Advertisement

Parameshwar: ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌

11:43 PM Oct 14, 2024 | Team Udayavani |

ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ಪಡೆದಿರುವ ಸರಕಾರದ ನಿರ್ಧಾರಕ್ಕೆ ವಿಪಕ್ಷಗಳಿಂದ ವ್ಯಾಪಕ ವಿರೋಧದ ನಡುವೆಯೂ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಗೃಹಸಚಿವ ಡಾ| ಜಿ. ಪರಮೇಶ್ವರ್‌, ಬಿಜೆಪಿಯವರು ಆಡಳಿತದಲ್ಲಿದ್ದಾಗಲೂ ಇಂತಹ ಸಾಕಷ್ಟು ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಅಷ್ಟೇ ಯಾಕೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಇದನ್ನು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್‌ ತೆಗೆದುಕೊಳ್ಳುವ ಸಂಬಂಧ ಮನವಿ ಸಲ್ಲಿಕೆಯಾಗಿದ್ದು, ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಪ್ರಕರಣಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಅಷ್ಟೊಂದು ಜನರ ಮೇಲೆ ಕೇಸ್‌ ದಾಖಲಿಸುವ ಅಗತ್ಯ ಇಲ್ಲ ಎಂಬುದು ಚರ್ಚೆಯಾಗಿದೆ. ಕಾನೂನಿನ ಚೌಕಟ್ಟಿನಲ್ಲೇ ಪ್ರಕರಣವನ್ನು ಹಿಂಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಮುಂದೆ 56 ಪ್ರಕರಣಗಳು ಬಂದಿದ್ದವು. 43 ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಇದರಲ್ಲಿ ಬರೀ ಅಲ್ಪಸಂಖ್ಯಾಕರಿಗೆ ಸೇರಿದ ಪ್ರಕರಣಗಳಿವೆಯೇ? ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರತಿಭಟನೆ ಮಾಡಿರುವ ಪ್ರಕರಣಗಳೂ ಇವೆ. ಅವೆಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿದ್ದರೆ ಅಥವಾ 43 ಪ್ರಕರಣಗಳು ಅಲ್ಪಸಂಖ್ಯಾಕರಿಗೆ ಸೇರಿರುವ ಪ್ರಕರಣಗಳಾಗಿದ್ದರೆ ಬಿಜೆಪಿಯವರ ಆರೋಪವನ್ನು ಒಪ್ಪಿಕೊಳ್ಳಬಹುದಿತ್ತು. ಆ ರೀತಿ ಮಾಡಲು ಬರುವುದಿಲ್ಲ. ಎಲ್ಲವನ್ನೂ ಸಮಾನ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next