Advertisement

ವಿದ್ಯುತ್‌ ಕೈಕೊಟ್ಟರೆ ನಾಟ್‌ ರೀಚೆಬಲ್‌!

11:43 AM Mar 29, 2019 | Team Udayavani |
ಅರಂತೋಡು : ಬಿಎಸ್ಸೆನ್ನೆಲ್‌ ಹಾಗೂ ಮೆಸ್ಕಾಂ ಅಸಮರ್ಪಕ ಸೇವೆಯಿಂದ ಹೈರಾಣಾಗಿರುವ ಗ್ರಾಹಕರು, ಅವುಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎರಡು ತಿಂಗಳಿಂದ ಬಿಎಸ್ಸೆನ್ನೆಲ್‌ ಹಾಗೂ ಮೆಸ್ಕಾಂ ಸೇವೆ ತೀರಾ ಹದಗೆಟ್ಟಿದೆ. ಪೆರಾಜೆ, ಅರಂತೋಡು, ತೊಡಿಕಾನ,ಸಂಪಾಜೆ ಗ್ರಾಮ ಗಳಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್‌ ಇದ್ದರೆ ಆಶ್ಚರ್ಯವೇ ಸರಿ. ಇದ್ದರೂ ಒಂದೆರಡು ಗಂಟೆ ಮಾತ್ರ. ಲೈನ್‌ ಸಮಸ್ಯೆಯಿಂದ ಆಗಾಗ ಟ್ರಿಪ್‌ ಆಘುತ್ತಿದ್ದು, ಗೃಹಬಳಕೆಯ ಎಲೆಕ್ಟ್ರಾನಿಕ್‌ ಸಾಮಗ್ರಿಗಳು ಸುಟ್ಟು ಹೋಗುತ್ತಿವೆ.
ಲೋ ವೋಲ್ಟೆಜ್‌
ಹಳ್ಳಿಯಲ್ಲಿ ಲೋ ವೋಲ್ಟೆಜ್‌ ಸಮಸ್ಯೆ ಮಾಮೂಲಿಯಾಗಿದೆ. ಇದರಿಂದ ಬಹಳಷ್ಟು ಜನ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಇದು ವಿದ್ಯುತ್‌ ಉಪಕರಣಗಳ ನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ. ಗಂಭೀರ ಸಮಸ್ಯೆ ಎಂದರೆ, ವಿದ್ಯುತ್‌ ಕೈಕೊಟ್ಟರೆ ಬಿಎಸ್ಸೆನ್ನೆಲ್‌ ಟವರ್‌ ಗಳೂ ಸ್ತಬ್ಧಗೊಳ್ಳುತ್ತಿವೆ. ಅಂತರ್ಜಾಲದ ಮೂಲಕ ನಡೆಯುವ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಕರೆ ಮಾಡಲು, ಸಂದೇಶ ಕಳುಹಿಸಲೂ ಆಗುವುದಿಲ್ಲ. ವಿದ್ಯುತ್‌ ಸಂಪರ್ಕ ಇದ್ದಾಗಲೂ ಬಿಎಸ್ಸೆನ್ನೆಲ್‌ನ 3ಜಿ ಸೇವೆ ಸ್ಥಗಿತಗೊಳ್ಳುತ್ತದೆ ಎಂದು ಗ್ರಾಹಕರು ದೂರಿದ್ದಾರೆ.
ಪಡಿತರಕ್ಕೂ ಸಂಚಕಾರ
ನೆಟ್‌ವರ್ಕ್‌ ಇಲ್ಲದೆ ಪಡಿತರ ಪಡೆಯಲು ಬೆರಳಚ್ಚು ನೀಡುವುದಕ್ಕೂ ಸಮಸ್ಯೆಯಾಗುತ್ತಿದೆ. ಕೂಲಿ ಕೆಲಸ ಮಾಡುವವರು ನಾಲ್ಕು- ಐದು ದಿನಗಳ ಕಾಲ ನ್ಯಾಯಬೆಲೆ ಅಂಗಡಿಗೆ ಅಲೆದು ಪಡಿತರ ಪಡೆಯಬೇಕಾಗುತ್ತಿದೆ. ಪ್ರತಿ ದಿನವೂ ಸರ್ವರ್‌ ಇಲ್ಲ, ವಿದ್ಯುತ್ತಿಲ್ಲ ಎಂಬ ಉತ್ತರ ಅವರನ್ನು ಕಂಗೆಡಿಸಿದೆ.
ಪರ್ಯಾಯ ವ್ಯವಸ್ಥೆ ಇಲ್ಲ
ಗ್ರಾಮೀಣ ಭಾಗದಲ್ಲಿ ಬಿಎಸ್ಸೆನ್ನೆಲ್‌ ಮೊಬೈಲ್‌ ಟವರ್‌ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಹಕರೂ ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಸಂಸ್ಥೆ ಎಂದು ಗ್ರಾಹಕರಲ್ಲೂ ಗೌರವ ಭಾವನೆ ಇತ್ತು. ಆದರೆ, ಎರು ತಿಂಗಳಿಂದ ಅವರೂ ಖಾಸಗಿ ಟೆಲಿಕಾಂ ಸಂಸ್ಥೆಗಳತ್ತ ವಾಲಿದ್ದಾರೆ. ಹಳ್ಳಿಗಳಲ್ಲಿ ಅವುಗಳ ನೆಟ್‌ವರ್ಕ್‌ ಸಿಕ್ಕರೆ ಮೊಬೈಲ್‌ ನಂಬರನ್ನು ಪೋರ್ಟ್‌ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಬೇರೆ ನೆಟ್‌ವರ್ಕ್‌ ಇಲ್ಲದ ಊರಲ್ಲಿ ಗ್ರಾಹಕರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಡೀಸೆಲ್‌ ಸಿಕ್ಕರೆ ಸಮಸ್ಯೆಯಿಲ್ಲ
ನಮಗೆ ಡೀಸೆಲ್‌ ಸರಬರಾಜು ಆಗುತ್ತಿಲ್ಲ. ಮಾರ್ಚ್‌ ತಿಂಗಳ ಕೊನೆಗೆ ಡೀಸೆಲ್‌ ಪೂರೈಕೆ ಆಗುವ ಕುರಿತು ಮಾಹಿತಿ ಇದೆ. ಡೀಸೆಲ್‌ ಸಿಕ್ಕರೆ ಜನರೇಟರ್‌ ಚಾಲೂ ಮಾಡಲು ಅನುಕೂಲವಾಗುವುದರಿಂದ ನೆಟ್‌ ವರ್ಕ್‌ ಸಮಸ್ಯೆಗೆ ಗಮನಾರ್ಹ ಪರಿಹಾರ ಸಿಗಬಹುದು.
ಆನಂದ್‌ ಎಜಿಎಂ,
ಪುತ್ತೂರು – ಸುಳ್ಯ ಬಿಎಸ್ಸೆನ್ನೆಲ್‌
ವಾರದಲ್ಲಿ ಸಮಸ್ಯೆ ಪರಿಹಾರ
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ತಾಂತ್ರಿಕ ಕೆಲಸ ನಡೆಯುತ್ತಿದೆ. ಇದು ಒಂದು ವಾರದೊಳಗೆ ಪೂರ್ಣಗೊಂಡು ವಿದ್ಯುತ್‌ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರ ಆಗಬಹುದು.
ಹರೀಶ್‌
ಮೆಸ್ಕಾಂ ಎಇಇ, ಸುಳ್ಯ
ತುಂಬ ಸಮಸ್ಯೆ ಆಗುತ್ತಿದೆ
ಗ್ರಾಮೀಣ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ವಿದ್ಯುತ್‌ ಇರುವುದೇ ಅಪೂರ್ವ. ವಿದ್ಯುತ್‌ ಕೈ ಕೊಟ್ಟರೆ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಕೂಡ ಇರುವುದಿಲ್ಲ. ಇಂಟರ್ನೆಟ್‌ ಸೇವೆ, ಕರೆ ಹಾಗೂ ಸಂದೇಶ ಯಾವುದೂ ಇಲ್ಲದೆ ತುರ್ತು ಸಂದರ್ಭಗಳಲ್ಲಿ ತುಂಬ ಸಮಸ್ಯೆಯಾಗುತ್ತಿದೆ.
– ಸಂತೋಷ್‌
ಬಿಎಸ್ಸೆನ್ನೆಲ್‌ ಗ್ರಾಹಕ
ತೇಜೇಶ್ವರ್‌ ಕುಂದಲ್ಪಾಡಿ
Advertisement

Udayavani is now on Telegram. Click here to join our channel and stay updated with the latest news.

Next