Advertisement

ಮೈಸೂರಲ್ಲಿ ಸಾಮಾಜಿಕ ಅಂತರ ಮರೀಚಿಕೆ

04:20 PM May 07, 2020 | mahesh |

ಮೈಸೂರು: ಕೇಂದ್ರ ಸರ್ಕಾರ ಕೆಲ ಸಡಿಲಿಕೆಯೊಂದಿಗೆ ಜಾರಿ ಮಾಡಿರುವ 3ನೇ ಹಂತದ ಲಾಕ್‌ಡೌನ್‌ ಜಿಲ್ಲೆಯಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ. ಸಡಿಲಿಕೆಯನ್ನೇ ದುರ್ಬಳಕೆ
ಮಾಡಿಕೊಳ್ಳುತ್ತಿರುವ ಸಾರ್ವಜನಿಕರು ಬೇಕಾಬಿಟ್ಟಿ ಓಡಾಡುತ್ತಿರುವುದಲ್ಲದೇ ಗುಂಪು ಸೇರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಮೇ 4ರಿಂದ ಜಾರಿಯಾಗಿರುವ ಮೂರನೇ ಹಂತದ ಲಾಕ್‌ಡೌನ್‌ಗೆ ಸಾರ್ವಜನಿಕರು ಕವಡೇ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ನಗರದಲ್ಲಿ ಲಾಕ್‌ ಡೌನ್‌ ಸಡಿಲಗೊಳಿಸಿ ರುವುದರಿಂದ ಸಾಮಾನ್ಯ ದಿನಗಳಂತೆಯೇ ಗುಂಪು ಗುಂಪಾಗಿ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳ ಮುಂದೆ ಸೇರುತ್ತಿದ್ದಾರೆ. ದೇವರಾಜ ಮಾರುಕಟ್ಟೆಯ ಸುತ್ತಮುತ್ತ ಹಬ್ಬದ ಸಂದರ್ಭದಲ್ಲಿ ವ್ಯಾಪಾರಕ್ಕೆ ಬರುವಂತೆ ಸೇರತೊಡಗಿದ್ದಾರೆ. ಇದರಿಂದ ಸೋಂಕು ಮುಕ್ತವಾಗಿರುತ್ತಿರುವ ಮೈಸೂರಿಗೆ ಮತ್ತೆ ಹರಡುವ ಭೀತಿ ಎದುರಾಗಿದೆ.

ಬೇಕಾಬಿಟ್ಟಿ ತಿರುಗಾಟ: ಲಾಕ್‌ಡೌನ್‌ ಸಡಿಲಕ್ಕೂ ಮುನ್ನ ಒಬ್ಬೊಬ್ಬರೇ ಬೈಕ್‌ನಲ್ಲಿ ಬರುತ್ತಿದ್ದ ಜನ ಈಗ ಒಂದೇ ಬೈಕ್‌ನಲ್ಲಿ ಇಬ್ಬರು, ಮೂವರಂತೆ ಸಂಚರಿಸುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಮಾರೀಚಿಕೆಯಾಗಿದೆ. ಮಾರುಕಟ್ಟೆಯಲ್ಲಿ ಗುಂಪಾಗಿ ನಿಂತು ವ್ಯಾಪಾರ ಮಾಡುತ್ತಿದ್ದು, ಬೇಕಾಬಿಟ್ಟಿ ತಿರುಗಾಡಲಾರಂಭಿಸಿದ್ದಾರೆ. ಈ ಸಂದರ್ಭ ಬಳಸಿಕೊಂಡು ಗೆಳೆಯರ ಮನೆ, ಬಂಧುಗಳ ಮನೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಸರ್ಕಾರ ಜಿಲ್ಲೆಯಿಂದ  ಜಿಲ್ಲೆಗೆ ತೆರಳುವವರಿಗೆ ಅನುಮತಿ ನೀಡಿರುವುದರಿಂದ ನೆರೆಯ ಜಿಲ್ಲೆಗಳಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗಿರುವುದು ಜಿಲ್ಲೆಯ ಜನರು, ಅಧಿಕಾರಿಗಳಲ್ಲಿ ಆತಂಕ ಹೆಚ್ಚಿಸಿದೆ. ಬೇರೆ ಜಿಲ್ಲೆಯಿಂದ ಬರುವವರ ಆರೋಗ್ಯ ತಪಾಸಣೆ, ಶಂಕಿತರನ್ನು ಕ್ವಾರಂಟೈನ್‌ ಮಾಡುವುದು ಸೇರಿದಂತೆ ಹಲವು ಮುಂಜಾಗ್ರತ ಕ್ರಮ ಕೈಗೊಳ್ಳುವುದು ಸವಾಲಾಗಿದೆ.

ಮದ್ಯದ ಅಂಗಡಿ ಮುಂದೆ ಜನ ಸಾಲುಗಟ್ಟಿ ನಿಲ್ಲುವುದು ಕಡಿಮೆಯಾಗಿದೆ. ಮಾರುಕಟ್ಟೆ ಯಲ್ಲಿ ಇತರೆ ವ್ಯಾಪಾರಕ್ಕಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ವಾಣಿಜ್ಯ ರಸ್ತೆಗಳಲ್ಲಿ ಅಗತ್ಯ
ವಸ್ತುಗಳ ಅಂಗಡಿ ತೆರೆಯಲು ಅವಕಾಶ ನೀಡಿದ್ದರೂ, ಅನೇಕರು ಫ್ಯಾನ್ಸಿ ಸ್ಟೋರ್‌, ಬಟ್ಟೆ ಅಂಗಡಿ ತೆರೆದ ಘಟನೆ ನಡೆದಿದೆ. ಪೊಲೀಸರು ಮಾಲೀಕರಿಗೆ ತಿಳಿವಳಿಕೆ ನೀಡಿ ಅಂಗಡಿ ಮುಚ್ಚಿಸುವ ಕೆಲಸವೂ ನಡೆಯುತ್ತಿದೆ.

ಕದ್ದುಮುಚ್ಚಿ ಸಂಚಾರ: ನಗರ ಪೊಲೀಸರು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ಖರೀದಿ, ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ಅನಗತ್ಯ ಸಂಚಾರಕ್ಕೆ ನಿರ್ಬಂಧ,
ಸಂಜೆ 7ರಿಂದ ಬೆಳಗ್ಗೆ 7 ಗಂಟೆವರೆಗೆ ವೈದ್ಯಕೀಯ ಸೇವೆಗೆ ಮಾತ್ರ ಸಂಚರಿಸಬೇಕು ಎಂಬ ನಿಯಮ ರೂಪಿಸಿದ್ದರೂ, ಮಧ್ಯಾಹ್ನ 12 ಗಂಟೆ ನಂತರವೂ ಕದ್ದುಮುಚ್ಚಿ ಗಲ್ಲಿಗಲ್ಲಿಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲೇ ರಾಜಾರೋಷವಾಗಿ ಓಡಾಡುವುದು ಸಾಮಾನ್ಯವಾಗಿದೆ.

Advertisement

ಹೊರಗಿನವರಿಂದ ಸೋಂಕಿನ ಆತಂಕ
1 ಹಂತದವರೆಗೆ ಸೋಂಕನ್ನು ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ ತಡೆದಿದ್ದಾರೆ. ಬೆಂಗಳೂರು ನಗರದೊಡನೆ ಸ್ಪರ್ಧೆಗಿಳಿದು ರಾಜ್ಯದಲ್ಲಿ ನಂ.1 ಸ್ಥಾನಕ್ಕೂ ಏರಿದ್ದ ಮೈಸೂರು ಈಗ ಕೇವಲ 8 ಮಂದಿ ಸೋಂಕಿತರು ಇದ್ದಾರೆ. 90 ಮಂದಿ ಸೋಂಕಿತರ ಪೈಕಿ 82 ಮಂದಿ ಗುಣಮುಖರಾಗಿದ್ದಾರೆ. 72 ವರ್ಷದ ವೃದ್ಧ, 2 ವರ್ಷದ ಮಗು ಸೇರಿ ಯಾರೊಬ್ಬರ
ಜೀವಕ್ಕೂ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗಿದೆ. ಕೆಂಪು ವಲಯದಲ್ಲಿರುವ ಮೈಸೂರಲ್ಲಿ ಇನ್ನೇಳು ದಿನ ಸೋಂಕು ಪತ್ತೆಯಾಗದಿದ್ದರೆ ಕಿತ್ತಳೆ ವಲಯಕ್ಕೆ ಬರಲಿದೆ. ಆದರೆ ಹೊರಗಿನಿಂದ ಬಂದವರಿಂದ ಹೊಸ ಪ್ರಕರಣ ಪತ್ತೆಯಾದರೆ ಮತ್ತೆ ಕೆಂಪು ವಲಯ ಮುಂದುವರಿಯಲಿದೆ ಎಂಬ ಆತಂಕವಿದೆ. ಸ್ಥಳೀಯರು ಈಗ ಎಚ್ಚರ ತಪ್ಪಿರುವುದೂ ದೊಡ್ಡ ತಲೆನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next