ಹಾವೇರಿ: ಬರದ ಬವಣೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಳೆಗಾಲದ ಸಿದ್ಧತೆ ಬಗ್ಗೆ ಅಧಿಕಾರಿಗಳು ಇನ್ನೂ ಯಾವುದೇ ಯೋಚನೆ, ಸಿದ್ಧತೆಯ ಯೋಜನೆ ಹಾಕಿಕೊಂಡಿಲ್ಲ. ಹೀಗಾಗಿ ಈ ಬಾರಿ ಅಧಿಕಾರಿಗಳು ಮೇ ತಿಂಗಳನ್ನು ಸಂಪೂರ್ಣವಾಗಿ ಬರ ನಿರ್ವಹಣೆಗಾಗಿಯೇ ಮೀಸಲಿಟ್ಟಂತಾಗಿದೆ.
ಸಾಮಾನ್ಯವಾಗಿ ಮೇ ತಿಂಗಳು ಬಂತೆಂದರೆ ಅಧಿಕಾರಿಗಳು ಮುಂಬರುವ ಜೂನ್ ತಿಂಗಳಿನಿಂದ ಶುರುವಾಗುವ ಮಳೆಗಾಲ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಕೃಷಿ ಇಲಾಖೆಯು ರೈತರಿಗೆ ಕೃಷಿ ಸೌಲಭ್ಯ ಕಲ್ಪಿಸಲು ತೊಡಗಿಕೊಂಡರೆ, ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಕೈಗೊಳ್ಳುವಲ್ಲಿ ಮಗ್ನವಾಗುತ್ತದೆ. ತಾಲೂಕಾಡಳಿತ, ಸ್ಥಳೀಯ ಸಂಸ್ಥೆಗಳು ಮಳೆಗಾಲ ಎದುರಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತವೆ. ಈ ಬಾರಿ ಮೇ ತಿಂಗಳಲ್ಲಿ ಎಲ್ಲ ಅಧಿಕಾರಿ ವರ್ಗ ಕುಡಿಯುವ ನೀರಿನ ಬವಣೆ ಎದುರಿಸುವಲ್ಲಿಯೇ ಹೆಚ್ಚು ತಲ್ಲೀನವಾಗಿದೆ. ಹೀಗಾಗಿ ಮೇ ತಿಂಗಳು ಅರ್ಧ ಕಳೆದರೂ ಮಳೆಗಾಲದ ಸಿದ್ಧತೆ ಕಡೆಗೆ ಅಧಿಕಾರಿ ವರ್ಗ ಇನ್ನೂ ಲಕ್ಷ ್ಯವಹಿಸಿಲ್ಲ.
ಏನೇನು ಮಾಡಬೇಕಿತ್ತು?: ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳು ಮೇ ತಿಂಗಳಲ್ಲಿ ಗ್ರಾಮ, ನಗರದ ಗಟಾರಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ಯೋಜನೆ ಹಾಕಿಕೊಳ್ಳುತ್ತವೆ. ಹಳೆಯ ಮರ, ಬೀಳಬಹುದಾದ ಮರಗಳನ್ನು ಗುರುತಿಸಿ ಅವುಗಳನ್ನು ತೆಗೆಸಲು ಕ್ರಮ ಕೈಗೊಳ್ಳುತ್ತವೆ. ತಾಲೂಕಾಡಳಿತಗಳು ನೆರೆ ಬರಬಹುದಾದ ಗ್ರಾಮಗಳಲ್ಲಿ ಕೈಗೊಳ್ಳಬಹುದಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಆಲೋಚಿಸುತ್ತವೆ. ನೆರೆ ಬಂದರೆ ಎಲ್ಲಿ ಗಂಜಿಕೇಂದ್ರ ತೆರೆಯಬೇಕು. ನದಿಗಳು ಅಪಾಯ ಮಟ್ಟ ಮೀರಿ ಹರಿದರೆ ಸುತ್ತಲಿನ ಗ್ರಾಮಸ್ಥರು ಏನೆಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಳೆಗಾಲ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ತೆರೆಯುವುದು ಸೇರಿದಂತೆ ಇನ್ನಿತರ ಕ್ರಮಗಳ ಬಗ್ಗೆ ಮೇ ತಿಂಗಳಲ್ಲಿಯೇ ಯೋಜನೆ ಮಾಡಿಕೊಳ್ಳುತ್ತವೆ. ಆದರೆ, ಈ ವರ್ಷ ತಾಲೂಕಾಡಳಿತ, ಸ್ಥಳೀಯ ಸಂಸ್ಥೆಗಳು ಈವರೆಗೆ ಮಳೆಗಾಲ ಸಿದ್ಧತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮಳೆ ಬಂದರೆ ಸಾಕು ಎಂಬ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ತಾಪಮಾನ 40ಡಿಗ್ರಿ ಸೆಲ್ಸಿಯಸ್ ಮೀರುತ್ತಿದ್ದು ಮಳೆ ಬಂದರೆ ಕಾದ ಹೆಂಚಾಗಿರುವ ವಾತಾವರಣ ತಂಪಾಗುತ್ತದೆ. ಅಂತರ್ಜಲಮಟ್ಟ ಹೆಚ್ಚಾಗುತ್ತದೆ. ಕೆರೆ ಕಟ್ಟೆಗಳಲ್ಲಿ ಒಂದಿಷ್ಟು ನೀರು ತುಂಬಿಕೊಂಡು ಬರ ಬೇಸಿಗೆಯ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಮಳೆಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಈಗಲೇ ಕ್ರಮವಾಗಬೇಕು: ಮಳೆ ಬಂತೆಂದರೆ ಜಿಲ್ಲಾ ಕೇಂದ್ರ ಹಾವೇರಿ ನಗರದ ಬಹುಕಡೆಗಳಲ್ಲಿ ಕಾಲುವೆಯ ಕೊಳಚೆಯೆಲ್ಲ ರಸ್ತೆ ಮೇಲೆ ಬಂದು ನಿಲ್ಲುತ್ತದೆ. ನಗರದ ಮುಖ್ಯ ರಸ್ತೆ ಪಿ.ಬಿ. ರಸ್ತೆಯ ಮೇಲೆಯೂ ನೀರು ತುಂಬಿ ಹರಿಯುವ ಮೂಲಕ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ನಗರದ ಗೂಗಿಕಟ್ಟೆ ಸ್ಥಳವಂತೂ ಕೊಳಚೆ ಸಂಗ್ರಹ ತಾಣವಾಗಿ ಮಾರ್ಪಡುತ್ತದೆ. ನಾಗೇಂದ್ರನಮಟ್ಟಿಗೆ ಹೋಗುವ ಮಾರ್ಗದಲ್ಲಿನ ರೇಲ್ವೆ ಕೆಳಸೇತುವೆಯಲ್ಲಿ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ನಗರಸಭೆ ಈಗಲೇ ಕಾಲುವೆ, ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಈಗಲೇ ಅಣಿಯಾಗಬೇಕಿದೆ.
ನಗರದ ನಾಗೇಂದ್ರನಮಟ್ಟಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಇನ್ನೂ ಕಚ್ಚಾ ರಸ್ತೆಗಳೇ ಇದ್ದು ಅವು ಮಳೆ ಬಂದಾಗ ಕೆಸರುಗದ್ದೆಯಂತಾಗುತ್ತವೆ. ಅಂಥ ರಸ್ತೆಗಳಿಗೆ ಡಾಂಬರ್ ಹಾಕುವ ಕಾರ್ಯ ಆಗಬೇಕಿದೆ. ನಗರದಲ್ಲಿ ಅಲ್ಲಲ್ಲಿ ರಾಶಿಬಿದ್ದಿರುವ ಕಸದ ವಿಲೇವಾರಿ ಆಗಬೇಕಿದೆ. ಮಳೆಗಾಲದ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಸ್ವಚ್ಛತಾ ಕ್ರಮ ಕೈಗೊಳ್ಳಬೇಕಿದೆ.
ಒಟ್ಟಾರೆ ಬರ ಸಮಸ್ಯೆಯ ಜತೆಗೆ ಅಧಿಕಾರಿ ವರ್ಗ ಬರ ನಿರ್ವಹಣೆಯ ಜತೆಯಲ್ಲಿಯೇ ಮುಂಬರುವ ಮಳೆಗಾಲ ಎದುರಿಸಲು ಬೇಕಾದ ಅಗತ್ಯ ಸಿದ್ಧತೆಯನ್ನೂ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದ್ದು ಈ ದಿಸೆಯಲ್ಲಿ ಅಧಿಕಾರಿ ವರ್ಗ ಲಕ್ಷ ವ್ಯಹಿಸಬೇಕಿದೆ.
•ಎಚ್.ಕೆ. ನಟರಾಜ