Advertisement

ವೈದ್ಯ ಕ್ಷೇತ್ರಕ್ಕಷ್ಟೇ ಅಲ್ಲ, ಸಮಾಜ ಸೇವೆಗೂ ಹಿರಿಮೆ ತಂದವರು

06:00 AM Jul 01, 2018 | |

ಕಾಪು: ಜಗತ್ತೇ ಅಂಗೈಲಿ ಸಿಗುವಂಥ ಅವಕಾಶವಿದ್ದರೂ ಅದನ್ನು ನಿರಾಕರಿಸಿ ಹುಟ್ಟೂರಿನಲ್ಲೇ ನೆಲೆಗೊಳ್ಳುವ ಪ್ರಸಂಗ ತೀರಾ ಕಡಿಮೆ. ಆದರೆ ಇಲ್ಲಿಯ ಡಾ| ಪ್ರಭಾಕರ ಶೆಟ್ಟಿ ವೈದ್ಯ ಪದವಿ ಪಡೆದ ಮೇಲೆ ಎಲ್ಲೂ ಹೋಗದೇ ಇಲ್ಲೇ ನಿಂತು ಜನರ ಸೇವೆಯಲ್ಲಿ ತೊಡಗಿದವರು. ಗ್ರಾಮೀಣ ಪ್ರದೇಶವಾದ ಕಾಪು ಸುತ್ತಮುತ್ತಲಿನಲ್ಲಿ 51 ವರ್ಷಗಳಿಂದ ವೈದ್ಯರಾಗಿ ದುಡಿಯುತ್ತಿರುವುದಲ್ಲದೆ ಸಮಾಜ ಸೇವೆ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿಕ ಪರಿವಾರದಲ್ಲಿ ಜನಿಸಿದ ಅವರು 1965ರಲ್ಲಿ ಮೈಸೂರು ಮೆಡಿಕಲ್‌ ಕಾಲೇಜ್‌ನಲ್ಲಿ ಎಂ.ಬಿ.ಬಿ.ಎಸ್‌. ಮುಗಿಸಿ ವೈದ್ಯರಾದರು. ಅಂದಿನ ದಿನಗಳಲ್ಲಿ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಅವಕಾಶಗಳಿದ್ದರೂ ತಮ್ಮ ಹೆತ್ತವರ ಮನದಿಚ್ಛೆಯಂತೆ ಹುಟ್ಟೂರಿನಲ್ಲೇ ನೆಲೆಯಾದರು.

Advertisement

ಪ್ರವೃತ್ತಿಯಲ್ಲಿ ಸಮಾಜ ಸೇವೆ
ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಸಮಾಜ ಸೇವೆಯಲ್ಲಿ. 1997ರಲ್ಲಿ ಪ್ರಾರಂಭಗೊಂಡ ಸ್ಥಳೀಯ ಲಯನ್ಸ್‌ ಕ್ಲಬ್‌ನ ಸ್ಥಾಪಕ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ, 3 ವರ್ಷಗಳ ಕಾಲ ಕ್ಯಾಬಿನೆಟ್‌ ಸದಸ್ಯರಾಗಿ ಸೇವೆ ಸಲ್ಲಿಸಿದವರು ಡಾ| ಪ್ರಭಾಕರ ಶೆಟ್ಟರು. ಎಂಆರ್‌ಪಿಎಲ್‌ ಗದ್ದಲದ ಸಂದರ್ಭ ಕೋಮು ಸಂಘರ್ಷಕ್ಕೆ ತುತ್ತಾಗಿದ್ದ ಕಾಪುವಿನಲ್ಲಿ ಶಾಂತಿ ಪರಿಪಾಲನಾ ಸಮಿತಿಯ ಅಧ್ಯಕ್ಷರಾಗಿ ಅವರು ಕರ್ತವ್ಯ ನಿರ್ವಹಿಸಿದ ರೀತಿ ಇಂದಿಗೂ ಸ್ಮರಣೀಯ. ಯೂತ್‌ ರೆಡ್‌ ಕ್ರಾಸ್‌, ಉಡುಪಿ – ಕರಾವಳಿ ಐ.ಎಂ.ಎ.,  ಉಡುಪಿ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಸ್ಥಾಪಕ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಅದಮಾರು ಪಿಯು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದಲ್ಲದೆ ನಿರಂತರ 18 ವರ್ಷ ವಿದ್ಯಾ ಸಂಸ್ಥೆಯ ಏಳಿಗೆಗಾಗಿ ನಿರಂತರ ಶ್ರಮಿಸಿದ್ದಾರೆ.

ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಹೊಣೆ ನಿರ್ವಹಿಸಿದ್ದಾರೆ. ಶತಮಾನೋತ್ಸವವನ್ನು ಆಚರಿಸಿದ ದಂಡ ತೀರ್ಥ ಹಿರಿಯ ಪ್ರಾಥಮಿಕ ಶಾಲೆ, ದಂಡ ತೀರ್ಥ ಆಂಗ್ಲ ಮಾಧ್ಯಮ ಶಾಲೆ, ಪ. ಪೂ. ಕಾಲೇಜಿನ ಸಂಚಾಲಕರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶೆಟ್ಟರು, ಸಂಸ್ಥೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ದ್ದಾರೆ. ಪ್ರತೀ ವರ್ಷ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ 8 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಪುತ್ರ ಡಾ| ಪ್ರಶಾಂತ್‌ ಶೆಟ್ಟಿಯವರ ಮೂಲಕ ಪ್ರಾರಂಭಗೊಂಡ ಪ್ರಶಾಂತ್‌ ಪ್ಯಾರಾ ಮೆಡಿಕಲ್‌ ಕಾಲೇಜಿನ ಸ್ಥಾಪನೆಗೂ ಕಾರಣರಾದವರು. 

ಮಂಗಳೂರು ಬಂಟರ ಮಾತೃ ಸಂಘದಿಂದ ಚಿನ್ನದ ಪದಕ, ಲಯನ್ಸ್‌ ಸೇವಾ ಪುರಸ್ಕಾರ, ಗ್ರಾಮೀಣ ಸೇವೆಗಾಗಿ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌, ಸಿಂಡಿಕೇಟ್‌ ಬ್ಯಾಂಕ್‌, ರೋಟರಿ ಕ್ಲಬ್‌ ಸಹಭಾಗಿತ್ವದ ಹೊಸ ವರ್ಷದ ಸಾಧನಾ ಪ್ರಶಸ್ತಿ, ಕರ್ನಾಟಕ ಸ್ಟೇಟ್‌ ಮೆಡಿಕಲ್‌ ಅಸೋಸಿಯೇಶನ್‌ ಸಮ್ಮಾನ, ಶೀರೂರು ಮಠ ದಿಂದ ಶ್ರೀಕೃಷ್ಣ ವಿಠಲ ಪರಮಾನುಗ್ರಹ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಮೊದಲಾದ ಗೌರವ ಪ್ರಶಸ್ತಿಗಳಿಗೆ ಭಾಜನರು.

ಯಾವ ಸೌಲಭ್ಯವಿಲ್ಲದ ಹೊತ್ತು
ಹೆರಿಗೆ ನೋವು ಅನುಭವಿಸುತ್ತಿರುವ ಗರ್ಭಿಣಿಯರು ಅಥವಾ ರೋಗಿಗಳಿಗೆ ಚಿಕಿತ್ಸೆ ಕೊಡಲು ವೈದ್ಯರು ಕಾಲ್ನಡಿಗೆಯಲ್ಲೇ ಮನೆಗೆ ತೆರಳ ಬೇಕಿತ್ತು. ರಾತ್ರಿಯಾದರೆ ಒಂದು ಟಾರ್ಚ್‌, ಮಳೆಯಾದರೆ ಒಂದು ಕೊಡೆಯಷ್ಟೇ ಜತೆಗೆ. ಅದರಲ್ಲೂ ಮನೆಗಳಲ್ಲೇ ಹೆರಿಗೆ ಮಾಡಿಸು ವುದೆಂದರೆ ಬಹಳ ಕಷ್ಟ. ಒಳಗೆ ಕತ್ತಲೆ ಕೋಣೆಯಲ್ಲಿ ಗರ್ಭಿಣಿ ಪಕ್ಕದಲ್ಲಿ ಒಂದು ಮಣೆಯ ಮೇಲೆ ಕುಳಿತು ಚಿಮಿಣಿ ದೀಪದ ಬೆಳಕಿನಲ್ಲಿ ಹೆರಿಗೆಯನ್ನು ಮಾಡಿಸಬೇಕಿತ್ತು. ಸಹಾಯಕ್ಕಾಗಿ ಯಾವ ನರ್ಸುಗಳೂ ಇರ ಲಿಲ್ಲ. ಪ್ರಸವಕ್ಕೆ ಸಮಯ ತೆಗೆದುಕೊಂಡರೆ ಕಾಯುತ್ತಾ ಕುಳಿತುಕೊಳ್ಳಬೇಕಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಡಾ| ಪ್ರಭಾಕರ ಶೆಟ್ಟಿ. 

Advertisement

ಒಂದು ಘಟನೆ-ಮಹತ್ವದ ನಿರ್ಧಾರ 
1967ರಲ್ಲಿ ಕೆ.ಎಂ.ಸಿ.ಯವರು ಕಾಪುವಿನಲ್ಲಿ ಸ್ಥಾಪಿಸಿದ ಹೆರಿಗೆ ಆಸ್ಪತ್ರೆಯಲ್ಲಿ ಗೌರವ ವೈದ್ಯಾಧಿಕಾರಿಯಾಗಿದ್ದಾಗ ಸಾವು – ಬದುಕಿನ ಮಧ್ಯೆ ಹೋರಾಡುತ್ತಿದ್ದ ತಾಯಿ-ಮಗಳ ಜೀವವನ್ನು ಉಳಿಸಿದ್ದು ತನ್ನ ಸೇವಾ ಜೀವನದ ಅವಿಸ್ಮರಣೀಯ ಘಟನೆ. ಅದೇ ಸಂಗತಿ 1985ರಲ್ಲಿ ಕೊಪ್ಪಲಂಗಡಿಯಲ್ಲಿ ಪ್ರಶಾಂತ್‌ ಆಸ್ಪತ್ರೆಯನ್ನು ಸ್ಥಾಪಿಸಿ ಜನರ ಸೇವೆ ಮಾಡಲು ಪ್ರೇರಣೆ ನೀಡಿತು.                            
ಡಾ| ಪ್ರಭಾಕರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next