ಹೊಸದಿಲ್ಲಿ: ವಿಶ್ವವಿದ್ಯಾಲಯಗಳಲ್ಲಿ ಸೆ.29 ಅನ್ನು ಸರ್ಜಿಕಲ್ ಸ್ಟ್ರೈಕ್ ದಿನವನ್ನಾಗಿ ಆಚರಿಸಬೇಕೆಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ದೇಶದ ಎಲ್ಲಾ ವಿವಿಗಳಿಗೆ ಹೊರಡಿಸಿರುವ ಸುತ್ತೋಲೆಯ ಹಿಂದೆ ದೇಶಭಕ್ತಿ ಇದೆಯೇ ಹೊರತು ರಾಜಕೀಯ ಉದ್ದೇಶಗಳಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.
ಯುಜಿಸಿ ನಡೆ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿರುವ ಜಾವಡೇಕರ್, “”ಸೇನೆಯ ಸಾಹಸವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲು ಕಾಲೇಜುಗಳಲ್ಲಿ ಎನ್‌ಸಿಸಿಯಿಂದ ಪಥಸಂಚಲನ, ಮಾಜಿ ಸೈನಿಕರಿಂದ ಸಂವಾದ ಏರ್ಪಡಿಸಲು ಸೂಚಿಸಲಾಗಿದೆಯಷ್ಟೇ. ಆದರೆ ಇದು ಕಡ್ಡಾಯವೇನಲ್ಲ” ಎಂದಿದ್ದಾರೆ.
ಆರೋಪಗಳೇನು?: ಯುಜಿಸಿ ನಡೆಯನ್ನು ಆಕ್ಷೇಪಿಸಿದ್ದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, 2016ರಲ್ಲಿ ಕೇಂದ್ರ ಸರಕಾರ ಕೈಗೊಂಡಿದ್ದ ನಗದು ಅಪಮೌಲಿ ಕರಣವನ್ನೂ ಸರ್ಜಿಕಲ್ ಸ್ಟ್ರೈಕ್ ಎಂದು ಆಚರಿಸಲು ಯುಜಿಸಿಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದರು. ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಸೇನೆಯ ಸಾಹಸವನ್ನು ಬಿಜೆಪಿ ರಾಜಕೀಯ ಗೊಳಿಸುತ್ತಿದೆ ಎಂದಿದ್ದರು. ಜತೆಗೆ, ಪ.ಬಂಗಾಳದ ಶೈಕ್ಷಣಿಕ ಸಂಸ್ಥೆಗಳನ್ನು ಈ ದಿನವನ್ನು ಆಚರಿಸುವುದಿಲ್ಲ ಎಂದಿದ್ದರು.
ನಾವು ಆಚರಿಸುತ್ತೇವೆ: ಜೆಎನ್‌ಯು
ಜವಾಹರಲಾಲ್ ನೆಹರೂ ವಿವಿಯಲ್ಲಿ ಸರ್ಜಿಕಲ್ ಸ್ಟ್ರೈಕ್ 2ನೇ ವರ್ಷಾಚರಣೆ ಆಚರಿಸಲಾಗುತ್ತದೆ ಎಂದು ವಿವಿ ಕುಲಪತಿ ಎಂ. ಜಗದೇಶ್ ಕುಮಾರ್ ತಿಳಿಸಿದ್ದಾರೆ. ಗಡಿ ದಾಟಿ, ಶತ್ರು ಪಾಳಯಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಸೈನಿಕರ ಸಾಹಸವನ್ನು ನಾವು ಸ್ಮರಿಸಲೇಬೇಕಿದೆ ಎಂದು ಅವರು ತಿಳಿಸಿದ್ದಾರೆ.