ಲಿಂಗಸುಗೂರು: ಶಾಲಾ ಶುಲ್ಕ ಕಟ್ಟಿಲ್ಲವೆಂಬ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ ಘಟನೆ ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಈ ಶಾಲೆಯಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆ ಫೀ ಕಟ್ಟಿಲ್ಲವೆಂಬ ಕಾರಣಕ್ಕೆ ಶಿಕ್ಷಕರು ಬುಧವಾರ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಕೂರಿಸದೇ ತರಗತಿ ಹೊರಗೆ ಕಳಿಸಿದ್ದಾರೆ.
ಸುದ್ದಿ ತಿಳಿದು ಶಾಲೆಗೆ ದೌಡಾಯಿಸಿದ ಪಾಲಕರು ಶಿಕ್ಷಕರನ್ನು ವಿಚಾರಿಸಿ, ಫೀ ಕಟ್ಟುವಂತೆ ನಮಗೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿಯಾಗಿ ಮಕ್ಕಳನ್ನು ತರಗತಿಯಿಂದ ಹೊರಗಡೆ ಕಳುಹಿಸಿದ್ದು ಸರಿಯಲ್ಲ. ಕೋವಿಡ್ ಹಿನ್ನೆಲೆಯಲ್ಲಿ ತರಗತಿ ನಡೆಸದಿದ್ದರೂ ಆಗ ಫೀ ಕಟ್ಟಿದ್ದೇವೆ. ಆದರೆ ಈಗ ಏಕಾಏಕಿ ಈ ರೀತಿ ಮಾಡುವುದು ಸರಿಯಲ್ಲ. ಒಂದೆಡೆ ಸರ್ಕಾರ ಫೀ ಕಟ್ಟಲು ಒತ್ತಡ ಹಾಕದಂತೆ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದರೂ ಆಡಳಿತ ಮಂಡಳಿಯವರು ಫೀ ವಸೂಲಿ ಮಾಡಲು ನಿರತರಾಗಿದ್ದಾರೆ ಎಂದು ಪೋಷಕ ಚಾಂದ್‌ಪಾಶಾ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ‘ಜನಾಂಗೀಯವಾದಿಯಲ್ಲ’: ಕ್ಷಮೆ ಕೇಳಿದ ಕ್ವಿಂಟನ್ ಡಿ ಕಾಕ್, ಪ್ರಕರಣ ಸುಖಾಂತ್ಯ
ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಫೀ ಕಟ್ಟಲು ಕಾಲಾವಕಾಶ ನೀಡಬೇಕು, ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗಡೆ ಕೂಡಿಸದೇ ಅವರನ್ನು ತರಗತಿಯೊಳಗೆ ಕೂರಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.