ಹೊಸದಿಲ್ಲಿ: ದೇಶಾದ್ಯಂತ ಭಾರೀ ವಿವಾದ, ಪ್ರತಿಭಟನೆಗಳಿಗೆ ಕಾರಣವಾಗಿದ್ದ “ಪದ್ಮಾವತಿ’ ಸಿನೆಮಾ ತೆರೆಕಾಣುವ ದಿನ ಸಮೀಪಿಸಿದೆ. ಸಿಬಿಎಫ್ಸಿ ರಚಿಸಿರುವ ವಿಶೇಷ ಸಮಿತಿ ಸಿನೆಮಾದಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿದ್ದು, ಅವು ಅನುಷ್ಠಾನಕ್ಕೆ ಬಂದ ಬಳಿಕ ಚಿತ್ರಕ್ಕೆ ಪ್ರಮಾಣಪತ್ರ ಸಿಗಲಿದೆ. ಆದರೆ, ಪ್ರದರ್ಶನಗೊಳ್ಳುವ ವೇಳೆ ಸಿನೆಮಾದ ಹೆಸರು “ಪದ್ಮಾವತಿ’ಯ ಬದಲಾಗಿ “ಪದ್ಮಾವತ್’ ಎಂದು ಬದಲಾಗಲಿದೆ.
ಹೌದು, ಕೇಂದ್ರೀಯ ಸಿನೆಮಾ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ)ಯ ವಿಶೇಷ ಸಮಿತಿ ಚಿತ್ರದ 5 ದೃಶ್ಯಗಳಲ್ಲಿ ಬದಲಾವಣೆ ಮಾಡುವಂತೆ ಸೂಚಿಸಿದ್ದು, ಸಿನೆಮಾದ ಹೆಸರನ್ನೂ “ಪದ್ಮಾವತ್’ ಎಂದು ಬದಲಾಯಿಸು ವಂತೆ ತಿಳಿಸಿದೆ. ಜತೆಗೆ, ಅದಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗುವುದು ಎಂದು ಸಿಬಿಎಫ್ಸಿ ಹೇಳಿದೆ.
ಪದ್ಮಾವತಿ ಸಿನೆಮಾವು ಭಾಗಶಃ ಐತಿಹಾಸಿಕ ಸತ್ಯಗಳನ್ನು ಆಧರಿಸಿದ್ದು ಎಂದು ನಿರ್ಮಾಪಕರು ತಿಳಿಸಿದ ಕಾರಣ, ಇತಿಹಾಸಕಾರರನ್ನು ಒಳಗೊಂಡ ವಿಶೇಷ ಸಮಿತಿಯನ್ನು ಸಿಬಿಎಫ್ಸಿ ರಚಿಸಿತ್ತು. ಅದರಲ್ಲಿ ಉದಯಪುರದ ಅರವಿಂದ ಸಿಂಗ್, ಡಾ| ಚಂದ್ರಮಣಿ ಸಿಂಗ್ ಹಾಗೂ ಜೈಪುರ ವಿವಿಯ ಪ್ರೊಫೆಸರ್ ಕೆ.ಕೆ. ಸಿಂಗ್ ಇದ್ದರು. ಸಿನೆಮಾದ ಐತಿಹಾಸಿಕ, ಸಾಮಾಜಿಕ-ಸಾಂಸ್ಕೃತಿಕ ಅಂಶಗಳನ್ನು ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿನೆಮಾದ 26 ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ, ಅನಂತರ ಇದನ್ನು ಅಲ್ಲಗಳೆದ ಸಿಬಿಎಫ್ಸಿ ಮುಖ್ಯಸ್ಥ ಪ್ರಸೂನ್ ಜೋಷಿ, “ಕೇವಲ 5 ದೃಶ್ಯ ಗಳಲ್ಲಿ ಬದಲಾವಣೆ ಮಾಡುವಂತೆ ಸೂಚಿಸಲಾಗಿದೆ ಅಷ್ಟೆ. ಯಾವುದೇ ದೃಶ್ಯಕ್ಕೂ ಕತ್ತರಿ ಹಾಕಿಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ. ಜತೆಗೆ ಎಲ್ಲ ಬದಲಾವಣೆಗಳಿಗೆ ಸಿನೆಮಾ ತಂಡವೂ ಒಪ್ಪಿದೆ ಎಂದೂ ಹೇಳಿದ್ದಾರೆ.
ಬದಲಾವಣೆಗಳೇನು?
– ಸಿನೆಮಾದ 5 ದೃಶ್ಯಗಳ ಬದಲಾವಣೆ
– ಸತಿ ಪದ್ಧತಿಯನ್ನು ವೈಭವೀಕರಿಸದಂತೆ ಸೂಚನೆ
– ಘೂಮರ್ ಹಾಡಿನಲ್ಲೂ ಬದಲಾವಣೆ
ವಿವಾದಕ್ಕೆ ಕಾರಣವಾಗಿದ್ದ ಸಿನೆಮಾ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನೆಮಾವನ್ನು ಬರೋಬ್ಬರಿ 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಡಿ. 1ರಂದು ಇದು ದೇಶಾದ್ಯಂತ ತೆರೆ ಕಾಣುವುದರಲ್ಲಿತ್ತು. ಆದರೆ, ಕರ್ಣಿ ಸೇನಾ ಸಹಿತ ರಾಜಸ್ಥಾನದ ಹಲವು ಸಂಘಟನೆಗಳು ಇದರಲ್ಲಿ ಇತಿಹಾಸ ತಿರುಚಲಾಗಿದೆ ಎಂದು ಆರೋಪಿಸಿ, ಪ್ರತಿಭಟನೆ ಆರಂಭಿಸಿದ್ದವು. ಜತೆಗೆ, ಸಿನೆಮಾ ಪ್ರದರ್ಶನಕ್ಕೂ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದವು. ನಟಿಸಿದ ಕಲಾವಿದರು ಹಾಗೂ ನಿರ್ದೇಶಕ ರಿಗೂ ಬೆದರಿಕೆಗಳು ಬಂದಿದ್ದವು. ಪ್ರತಿಭಟನೆಗಳು ದೇಶಾದ್ಯಂತ ವ್ಯಾಪಿಸಿದ ಬಳಿಕ, ಸಿಬಿಎಫ್ಸಿ ಕೂಡ ಪ್ರಮಾಣಪತ್ರ ನೀಡಲು ವಿಶೇಷ ಸಮಿತಿ ರಚಿಸಿತ್ತು.