ಜಾಲ್ಸೂರು: ಜಾಲ್ಸೂರು ಕುಕ್ಕಂದೂರಿನ 2 ಸಿಆರ್‌ಸಿ ಕಾಲನಿಯಲ್ಲಿರುವ ಕೆಎಫ್ ಡಿ ಸಿ ನೌಕರರ ವಸತಿ ಗೃಹಗಳು ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ನಿವಾಸಿಗಳು ಆತಂಕದಲ್ಲೇ ದಿನಕಳೆಯುತ್ತಿದ್ದಾರೆ. ವಸತಿ ಗೃಹಗಳು ಶಿಥಿಲಗೊಂಡಿರುವ ಕುರಿತು ಸೆ. 1ರಂದು ಸುದಿನದಲ್ಲಿ ‘ಅಪಾಯದಲ್ಲಿ ಜಾಲ್ಸೂರು ಸಿಆರ್‌ಸಿ ಕಾಲನಿ ವಸತಿಗೃಹಗಳು’ ವಿಶೇಷ ವರದಿ ಪ್ರಕಟವಾಗಿತ್ತು. ಆದರೆ ತಿಂಗಳಾದರೂ ಅಲ್ಲಿನ ಪರಿಸ್ಥಿತಿ ಸುಧಾರಿಸಿಲ್ಲ. ಈ ಸಂಬಂಧ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ.
ದುರಸ್ತಿ ಆರಂಭವಾಗಿಲ್ಲ
ಅಧಿಕಾರಿಗಳನ್ನು ಈ ಕುರಿತಾಗಿ ಕೇಳಿದಾಗ ಮಳೆಗಾಲವಾದ್ದರಿಂದ ದುರಸ್ತಿ ಕಾರ್ಯ ನಡೆಸಲು ಅಡಚಣೆಗಳಾಗುತ್ತಿವೆ. ಮಳೆ ನಿಂತ ಕೂಡಲೆ ದುರಸ್ತಿ ಕಾರ್ಯಗಳು ಪ್ರಾರಂಭಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದರು. ಆದರೆ ಮಳೆ ದೂರವಾಗಿದ್ದರೂ ಎಂಜಿನಿಯರ್ ಇಲಾಖಾ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.
ಹಿಂಗಾರು ಮಳೆಯ ಸಂದರ್ಭ ಮಿಂಚು ಗುಡುಗು ಸಹಿತ ಮಳೆಯಾಗುತ್ತವೆ. ಇದರಿಂದ ಮನೆಗಳಿಗೆ ಇನ್ನೂ ಹೆಚ್ಚು ಹಾನಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಕಾಲನಿಯ ನಿವಾಸಿಗಳಿಲ್ಲಿ ಆತಂಕ ಮನೆ ಮಾಡಿದೆ.
ಮನವಿ ಸಲ್ಲಿಕೆ
ಮನೆಯ ದುರಸ್ತಿಯ ಬಗ್ಗೆ ಅಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಹಾನಿಗೀಡಾದ ಒಂದು ಮನೆಯ ದುರಸ್ತಿಗೆ ಪ್ರಸ್ತಾವವಾಗಿದೆ.
– ಉಮೇಶ್ ಆಚಾರ್,
ಚೀಫ್ ಎಂಜಿನಿಯರ್, ಅರಣ್ಯ
ಅಭಿವೃದ್ಧಿ ಇಲಾಖೆ