Advertisement

ಮುದುಕರಿಗಿದು ಕಾಲವಲ್ಲ ! 

06:40 AM Aug 13, 2017 | Team Udayavani |

ಹಿರಿಯರು ಎಂಬುದನ್ನು ಶಾಸನ ಸಭೆಗಳು ನಿರ್ಧರಿಸುತ್ತವೆ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗುವವರೆಗೂ ಹಿರಿಯರು ಎಂದರೆ ಅವರಿಗೆ ಐವತ್ತೈದು ವರುಷ ಆದರೆ ಸಾಕಿತ್ತು. ಹೆಗಡೆಯವರು ಇನ್ನೂ ಮೂರು ವರುಷ ಏರಿಸಿ “ಐವತ್ತೆಂಟಕ್ಕೆ ನೀವು ಹಿರಿಯರು’ ಎಂದರು. ನಂತರ ಬಂದವರು ಅರವತ್ತು ವರ್ಷ ಆದವರು ಹಿರಿಯರು-ಸೀನಿಯರ್‌ ಸಿಟಜನ್‌ ಎಂದರು.

Advertisement

ಇದರ ಮೊದಲ ಅರ್ಥ ನೀವು ಕೆಲಸಕ್ಕೆ ನಾಲಾಯಕ್ಕು, ಸಾಕು ನಿಮ್ಮ ಸೇವೆ, ಹೊರಗಡೆ ನ‌ಡೆಯಿರಿ. ನಿಮ್ಮ ಬೆವರು ಬೇಡ. ವೈದ್ಯರಿಗೆ ನೀವು ಕೊಡುವ ರಕ್ತ ಬೇಡ. ಇದ್ದಕ್ಕಿದ್ದಂತೆ ಹಿರಿಯರ ಸಂಬಳ ಅರ್ಧಕ್ಕಿಂತಲೂ ಕಡಿಮೆ ಬಂದು ಬಿಡುತ್ತೆ. ಎಲ್ಲದಕ್ಕಿಂತ ಮುಖ್ಯವಾಗಿ ಜನರೊಂದಿಗೆ ಬೆರೆಯುವ, ಬದುಕುವ, ಹಾಸ್ಯ ಮಾಡುವ, ಜಗಳ ಮಾಡುವ, ಕಷ್ಟ-ಸುಖ ಹಂಚಿಕೊಳ್ಳುವ, ಜೊತೆಗೆ ಒಂದು ಶಿಸ್ತಿನ ಜೀವನ- ಬೇಗ ಎದ್ದು ತಯಾರಾಗಿ, ಕೆಲಸಕ್ಕೆ ಸಿದ್ಧತೆ ಮಾಡಿಕೊಂಡು ಹೋಗುವ, ಒಂದು ನಿಗದಿತ ಬದುಕಿಗೆ ಅದು ತೆರೆ ಎಳೆಯುತ್ತದೆ. ಆರೋಗ್ಯದಿಂದಿರುವ ಚಟುವಟಿಕೆಯ ಬದುಕಿನ ಜನರಿಗೆ ಹಿರಿಯರು, ಸೀನಿಯರ್‌ ಸಿಟಿಜನ್‌ ಎಂಬ ಪದವಿ ಶಾಪವಾಗುತ್ತದೆ. ಹೇಳುವುದು ಹಿರಿಯರು, ಆದರೆ ವಾಸ್ತವದಲ್ಲಿ ಅಂದರೆ ಮುದುಕರು. ಮುದುಕರಿಗಿದು ಕಾಲವಲ್ಲ.

ನಂತರ ಮನೆಯೇ ಎಲ್ಲವೂ. ಕಾರ್ಯಕ್ಷೇತ್ರವೂ ಅದೇ, ಪುಣ್ಯಕ್ಷೇತ್ರವೂ ಅದೇ. ಎಷ್ಟು ಹೊತ್ತಿಗೆ ಎದ್ದರೂ ಆಗುತ್ತದೆ. ಹಾಜರಿಗೆ ಸಹಿ ಹಾಕಬೇಕೆಂದಿಲ್ಲ, ಬೆರಳು ಒತ್ತಬೇಕೆಂದಿಲ್ಲ. ಯಾವ ಬಟ್ಟೆಯೂ ನಡೆಯುತ್ತದೆ. ಇಸ್ತ್ರಿ ಹಾಕಬೇಕೆಂದಿಲ್ಲ. ಮೊದಲಾಗಿದ್ದರೆ ಯಾವ ಯಾವ ಪ್ಯಾಂಟಿಗೆ ಯಾವ ಯಾವ ಅಂಗಿ ಮ್ಯಾಚಾಗುತ್ತೆ ಎಂದು ಸುಮಾರು ಹೊತ್ತು ಹುಡುಕಾಡಿ, ಒಮ್ಮೊಮ್ಮೆ ಹಾಕಿ, ತೆಗೆದು ಅದು ಗುಂಡಿ ಸರಿಯಿಲ್ಲ, ಇಸಿŒ ಆಗಿಲ್ಲ, ಕೊಳೆಯಾಗಿದೆ. ಏನೇನೋ ಸಬೂಬು ಹೇಳುವ ಅಗತ್ಯ ಇಲ್ಲ.

ಅದೆಲ್ಲಾ ಈಗ ಮಗನಿಗೆ ವರ್ಗವಾಗಿದೆ. ಮೊದಲಾಗಿದ್ದರೆ ಸಭೆ-ಸಮಾರಂಭ, ನಾಟಕ-ಪಾಟಕ ಅಂತ ಸಮಯವೇ ಸಾಕಾಗುತ್ತಿರಲಿಲ್ಲ. ಈಗ ಸಮಯವನ್ನು ಕೊಲ್ಲುವ ಬಗೆ… ವಾಕ್‌ ಮಾಡಬಹುದು. “”ಅಪ್ಪ ಅಂಗಳದಲ್ಲೇ ವಾಕ್‌ ಮಾಡಿ. ಹೊರಗಡೆ ವಾಕ್‌ ಮಾಡುತ್ತ¤, ಆಕಾಶ ನೋಡುತ್ತ ನಿಮ್ಮ ಭಾವಾಲೋಕದಲ್ಲಿ ವಿಹರಿಸಿದರೆ ಯಾರಾದರೂ ಗಾಡಿಯಲ್ಲಿ ಬಂದು ಹೆಟ್ಟುತ್ತಾರೆ. ಗಾಡಿ ಹೆಟ್ಟಲಿಕ್ಕೆ ಸೀನಿಯರ್‌ ಸಿಟಿಜನ್‌ ಅಂತ ವಿನಾಯ್ತಿ ಇಲ್ಲ. ಕೊನೆಗೆ ಆಸ್ಪತ್ರೆ ತಿರುಗಬೇಕಾದೀತು…” ಮಗನ ವಾರ್ನಿಂಗ್‌. ಒಮ್ಮೆ ಖುಷಿ ಆಗುತ್ತದೆ ಅವನ cಟncಛಿrn ನೋಡಿ. ನಂತರ ಫ‌ಕ್ಕನೆ ಈ ಮಗ ಹೇಳಿದ್ದು ನನ್ನ ಯೋಗಕ್ಷೇಮಕ್ಕೋ ಅಥವಾ ತಾನು ಆಸ್ಪತ್ರೆ ತಿರುಗಬೇಕಾದೀತು ಎನ್ನುವುದಕ್ಕೋ… ನನಗೆ ನಾನೇ ನೆಗೆಟಿವ್‌ ಆಗಿ ಬಿಟ್ಟಿದ್ದೇನೆಯೆ? 

ಮುದುಕರಿಗಿದು ಕಾಲವಲ್ಲ ! 
ಮುದುಕರಿಗೆ ಗೆಳೆಯರು ಅಂದರೆ ಮಕ್ಕಳು, ಮೊಮ್ಮಕ್ಕಳು. ಮೊಮ್ಮಗ ಬರುವುದನ್ನೇ- ಶಾಲೆಯಿಂದ ಎಷ್ಟು ಬೇಗ ಬರುತ್ತಾನೆಂದು ಕಾಯುತ್ತಿರುತ್ತೇನೆ. ರಿಕ್ಷಾ ಬಂದು ನಿಂತಿದ್ದೇ ತಡ ನಾನು ಕಾತರದಿಂದ ಓಡಿ ಅವನ ಕೈಚೀಲ, ನೀರಿನ ಬಾಟ್ಲು, ತಿಂಡಿಯ ಕ್ಯಾನ್‌ ಹಿಡಿದುಕೊಳ್ಳುತ್ತೇನೆ. ಮೊಮ್ಮಗ ಹಾಗೇ ಇದ್ದಾನೆ- ನನ್ನ ಮಗನ ಥರವೇ. ಅವನಿಗೆ ಟಿ.ವಿ. ಹಾಕುವ ಅವಸರ, ತಾಯಿಗೆ ತಿಂಡಿ ನೀಡುವ ಅವಸರ, ನನಗೆ ಅವನೊಡನೆ ಲಲ್ಲೆ ಹೊಡೆಯುವ ಅವಸರ. ಅವನನ್ನು ತೊಡೆಯ ಮೇಲೆ ಕೂರಿಸಿಕೊಂಡು ಕಾಗೆ-ಗುಬ್ಬಿಯ ಕಥೆ, ರಾಜ-ರಾಣಿಯರ ಕಥೆ, ಏಳು ಸಮುದ್ರದ ರಾಕ್ಷಸನನ್ನು ಕೊಂದ ಕಥೆ… ಮಗು ಕಣ್ಣು, ಕಿವಿ, ಬಾಯಿ ಅಗಲ ಮಾಡಿಕೊಂಡು ಕೇಳುತ್ತದೆ. ಎಷ್ಟು ಆನಂದ, ಹಿಗ್ಗು. ಕಣ್ಣಿನಲ್ಲಿ ಫ‌ಳಫ‌ಳ ಬೆಳಕು. ಆದರೆ ಅದೂ ನಿಂತು ಹೋಗುತ್ತದೆ. ಸೊಸೆ ಹಾರಿ ಬರುತ್ತಾಳೆ- “”ಮಾವ, ನೀವು ಹಳೆಯ ಕಾಲದವರು. ಈಗಿನ ಮಕ್ಕಳಿಗೆ ತುಂಬಾ ಹೋಮ್‌ವರ್ಕ್‌ ಇರುತ್ತದೆ. ನೀವು ನಿಮ್ಮ ಕಾಲದ ಮಗ್ಗಿ, ಮಾಸ, ಸಂವತ್ಸರ, ರಾಶಿ ಹೇಳುತ್ತಾ ಕುಳಿತುಕೊಂಡರೆ ಆಯಿತು ನಮ್ಮ ಮಕ್ಕಳು ಕೊನೆಗೆ ದಂಡಪಿಂಡಗಳಾಗಿ ಬಿಡುತ್ತವೆ…”

Advertisement

ಮುದುಕರಿಗಿದು ಕಾಲವಲ್ಲ!
ಮಗು ಮುಖ ಸಪ್ಪಗೆ ಮಾಡಿಕೊಂಡು ನನ್ನನ್ನೇ ನೋಡುತ್ತ ಹೋಗುತ್ತದೆ. “ಟ್ವಿಂಕಲ್‌ ಟ್ವಿಂಕಲ್‌ ಲಿಟ್ಲ ಸ್ಟಾರ್‌’ ಎಂದು ಕಿರುಚತೊಡಗುತ್ತದೆ.
ಹೌದಲ್ಲ ಅಂತ ನನಗೂ ಅನ್ನಿಸಿಬಿಡುತ್ತದೆ. ಇದು ಸ್ಪರ್ಧಾ ಯುಗ. This is an age of competation… ಸೊಸೆ ಹೇಳುವುದರಲ್ಲಿ ಸತ್ಯ ಇರಬಹುದೆ? ಇಷ್ಟೆಲ್ಲಾ ಓದನ್ನು ಓದಿಸಿ ನಾವು ಮಕ್ಕಳ ಬಾಲ್ಯವನ್ನು, ಬಾಲ್ಯದ ಸಹಜತೆಯನ್ನು, ಸ್ವತ್ಛಂದತೆಯನ್ನು, ಕಾಮನಬಿಲ್ಲನ್ನು ನೋಡುವ ಅವರ ಕುತೂಹಲದ ಕಣ್ಣುಗಳನ್ನು ಕೊಂದುಬಿಟ್ಟಿದ್ದೇವೆಯೆ? ಮಕ್ಕಳ ಬಾಲ್ಯವನ್ನು ಕೊಂದ ಅಪರಾಧಕ್ಕೆ ಶಿಕ್ಷೆ ಇಲ್ಲವೇ… Human rights commission ಗೆ ಬರೆದರೆ…

ಸಾಕು, ಸಾಕು ಬರೆದು ಬರೆದು ನೀವು ಲೋಕೋದ್ಧಾರ ಮಾಡಿದ್ದು ಸಾಕು. ಕಂಡ ಕಂಡ ಉಸಾಬರಿಯನ್ನು ಮೈಗೆ ಎಳೆದುಕೊಳ್ಳುವಷ್ಟು ವಯಸ್ಸಲ್ಲ. ನಿಮಗೆ ನೆನಪಿರಲಿ. “ಕಾಡು ಬಾ ಎನ್ನುತ್ತೆ ಊರು ಹೋಗು ಎನ್ನುತ್ತೆ¤’ ಇನ್ನಾದರೂ ಬುದ್ಧಿ ಬರಲಿ. ರಸ್ತೆ ಸರಿಯಿಲ್ಲ, ನೀರು ಬರೋಲ್ಲ, ವಿದ್ಯುತ್‌ ಸಿಗಲ್ಲ. ಎಷ್ಟು ಸಾರ್ವಜನಿಕ ಮೊಕದ್ದಮೆ ಹೂಡಿದಿರಿ, ಏನಾಯ್ತು… ಏನಾಯ್ತುರೀ… ಒಲೆ ಹತ್ತಿ ಉರಿದರೆ ನಿಲಬಹುದಲ್ಲದೇ ಧರೆ ಹೊತ್ತಿ ಉರಿದರೆ… ಆಕೆ ನನ್ನ ಹೆಂಡತಿ. ನನ್ನ ಜೊತೆಯಲ್ಲಿ ಏಗಿದವಳು. ಕೂಗುತ್ತಾಳೆ. ಕೂಗುತ್ತಾ ಕೂಗುತ್ತಾ ಅಳುತ್ತಾಳೆ. ಅಳುತ್ತಾ ಅಳುತ್ತಾ, “ನೀವೆಲ್ಲದನ್ನು ದೂರ ಇಟ್ಟರೆ ಕೊನೆಗೆ ನಮ್ಮ ಹೆಣ ಹೊರಲಿಕ್ಕೆ ನಾಲ್ಕು ಇನ ಇರಲ್ಲ…’

ಬದುಕುವುದು ಎಷ್ಟು ಕಷ್ಟವಪ್ಪ. ಆದರೆ ಸಾಯಲಾರೆ. ನನಗೆ ಈ ಚಟ ನೆನಪಾದ್ದು ರಿಟೈರ್‌ ಆದ ಮೇಲೆ. ಅದು ನಶ್ಯ ಸೇದುವ ಚಟ. ಮನುಷ್ಯರಿಗೆ ಒಂದು ಅಮಲಿನ ಪದಾರ್ಥ ಬೇಕು. ಪುಡಿ… ಸಣ್ಣ ಪೇಪರ್‌ನಲ್ಲಿ ಕಟ್ಟಿ ತರುತ್ತಿದ್ದೆ. ಅಮಲಿಲ್ಲದೇ ಯಾರೂ ಬದುಕಲಾರು. ಅಧಿಕಾರ, ಸಂಪತ್ತು, ಖ್ಯಾತಿ, ಜನಪ್ರಿಯತೆ, ಸನ್ಮಾನ ಇವೆಲ್ಲವೂ ಅಮಲಿನ ಭಾಗಗಳೇ. ಕೆಲಸ ಮಾಡುವ ಅಮಲು, ಕೆಲಸ ಪಡೆಯುವ ಅಮಲು… ಒಂದೇ ಎರಡೇ. “ಏನು ರಾಯರು ಹೊಸ ಚಟ ಅಂಟಿಸಿಕೊಂಡಂತೆ ಕಾಣುತ್ತದೆ’ ಹೆಂಡತಿ ಹೇಳಿದಾಗ, “ಹೌದು…’ ಎಂದೆ. ಆಕೆ ಸುಮ್ಮನಾದಳು. ಆದರೆ ಉಪದ್ವಾಪ ಶುರುವಾದದ್ದು ನಂತರದ ದಿನಗಳಲ್ಲೇ. ನಶ್ಯ ಹಾಕಿ, ಸೀನು ಬಂದು, ಕಪ್ಪುಗೆ ನೆಗಡಿ ಬೇಸಿನ್‌ಗೆ ಬಿದ್ದಾಗ ಸೊಸೆ ಹಾವು ಕಂಡಂತೆ ಹೌಹಾರಿ ಬಿಟ್ಟಳು. “ನನ್ನ ಕೈಯ್ಯಲ್ಲಿ ವಾಶ್‌ಬೇಸಿನ್‌ ಕ್ಲೀನ್‌ ಮಾಡೋಕೆ ಆಗಲ್ಲ. ಎಷ್ಟು ಅನಾಗರಿಕರಪ್ಪ’. ಮಗ ಹತ್ತಿರ ಬಂದು, “ಏನಪ್ಪ ಇದೆಲ್ಲಾ’ ಎಂದ. ಆತ ಏನೂ ಹೇಳಲಿಲ್ಲ. ಆದರೆ, ಹೇಳಬೇಕಾದ್ದನ್ನು ಅವನ ಕಣ್ಣು ಹೇಳಿತ್ತು. ನಾಗರೀಕತೆಯ ಬಗ್ಗೆ ನನಗೇ ಪಾಠ ಹೇಳುತ್ತಾರೆ. ಮೂವತ್ತನಾಲ್ಕು ವರುಷ ಸಮಾಜಶಾಸ್ತ್ರ ಪಾಠ ಮಾಡಿದವನ ಹತ್ತಿರ. ಅಯ್ಯೋ, ಸಿಟ್ಟು ಮಾಡಿಕೊಳ್ಳಲೂ ಆಗುತ್ತಿಲ್ಲವಲ್ಲ. ಸಿಟ್ಟು ಬಂದರೆ ಮೈಯೆಲ್ಲಾ ಥರಥರ ನಡುಗುತ್ತದೆ. ಸುಮ್ಮನೆ ಬೆಪ್ಪಾಗಿ ಕುಳಿತುಬಿಡುತ್ತೇನೆ.

ಮುದುಕರಿಗಿದು ಕಾಲವಲ್ಲ !
ಏನೂ ಮಾಡುವಂತಿಲ್ಲ-  ಹೊರಗಡೆ ಹೋಗುವಂತಿಲ್ಲ- ಟಿವಿ ನೋಡಿದರೆ ಕಣ್ಣು ಹೋಗುತ್ತದೆ, ಮಂಜಾಗುತ್ತದೆ ನೋಡಬೇಡಿ- ಮೊಮ್ಮಕ್ಕಳ ಜೊತೆಗೆ ಮಾತನಾಡಬೇಡಿ, ಅವರ ಭವಿಷ್ಯ ಹಾಳಾಗುತ್ತದೆ- ಹೊರಗಡೆ ಲೈಟ್‌ಬಿಲ್ಲು ಕಟ್ಟುತ್ತೇನೆಂದು ಹೋಗಬೇಡಿ, ಅಪಘಾತವಾಗುತ್ತದೆ- ನೀರು ಕುಡಿಯಬೇಡಿ ಥಂಡಿಯಾಗುತ್ತದೆ. ಜಾಸ್ತಿ ಕುಡಿದರೆ… ವಯಸ್ಸಾದವರಿಗೆ ಈಪ್ತಾಸ್ಟೇಟ್‌ ಸಮಸ್ಯೆ. ರಾತ್ರಿ ಮೂರು ನಾಲ್ಕು ಸರ್ತಿ ಏಳಬೇಕು… ರಾತ್ರಿ ಏಳುವುದೆಂದರೆ ದೀಪ ಹಾಕುವುದು, ಬಾಗಿಲು ತೆಗೆಯುವುದು, ಬಾಗಿಲು ತೆಗೆದರೆ ಶಬ್ದ, ಎಲ್ಲೋ ಎಡವಿ ಏನೋ ಬೀಳುವುದು. ತಕರಾರು ಶುರು. ಸೊಸೆಯ ಆರ್ಭಟದ ಗುರಿ ನಾನಾದರೂ ಮಾರ್ಗ ಗಂಡನಿಗೆ. “ರಾತ್ರಿ ಯಾಕ್ರೀ ಏಳುತ್ತೀರಿ. ನನಗೆ ನಿದ್ರೆ ಡಿಸ್ಟರ್ಬ್ ಆಗುತ್ತದೆ. ಮತ್ತೆ ಎಚ್ಚರಾದರೆ ನಿದ್ರೆ ಬರಲ್ಲ. ರಾತ್ರಿ ಇಡೀ ಹೊರಳಾಡುತ್ತೇನೆ. ಸಂಜೆ ಆದ ಮೇಲೆ ನೀರು ಕುಡಿಯಬೇಡಿ. ಹೀಗೆ ಆದರೆ ರಾತ್ರಿ ನಿದ್ರೆ ಇಲ್ಲದಿದ್ದರೆ ನನಗೆ ಹುಚ್ಚು ಹಿಡಿಯುತ್ತೆ’. ಎಲ್ಲೋ ಪಾಠ ಹೇಳುವಾಗ ಹೇಳಿದ ಫ್ರೆಂಚ್‌ ಫಿಲಾಸಫ‌ರ್‌ ರೊಸೋ ಮಾತು- ಸ್ವತಂತ್ರವಾಗಿ ಹುಟ್ಟಿದ್ದೇವೆ. ಆದರೆ ಎಷ್ಟೊಂದು ಸರಪಳಿಗಳಲ್ಲಿ ನಮ್ಮನ್ನು ಹೆಡೆಮುರಿ ಕಟ್ಟಲಾಗಿದೆ.

ಮುದುಕರಿಗಿದು ಕಾಲವಲ್ಲ…!
ಇನ್ನು ಉಳಿದಿರುವುದು ಒಂದೇ. ಓದುವ ಆನಂದ. pleasure of reading… ಇಷ್ಟು ವರುಷ ಸಂಗ್ರಹಿಸಿದ ಎಲ್ಲಾ ಪುಸ್ತಕಗಳು, ಉಡುಗೊರೆಯಾಗಿ ಬಂದ ಕೃತಿಗಳನ್ನು ನಿಧಾನವಾಗಿ ಓದಿ ಆನಂದಿಸುವುದು, ಸ್ವತ್ಛಂದವಾಗಿ ನನ್ನ ಭಾವಲೋಕದಲ್ಲಿ ವಿಹರಿಸುವುದು, ದುಃಖವಾದಾಗ ಕಣ್ಣೀರು ಹರಿಸುವುದು, ಆನಂದವಾದಾಗ ಹಿಗ್ಗುವುದು. ಹಾಗೇ ಓದುತ್ತ¤… ನನ್ನ ಎದೆಯ ಮೇಲೆ ಪುಸ್ತಕ ಇಟ್ಟುಕೊಂಡು ಓದುತ್ತಾ ಓದುತ್ತ… 
ಟೀಪಾಯಿ ಮೇಲೆ ನನ್ನ ಹೆಸರಿಗೆ ಒಂದು ಆಹ್ವಾನ ಪತ್ರಿಕೆ ಇದೆಯಲ್ಲ… ಈಗ ಯಾರು ನನ್ನನ್ನು ನೆನಪಿಸಿಕೊಳ್ಳುವವರು… ಗೆಳೆಯರೇ, ಓದುಗರೇ, ಸಂಬಂಧಿಕರೇ, ವಿದ್ಯಾರ್ಥಿಗಳೇ…

ನಿಧಾನವಾಗಿ ಲಕೋಟೆ ತೆಗೆದು ನೋಡಿದೆ. ಓಹ್‌! ಕನ್ನಡಕ ಹಾಕಿಕೊಂಡಿಲ್ಲ. ಜೇಬಿನಿಂದ  ಕನ್ನಡಕ ತೆಗೆದುಕೊಂಡು, ಹಾಕಿ ಕಣ್ಣರಳಿಸಿ ಓದಿದೆ. ಮುದ್ದಾಗಿ ಬರೆದಿತ್ತು…  
“ವೃದ್ಧಾಶ್ರಮ’ದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ.

ಜಯಪ್ರಕಾಶ್‌ ಮಾವಿನಕುಳಿ

Advertisement

Udayavani is now on Telegram. Click here to join our channel and stay updated with the latest news.

Next