Advertisement

ಪೂರ್ವ ಸಿದ್ಧತೆ ಕೈಗೊಳ್ಳದ ಪುರಸಭೆ

04:27 PM May 25, 2019 | pallavi |

ಕುಮಟಾ: ಸಧ್ಯದಲ್ಲೇ ಮಳೆ ಆರಂಭವಾಗಲಿದೆ. ಮಳೆಗಾಲವನ್ನು ಎದುರಿಸಲು ಕೈಗೊಳ್ಳಬೇಕಾದ ಯಾವ ಕಾಮಗಾರಿಯನ್ನೂ ಇಲ್ಲಿನ ಪುರಸಭೆ ಈ ವರೆಗೂ ಆರಂಭಿಸಿಲ್ಲ. ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತಹ ಇವರ ಆಡಳಿತದ ಅವ್ಯವಸ್ಥೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

23 ವಾರ್ಡ್‌ ಹೊಂದಿರುವ ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಹಾಗೂ ಉಪ ರಸ್ತೆಗಳೆಂದು ನೂರಕ್ಕೂ ಅಧಿಕ ರಸ್ತೆಗಳಿವೆ. ಇವುಗಳ ಅಂಚಿನಲ್ಲಿ ಒಳಚರಂಡಿ ಕಾಮಗಾರಿ ನಡೆಸಿದ್ದರಿಂದ ಉಬ್ಬು ತಗ್ಗುಗಳು ನಿರ್ಮಾಣವಾಗಿವೆ.

ಇದರ ಹೊರತಾಗಿ ಅನೇಕ ರಸ್ತೆಗಳಿಗೆ ಗಟಾರಗಳಿವೆ. ಎಲ್ಲ ಗಟಾರಗಳು ಕಸ, ಹೂಳು ಹಾಗೂ ಗಿಡಗಳಿಂದ ಮುಚ್ಚಿಹೋಗಿವೆ. ಮುಚ್ಚಿರುವ ಗಟಾರವನ್ನು ಸ್ವತ್ಛಗೊಳಿಸದಿದ್ದರೆ ಮತ್ತು ರಸ್ತೆಗಳಲ್ಲಿ ನಿರ್ಮಾಣವಾಗಿರುವ ಉಬ್ಬು ತಗ್ಗುಗಳನ್ನು ಸರಿಪಡಿಸದಿದ್ದರೆ ಮಳೆಗಾಲದಲ್ಲಿ
ಸುರಿಯವ ನೀರು ಸರಾಗವಾಗಿ ಹೋಗಲು ಸಾಧ್ಯವೇ ಇಲ್ಲ.

ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದಾಗಿ ಕಳೆದ ಸಾಲಿನ ಮಳೆಗಾಲದಲ್ಲಿ ಅನೇಕ ರಸ್ತೆಯಲ್ಲಿ ಜನರು ಓಡಾಟ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕೆಲಕಡೆಗಳ ಗಟಾರಗಳು ಮುಚ್ಚಿಹೋಗಿರುವುದರಿಂದ ಅಂಗಡಿ ಮುಂಗಟ್ಟುಗಳಿಗೆ ನೀರೇರಲಾರಂಭಿಸಿದ್ದವು. ಇದರಿಂದ ಬೇಸತ್ತ ಜನತೆ ಆಗಾಗ ರಸ್ತೆ ತಡೆದು, ಪ್ರತಿಭಟನೆ ನಡೆಸಿದ್ದರು. ಇಷ್ಟೆಲ್ಲಾ ಆದರೂ ಸಹ ಪುರಸಭೆ ಇನ್ನೂ ಪಾಠ ಕಲಿತಂತಿಲ್ಲ ಎಂಬುದಕ್ಕೆ ಈ ಸಲದ ಮಳೆಗಾಲವನ್ನು ಎದುರಿಸಲು ಕೈಗೊಂಡಿರದ ಪೂರ್ವ ಸಿದ್ಧತೆಯೇ ಸಾಕ್ಷಿ

ಏನಾಗಬೇಕು: ಮಳೆ ಬೀಳುವ ಮುನ್ನವೇ ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯ ಗಟಾರಗಳಲ್ಲಿನ ಮಣ್ಣು, ಗಿಡ ಹಾಗೂ ಕಸಗಳನ್ನು ಸ್ವಚ್ಛಗೊಳಿಸುವ ಕಾರ್ಯವಾಗಬೇಕು. ಕೆಲಕಡೆಗಳ ಅನಾದಿಕಾಲದ ಗಟಾರಗಳು ಸಂಪೂರ್ಣ ಮುಚ್ಚಿಹೋಗಿವೆ. ಇದರಿಂದಾಗಿ ಮಳೆಗಾಲದಲ್ಲಿ ತ್ಯಾಜ್ಯನೀರು ಕೆಲ ಮನೆ ಹಾಗೂ ಅಂಗಡಿಗಳಿಗೆ ನುಗ್ಗುವ ಭೀತಿ ಎದುರಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಪುನಃ ಗಟಾರವನ್ನು ಕೊರೆಯುವ ಕಾರ್ಯವಾಗಬೇಕು.

Advertisement

ಕಳೆದ ವರ್ಷ ಮಳೆಗಾಲದ ಮುಂಚಿತವಾಗಿ ಪುರಸಭೆಗೆ ಗಟಾರದ ಸಮಸ್ಯೆಯ ಕುರಿತು ತಿಳಿಸಿದ್ದೆವು. ಆದರೆ ಮಳೆ ಬೀಳುವ ಮೊದಲು ಯಾವ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿರಲಿಲ್ಲ. ಇದರಿಂದಾಗಿ ಎರಡು ಮೂರು ಬಾರಿ ನಮ್ಮ ಅಂಗಡಿಯೊಳಗೆ ನೀರು ನುಗ್ಗಿತ್ತು. ಪುರಸಭೆ ಈ ಬಾರಿಯಾದರೂ ಮಳೆ ಬೀಳುವ ಮುನ್ನವೇ ಗಟಾರವನ್ನು ಸ್ವಚ್ಛಗೊಳಿಸಲಿ.
•ಸಂಜಯ ನಾಯ್ಕ, ಗೂಡಂಗಡಿಕಾರ.

„ಕೆ. ದಿನೇಶ ಗಾಂವ್ಕರ

Advertisement

Udayavani is now on Telegram. Click here to join our channel and stay updated with the latest news.

Next