Advertisement

ಬ್ರಹ್ಮಪುತ್ರಾ ಮೇಲೆ ಹಕ್ಕಿಲ್ಲ ; ಚೀನಕ್ಕೆ ನೇರ ಆಘಾತ ಕೊಟ್ಟ ಅಮೆರಿಕ

11:48 PM Dec 28, 2020 | mahesh |

ವಾಷಿಂಗ್ಟನ್‌: ಟಿಬೆಟನ್ನು ಇಡಿಯಾಗಿ ನುಂಗಿ, ಗಡಿಭಾಗದ ನದಿಗಳಿಗೆ ಅಕ್ರಮ ಅಣೆಕಟ್ಟು ಕಟ್ಟಿ, ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಕಿರಿಕಿರಿ ಉಂಟುಮಾಡುತ್ತಿದ್ದ ಚೀನಕ್ಕೆ ಅಮೆರಿಕವು ಮರ್ಮಾಘಾತ ನೀಡಿದೆ. ಟಿಬೆಟ್‌ನ ಪರಿಸರವನ್ನು ಹಾಳುಗೆಡವಿ, ನದಿಗಳನ್ನು ದುರ್ಬಳಕೆ ಮಾಡುವ ಹಕ್ಕು ಚೀನಕ್ಕೆ ಇಲ್ಲ ಎಂದು ಅಮೆರಿಕದ ನೂತನ ಕಾಯ್ದೆ ಕಟ್ಟಪ್ಪಣೆ ಹೊರಡಿಸಿದೆ. ಆಡಳಿತದ ಕೊನೆಗಾಲದಲ್ಲೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನದ ಎದೆ ಝಲ್ಲೆನ್ನಿಸುವಂಥ ಮಹತ್ವದ ಕಾಯ್ದೆಗೆ ಅಂಕಿತ ಹಾಕಿದ್ದಾರೆ. ಇದರಿಂದ ಬಹುತೇಕ ಪ್ರಯೋಜನ ಭಾರತಕ್ಕೆ ಲಭಿಸಲಿದೆ.

Advertisement

ಏನು ಲಾಭ?
“ಟಿಬೆಟ್‌ ನೀತಿ ಮತ್ತು ಬೆಂಬಲ ಕಾಯ್ದೆ- 2020 (ಟಿಪಿಸಿಎ)’, ಟಿಬೆಟ್‌ನ ಪರಿಸರ ಮತ್ತು ಜಲಸಂಪನ್ಮೂಲಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಿದೆ. ಟಿಬೆಟ್‌ ನದಿಗಳ ಮೇಲೆ ಚೀನಕ್ಕೆ ಹಕ್ಕುಗಳಿಲ್ಲ ಎಂದಿರುವ ಕಾಯ್ದೆ, ಟಿಬೆಟ್‌ನ ಪರಿಸರ ಸಂರಕ್ಷಣೆ’ಗೂ ಆದ್ಯತೆ ಕಲ್ಪಿಸಿದೆ.

ಜಲಸಂಪನ್ಮೂಲ ಬಳಸುವಂತಿಲ್ಲ!
ಟೆಬೆಟ್‌ನಲ್ಲಿ ಹುಟ್ಟುವ ಬ್ರಹ್ಮಪುತ್ರಾ ಸಹಿತ ಯಾವುದೇ ನದಿಯ ಮೇಲೆ ಚೀನ ಹಕ್ಕು ಸ್ಥಾಪಿಸುವಂತಿಲ್ಲ. ಪ್ರಸ್ಥಭೂಮಿಯ ಜಲಸಂಪನ್ಮೂಲಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವಂತಿಲ್ಲ ಎಂದೂ ಟಿಪಿಸಿಎ ಪ್ರತಿಪಾದಿಸಿದೆ. ಟಿಬೆಟ್‌ನಲ್ಲಿ ಜನ್ಮತಾಳಿ ಭಾರತದತ್ತ ಹರಿಯುವ ಬ್ರಹ್ಮಪುತ್ರಾ ನದಿಗೆ ಚೀನ ಇತ್ತೀಚೆಗಷ್ಟೇ ಅಣೆಕಟ್ಟು ಕಟ್ಟಲು ಆರಂಭಿಸಿತ್ತು.

ದಲಾೖಲಾಮಾ ಆಯ್ಕೆ ಕನಸು ಛಿದ್ರ!
14ನೇ ದಲಾೖಲಾಮಾಗೆ ಉತ್ತರಾಧಿಕಾರಿ ನೇಮಿಸಲು ಹೊರಟಿದ್ದ ಚೀನದ ಅಧಿಕಾರವನ್ನೇ ಟಿಪಿಸಿಎ ಕಾಯ್ದೆ ಪ್ರಶ್ನಿಸಿದೆ. ಈ ವಿಚಾರದಲ್ಲಿ ಅದು ಹಸ್ತಕ್ಷೇಪ ಮಾಡುವಂತಿಲ್ಲ. ಅದು ಟಿಬೆಟಿಯನ್‌ ಬೌದ್ಧ ಸಮುದಾಯದ ಆಂತರಿಕ ವಿಚಾರ ಎಂದು ನೂತನ ಕಾಯ್ದೆ ಹೇಳಿದೆ.

ಟಿಬೆಟ್‌ಗೆ ಅಮೆರಿಕ ಅಧಿಕೃತ ಪ್ರವೇಶ!
ಇದುವರೆಗೆ ಟಿಬೆಟ್‌ನಲ್ಲಿ ಯಾವುದೇ ದೇಶದ ರಾಯಭಾರ ಕಚೇರಿ ತೆರೆಯಲು ಚೀನ ಬಿಟ್ಟಿರಲಿಲ್ಲ. ನೂತನ ಕಾಯ್ದೆಯು ಟಿಬೆಟ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಹೊಂದಲಿದೆ ಎಂದು ಉಲ್ಲೇಖೀಸಿದೆ. ಲ್ಹಾಸಾದಲ್ಲಿ ಅಮೆರಿಕದ ಕಚೇರಿ ತೆರೆಯುವ ವರೆಗೂ ಅಮೆರಿಕದಲ್ಲಿ ಚೀನದ ಹೊಸ ರಾಯಭಾರ ಕಚೇರಿ ತೆರೆಯಲು ಅನುಮತಿ ನೀಡುವಂತಿಲ್ಲ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next