ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ಕಲಾವಿದರ ಸಂಘಗಳಲ್ಲಿ ಏಕೆ ಸಾಹಸ ಸಿಂಹ ವಿಷ್ಣುವರ್ಧನ್ ಕುರಿತು ಅಗೌರವ ಎಂದು ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ ಪ್ರಶ್ನಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಮಾತನಾಡಿದ ಅವರು,”ಇಂಡಸ್ಟ್ರಿಯಲ್ಲಿ ಪದೇ ಪದೇ ವಿಷ್ಣುವರ್ಧನ್ ಅವರಿಗೆ ಅಗೌರವ ತೋರಲಾಗುತ್ತಿದೆ, ವಾಣಿಜ್ಯ ಮಂಡಳಿಯಲ್ಲಿ ಪುತ್ಥಳಿ ಇಡಲ್ಲ ಅಂತಾರೆ, ಕಲಾವಿದರ ಭವನದಲ್ಲಿ ಹೆಸರು ಇಡಲ್ಲ, ಏಕೆ ಈ ರೀತಿ. ರಾಜ್‌ಕುಮಾರ್, ಅಂಬರೀಶ್‌ಗೆ ಸಿಕ್ಕಿರುವ ಗೌರವ ಬಗ್ಗೆ ಖುಷಿ ಇದೆ. ಆದರೆ ವಿಷ್ಣುವರ್ಧನ್ ಅವರಿಗೂ ಆ ಗೌರವ ಸಿಗಬೇಕಲ್ಲವೇ? ಅವರ ಹೆಸರು ಕಲಾವಿದರ ಭವನದಲ್ಲಿ ಇರಬೇಕು ಅಲ್ಲವೇ. ಕಲಾವಿದರ ಸಂಘದ ಆಡಳಿತ ಮಂಡಳಿಗೆ ಹಾಗೂ ಅಧಿಕಾರಿಗಳಿಗೆ ಇದು ಏಕೆ ಕಾಣುತ್ತಿಲ್ಲ ಎಂದಿದ್ದಾರೆ.
ಕಲಾವಿದರ ಭವನಕ್ಕೆ ವಿಷ್ಣುವರ್ಧನ್ ಹೆಸರು ಏಕೆ ಇಟ್ಟಿಲ್ಲ ಎನ್ನುವ ಕುರಿತು ಮಾತನಾಡುವ ಕೆಲವು ಅಧಿಕಾರಿಗಳು ‘ಅವರ ಅಧ್ಯಕರಾಗಿರಲಿಲ್ಲ, ಅದಕ್ಕೆ ಹೆಸರಿಟ್ಟಿಲ್ಲ’ ಅಂತ ಹೇಳಬಹುದು. ಆದರೆ ವಿಷ್ಣು ಅಪ್ಪಾಜಿ ಚಿತ್ರರಂಗದಲ್ಲಿ ನಡೆದಿರುವ ಅನೇಕ ಪ್ರಮುಖ ವಿಷಯಗಳಲ್ಲಿ ನಾಯಕತ್ವ ವಹಿಸಿದ್ದರು. ಸಭೆಗಳಲ್ಲಿ ಅಧ್ಯಕ್ಷತೆ ವಹಿಸಿದ್ದರು, ನಮ್ಮ ಮನೆಯಲ್ಲಿ ಅನೇಕ ಸಭೆಗಳು ನಡೆದಿವೆ. ಫಿಲಂ ಚೇಂಬರ್ ಎದುರು ರಾಜ್ ಕುಮಾರ್ ಪುತ್ಥಳಿ ಇದೆ. ಅಲ್ಲಿ ಅಪ್ಪಾಜಿಯ ಪುತ್ಥಳಿ ಇಡಬೇಕು ಎಂಬ ವಿಚಾರ ಪ್ರಸ್ತಾಪ ಆಗಿತ್ತು. ಆಗಿನ ಫಿಲಂ ಚೇಂಬರ್ ಅಧ್ಯಕ್ಷರು ಅದಕ್ಕೆ ಒಪ್ಪಲಿಲ್ಲ. ಈಗ ವಿಷ್ಣು ಪುತ್ಥಳಿ ಇಟ್ಟರೆ ನಾಳೆ ಇನ್ನೊಬ್ಬರ ಪುತ್ಥಳಿ ಇಡಬೇಕಾಗುತ್ತದೆ ಎಂದಿದ್ದರು. ಆಮೇಲೆ ಅಭಿಮಾನಿಗಳಿಂದ ಸಹಿ ಸಂಗ್ರಹಿಸಿ ಮನವಿ ಕೊಡಿ ಅಂದರು. ನಿಜಕ್ಕೂ ವಿಷ್ಣು ಪುತ್ಥಳಿ ಇಡಲು ಸಹಿ ಸಂಗ್ರಹಿಸುವ ಅಗತ್ಯವಿದೆಯೇ? ಆದರೂ ನಾನು ಸಂಗ್ರಹಿಸಿ ಕೊಟ್ಟೆ. ಯಾವುದೇ ಪ್ರಯೋಜನ ಆಗಿಲ್ಲ ಎಂದಿದ್ದಾರೆ.ಅನಿ
”ಕಲಾವಿದರ ಸಂಘ ನಾಮಫಲಕ ನೋಡಿದಾಗ ರಾಜ್-ಅಂಬಿ ಹೆಸರು ಕಾಣ್ತಿದೆ, ಅಲ್ಲಿ ವಿಷ್ಣು ಹೆಸರು ಏಕಿಲ್ಲ ಎಂದು ಅನಿಸಬಾರದು. ಕಲಾವಿದರ ಸಂಘ ಅಂದ್ಮೇಲೆ ಅಲ್ಲಿ ವಿಷ್ಣುವರ್ಧನ್ ಸಹ ಇದ್ದಾರೆ. ಧೀಮಂತರಿಗೆ ಸಿಕ್ಕಿರುವ ಗೌರವ ವಿಷ್ಣು ಅಪ್ಪಾಜಿಗೂ ಸಿಗಲೇಬೇಕು’ ಎಂದು ನಟ ಅನಿರುದ್ಧ ಆಗ್ರಹಿಸಿದ್ದಾರೆ.