ದಾವಣಗೆರೆ: ಕಾಂಗ್ರೆಸ್‌ಮುಕ್ತ ಕರ್ನಾಟಕಕ್ಕೆ ಕಾಂಗ್ರೆಸ್‌ನವರೇ ಸಾಕು. ಬೇರೆಯವರು ಬೇಕಾಗಿಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಕಾಂಗ್ರೆಸ್‌ಮುಕ್ತ ಭಾರತದಂತೆ ಕಾಂಗ್ರೆಸ್‌ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಬೇರೆಯವರು ಬೇಕಾಗಿಯೇ ಇಲ್ಲ.
ಆ ಕೆಲಸವನ್ನೆಲ್ಲಾ ಆ ಪಕ್ಷದವರೇ ಮಾಡಲಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರುವ ಬಗ್ಗೆ ನಾನು ಹೇಳಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರು ಉಡಾಫೆ ಮಾಡಿದ್ದರು. ಈಗ ನಾನು ಹೇಳಿದ ಮಾತುಗಳು ಸತ್ಯವಾಗುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಹಗರಣಗಳಿಂದ ನಲುಗುತ್ತಿದೆ. ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ನಂಜನಗೂಡು, ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆ ನಡೆದೇ ನಡೆಯುತ್ತದೆ. ಕಾಂಗ್ರೆಸ್‌ನ ಇನ್ನೂ ಅನೇಕ ಅತಿರಥ ಮಹಾರಥರು ಬಿಜೆಪಿ ಸೇರಲಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಖಾಲಿಯಾಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್‌ಗೆ ಇಲ್ಲದಂತಾಗುತ್ತದೆ. ಉತ್ತರ ಪ್ರದೇಶ, ಉತ್ತರಾಖಂಡ್ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷದಂತಾಗಿದೆ ಎಂದು ಲೇವಡಿ ಮಾಡಿದರು. ಉಪ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರುತ್ತಿದ್ದಂತಹ ಇಚ್ಚಾಶಕ್ತಿ ಎಲ್ಲಿಗೆ ಹೋಯಿತುಎಂದು ಪ್ರಶ್ನಿಸುವಂತಾಗಿದೆ.
ಅವರಿಗೆ ನಿಜವಾಗಿ ರೈತರು, ಜನರ ಬಗ್ಗೆ ಕಾಳಜಿಯಿದ್ದಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವ ರೀತಿ ಅತ್ಯಂತ ಖಂಡನೀಯ.
ರೋಲೆಕ್ಸ್ ವಾಚ್ ಒಳಗೊಂಡಂತೆ ಅನೇಕ ಹಗರಣ ದಲ್ಲಿ ಭಾಗಿಯಾಗಿರುವ ಇಬ್ರಾಹಿಂ ಮಾತೆತ್ತಿದರೆ ವಚನ ಹೇಳುವುದು ಭೂತದ ಬಾಯಲ್ಲಿ ಭಗವದೀತೆ ಎನ್ನುವಂತಾಗಿದೆ. ತಿರಸ್ಕೃತ ನಾಣ್ಯ, ಮಾನಸಿಕ ಅಸ್ವಸ್ಥ ಇಬ್ರಾಹಿಂಗೆ ಮೋದಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ ಎಂದು ಟೀಕಿಸಿದರು. ಕೂಲಂಬಿ ಬಸವರಾಜ್, ಕಿಟ್ಟಿ ಮುರಾರಿ, ಚೋರಡಿ ಶಿವು, ಜುಟ್ಟುರವಿ, ರಾಜು ಇತರರಿದ್ದರು.