ಉನ್ನತ ಶಿಕ್ಷಣ ಇಲಾಖೆ ಕುರುಡಾಗಿ ಕುಳಿತಿದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಆಪಾದಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಲ್ಲಾ ಪಕ್ಷಗಳ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ನೋಡಿದೆವು. ಆದರೆ ನಮ್ಮ ಸಮಸ್ಯೆಗೆ ಒಬ್ಬರೂ ಸರಿಯಾಗಿ ಸ್ಪಂದಿಸಲಿಲ್ಲ ಎಂದು ವಿಷಾದಿಸಿದರು. ಹೋರಾಟವನ್ನು ಈ ಸಲ ತೀವ್ರಗೊಳಿಸಿದ್ದೇವೆ.

ಬೆಳಗಾವಿ ಅಧಿವೇಶನದ ಕಾಲಕ್ಕೆ ಉನ್ನತ ಶಿಕ್ಷಣ ಸಚಿವರು ನಮ್ಮ ಸಂಖ್ಯೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಬಿಟ್ಟರೆ ಸಮಸ್ಯೆಗೆ ಸ್ಪಂದಿಸಲಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನ ಸೆಳೆದ ಮೇಲೆ 20 ನಿಮಿಷ ಅತಿಥಿ ಉಪನ್ಯಾಸಕರ ಸಮಸ್ಯೆ ಚರ್ಚೆಯಾಗಿದೆ. ನಂತರ ಸದನ ಸಮಿತಿ ಮಾಡಿ ಕೈತೊಳೆದುಕೊಳ್ಳಲಾಗಿದೆ. ನಾವು 15 ವರ್ಷದಿಂದ ಅರೆಕಾಲಿಕ ಉದ್ಯೋಗಿಗಳಾಗಿ ದುಡಿಯುತ್ತಿದ್ದೇವೆ. ಬಸವರಾಜ ರಾಯರೆಡ್ಡಿ ಕಾಲದಲ್ಲಿ ಸಹ ಅರೆಕಾಲಿಕ ಉಪನ್ಯಾಸಕರ ಸಮಸ್ಯೆಗೆ ಸಮಿತಿ ಮಾಡಲಾಯಿತು. ನಂತರ ಸಮಿತಿ ವರದಿ ಏನಾಯಿತು ಎಂದು ಹನುಂತಗೌಡ ಪ್ರಶ್ನಿಸಿದರು.

ಅಧಿಕಾರದಲ್ಲಿ ಇರುವವರಿಗೆ ಕೆಲಸ ಮಾಡುವ ಮನಸ್ಸಿರಬೇಕು. ಹುಬ್ಬಳ್ಳಿ ಬಿಜೆಪಿ ಕಾರ್ಯಾಕಾರಣಿಯಲ್ಲಿ ಪಕ್ಷ ಬಲವರ್ದನೆಗೆ ಕೊಟ್ಟ ಸಮಯವನ್ನು ಧರಣಿ, ಪ್ರತಿಭಟನೆ ಮಾಡುವ ಅತಿಥಿ ಉಪನ್ಯಾಸಕರ ಸಮಸ್ಯೆ ಚರ್ಚೆಗೂ ಇಟ್ಟಿದ್ದರೆ ಅರ್ಥವಿತ್ತು. ಜನ ಸಾಯಲಿ, ಪಕ್ಷ ಗಟ್ಟಿಯಾದರೆ ಸಾಕು ಎಂಬ ಮನಸ್ಸು ಆಳುವವರಿಗೆ ಇದೆ. ನಾವು ಸುಮ್ಮನೇ ಬಿಡುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕುತ್ತೇವೆ. 14000 ಕುಟುಂಬದ ಪ್ರಶ್ನೆಯಿದು ಎಂದು ಹೇಳಿದರು.

ಬರುವ ದಿನಗಳಲ್ಲಿ (ಜ.10 ಅಥವಾ 12 ರಿಂದ) ತೀರ್ಥಹಳ್ಳಿಯಿಂದ ಎಲ್ಲಾ ಅತಿಥಿ ಉಪನ್ಯಾಸಕರು ಹೊರಟು ನೆಲಮಂಗಲದಿಂದ ಪಾದಯಾತ್ರೆ ಮಡುತ್ತೇವೆ. 14000 ಉಪನ್ಯಾಸಕರು ಸೇರಿ ವಿಧಾನಸೌಧದವರೆಗೆ ಪಾದಯಾತ್ರೆ ಮಾಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದರು. ರಾಜ್ಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಚಂದ್ರಶೇಖರ ಕಾಳಣ್ಣನವರ ಮಾತನಾಡಿ, ಉನ್ನತ ಶಿಕ್ಷಣ ಸಚಿವರಿಗೆ ಯುಜಿಸಿಯ ಗಂಧಗಾಳಿ ಗೊತ್ತಿಲ್ಲ ಎಂದರು.

Advertisement

ಜಿಲ್ಲಾಧ್ಯಕ್ಷ ಗಣಪತಿ ಪಟಗಾರ, ಕಾಂತರಾಜ, ರೇಖಾ ನಾಯ್ಕ, ಅಶ್ವಿ‌ನಿ, ಆಶಾಲತಾ, ಕೃಷ್ಣಗೌಡ, ಪ್ರಶಾಂತ ನಾಯಕ, ಸಂಗೀತಾ ನಾಯ್ಕ, ಭಾವನಾ ಬಾಂದೇಕರ್‌ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ಜಿಲ್ಲೆಯ ಎಲ್ಲಾ 15 ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ನಗರದ ರಂಗಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ, ಉನ್ನತ ಶಿಕ್ಷಣ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಡಳಿತ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next