Advertisement

3 ತಿಂಗಳಿಂದ ಸರ್ಕಾರಿ ಅಧಿಕಾರಿಗಳಿಗೆ ಬಂದಿಲ್ಲ ಸಂಬಳ

03:17 PM May 22, 2019 | Team Udayavani |

ಕೊಳ್ಳೇಗಾಲ: ಸರ್ಕಾರ ಆಡಳಿತ ನಡೆಸುವ ವೇಳೆ ಎಲ್ಲಾ ಇಲಾಖೆಯ ಸವಲತ್ತುಗಳು ಜನತೆಗೆ ದೊರಕಿಸಿಕೊಡುವ ಸಲುವಾಗಿ ಅಧಿಕಾರಿಗಳನ್ನು ನೇಮಕ ಮಾಡಿ ಅವರ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಸಂಬಳ ಸಾರಿಗೆ ಮತ್ತು ಇನ್ನಿತರ ಭ್ಯತೆವನ್ನು ನೀಡುತ್ತದೆ. ಆದರೆ ನಗರದ ಶಿಶು ಅಭಿವೃದ್ಧಿ ಕಲ್ಯಾಣಾಧಿಕಾರಿಗಳಿಗೆ ಮತ್ತು ಸಿಬ್ಬಂದಿವರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಬರದೆ ಕಚೇರಿಯ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ.

Advertisement

ವಿವಿಧ ಇಲಾಖೆಗಳ ಪೈಕಿ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ಒಂದು ಕೇಂದ್ರ ಸರ್ಕಾರದ ಸಹಾಯೋಗದೊಂದಿಗೆ ಕೆಲಸ ನಿರ್ವಹಿಸುವ ದೊಡ್ಡ ಇಲಾಖೆ ಇದಾಗಿದೆ. ಇಲ್ಲಿ ಕೆಲಸ ಮಾಡುವವರಿಗೆ ಪ್ರತಿ ತಿಂಗಳು ಸಂಬಳವನ್ನು ಸರ್ಕಾರ ನೀಡುತ್ತಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಸಂಬಳ ಇಲ್ಲದೆ ದೈನಂದಿನ ಖರ್ಚು ವೆಚ್ಚಕ್ಕೂ ಕಷ್ಟಪಡುವಂತಹ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಪ್ರತಿಭಟನೆ: ಶಿಶು ಅಬಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರವನ್ನು ಆರಂಭಿಸಲಾಗಿದೆ. ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರ್ಕಾರ ನೇಮಕ ಮಾಡಿ ಅವರಿಗೆ ಇಂತಿಷ್ಟು ಸಂಬಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನೀಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ಜೀವನದ ಭದ್ರತೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಯಂಗೊಳಿಸುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಸಹ ಎರಡು ಸರ್ಕಾರಗಳು ಕೇವಲ ಸಂಬಳವನ್ನು ಹೆಚ್ಚು ಮಾಡಿದರೆ ಹೊರತು ಖಾಯಂಗೆ ಕೈ ಹಾಕಿಲ್ಲ. ಆದರೆ ಹೆಚ್ಚು ಮಾಡಿದ ಸಂಬಳವು ಕೈ ಸೇರದೆ ಇರುವುದು ಸಿಬ್ಬಂದಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಸಿಬ್ಬಂದಿಗಳ ಕೊರತೆ: ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟು 27 ಸದಸ್ಯರ ಪೈಕಿ ಸಿಡಿಪಿಒ ಒಂದು, ಎಸಿಡಿಪಿಒ ಒಂದು, ಎಫ್ಡಿಸಿ ಒಂದು, ಸೂಪರಿವೈಸರ್‌ 2, ಚಾಲಕ -1 ಸೇರಿದಂತೆ ಕೇವಲ 6 ಜನರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು 455, ಸಹಾಯಕಿಯರು 455 ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಹೀಗಾಗಿ ಆದಷ್ಟು ಬೇಗ ಖಾತೆಗೆ ಹಣ ಪಾವತಿಸುವಂತೆ ಒತ್ತಾಯ ಮಾಡಿದ್ದಾರೆ.

ಬಜೆಟ್ ಕೊರತೆ:

ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಸರ್ಕಾರದಿಂದ ಬಜೆಟ್‌ನಂತೆ ಹಣ ಬರದೆ ಇರುವುದರಿಂದ ತೊಂದರೆ ಎದುರಾಗಿದ್ದು, ಬಜೆಟ್ ಹಣ ಬಂದ ಕೂಡಲೇ ಎಲ್ಲಾ ಸಿಬ್ಬಂದಿಗಳಿಗೆ ಮೂರು ತಿಂಗಳ ಸಂಬಳವನ್ನು ವಿತರಣೆ ಮಾಡಲಾಗುವುದೆಂದು ಜಿಲ್ಲಾ ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಬಸವರಾಜು ಹೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next