Advertisement

ಮತ್ತೆ ಮೂರಕ್ಕೆ ಅಂಟಲಿದೆಯೇ ಬರ?

05:20 PM Sep 21, 2018 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಸುಮಾರು ಎರಡು ತಿಂಗಳಿಂದ ಧಾರಾಕಾರ ಮಳೆ ಸುರಿದು ಹತ್ತೂ ತಾಲೂಕಿನ ಮುಂಗಾರು ಬೆಳೆಗೆ ಜೀವ ಬಂತು ಎನ್ನುವಷ್ಟರಲ್ಲಿಯೇ ಜಿಲ್ಲೆಯ ಎರಡು ತಾಲೂಕುಗಳು ಬರದ ಹಿಡಿತಕ್ಕೆ ಸಿಕ್ಕಿದ್ದು, ಇನ್ನೂ ಮೂರು ತಾಲೂಕಿನಲ್ಲಿ ಬೆಳೆ ಹಾನಿಯಾಗಿರುವ ಸಾಧ್ಯತೆ ಕಂಡು ಬಂದಿದ್ದರಿಂದ ಸರ್ಕಾರ ಜಂಟಿ ಸಮೀಕ್ಷೆ ನಡೆಸಲು ಮುಂದಾಗಿದೆ.

Advertisement

ರಾಜ್ಯದ 86 ತಾಲೂಕುಗಳ ಪೈಕಿ ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಬರದ ಹೊಡೆತದಿಂದ ತಾಲೂಕುಗಳು ಮುಕ್ತವಾಗಿಲ್ಲ. ಈ ಬಗ್ಗೆ ಜಂಟಿ ಸಮೀಕ್ಷೆ ಮೂಲಕ ಸಮಗ್ರ ವರದಿ ಕಳುಹಿಸಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಾಥಮಿಕ ಹಂತದಲ್ಲಿ ಆಗಸ್ಟ್‌ ತಿಂಗಳಲ್ಲಿ ಸಮೀಕ್ಷೆ ನಡೆಸಿದಾಗ ರಾಮದುರ್ಗದಲ್ಲಿ 23,362 ಹೆಕ್ಟೇರ್‌ ಪ್ರದೇಶ ಹಾಗೂ ಸವದತ್ತಿಯ 12,084 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ನಂತರದಲ್ಲಿ ಸಮಗ್ರ ಸಮೀಕ್ಷೆ ಮಾಡಿದ ಬಳಿಕ ಈ ಎರಡೂ ತಾಲೂಕು ಸೇರಿ 35,446 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗಿತ್ತು. ಈಗ ಮತ್ತೆ ಪುನರ್‌ ಪರಿಶೀಲಿಸಿ ನೋಟ್‌ ಕ್ಯಾಮ್‌ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಿದ ಬಳಿಕ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿರುವುದು ಕಂಡು ಬರಲಿದೆ.

ಮಳೆ ಕೊರತೆಯಿಂದಾಗಿ ಅಥಣಿ, ರಾಯಬಾಗ ಹಾಗೂ ಬೈಲಹೊಂಗಲ ತಾಲೂಕಿನಲ್ಲೂ ಕೆಲ ಬೆಳೆಗಳು ಹಾನಿಯಾಗಿರುವ ಲಕ್ಷಣಗಳು ಕಂಡು ಬಂದಿವೆ. ಮೇಲ್ನೋಟಕ್ಕೆ ಹಾನಿ ಆಧರಿಸಿ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಅಥಣಿಯಲ್ಲಿ ತೊಗರಿ, ಬೈಲಹೊಂಗಲದಲ್ಲಿ ಹತ್ತಿ ಹಾಗೂ ರಾಯಬಾಗದಲ್ಲಿ ಮೆಕ್ಕೆಜೋಳ ಬೆಳೆ ಬಾಡುತ್ತಿವೆ. ಮಳೆ ಇನ್ನಷ್ಟು ಆದರೆ ಇಲ್ಲಿಯ ಬೆಳೆಗಳು ಒಣಗುತ್ತಿರಲಿಲ್ಲ. ಜಂಟಿ ಸಮೀಕ್ಷೆ ಮೂಲಕ ಈ ತಾಲೂಕುಗಳೂ ಬರದ ಪಟ್ಟಿ ಕಟ್ಟಿಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಬಂಪರ್‌ ಬೆಳೆಯೂ ಉಂಟು: ಮಳೆ ಚೆನ್ನಾಗಿ ಸುರಿದಿದ್ದರಿಂದ ಹುಕ್ಕೇರಿ ತಾಲೂಕಿನಲ್ಲಿ ಬಂಪರ್‌ ಬೆಳೆ ಬಂದಿದ್ದು, ರೈತರ ಆತಂಕ ದೂರವಾಗಿದೆ. ಜತೆಗೆ ಚಿಕ್ಕೋಡಿ, ಬೈಲಹೊಂಗಲದಲ್ಲೂ ಮುಂಗಾರು ಬೆಳೆಗಳಾದ ಸೋಯಾ, ಅವರೆ ಚೆನ್ನಾಗಿ ಬಂದಿವೆ. ಕೆಲವು ಕಡೆ ರಾಶಿ ಆಗಿ ಕಟಾವು ಹಂತಕ್ಕೆ ಬಂದಿವೆ. ಖಾನಾಪುರ ಹಾಗೂ ಬೆಳಗಾವಿ ತಾಲೂಕಿನಲ್ಲಿ ಭತ್ತ ಫಲವತ್ತಾಗಿ ಬೆಳೆದಿದೆ. ಸವದತ್ತಿ ತಾಲೂಕಿನಲ್ಲಿ ಉದ್ದು, ಹೆಸರು ಚೆನ್ನಾಗಿ ಬಂದಿದ್ದರಿಂದ ಬಹುತೇಕ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

Advertisement

ಮಳೆ ಬಂದ್ರೆ ಬಚಾವ್‌: ಜಿಲ್ಲೆಯಲ್ಲಿ ಹಿಂಗಾರು ಬೆಳೆಗಳಿಗೂ ಮಳೆ ಅಗತ್ಯವಿದ್ದು, ಇಲ್ಲದಿದ್ದರೆ ಹಿಂಗಾರು ಬೆಳೆ ಸಂಪೂರ್ಣವಾಗಿ ನೆಲಕಚ್ಚುವ ಸಾಧ್ಯತೆ ಇದೆ. ಅ.1ರಿಂದ ಹಿಂಗಾರಿ ಬಿತ್ತನೆ ಶುರುವಾಗುತ್ತದೆ. ಹಿಂಗಾರಿಗೆ ತೇವಾಂಶ ಇಲ್ಲವಾಗಿದ್ದು, ಸದ್ಯ ಮಳೆ ಅಗತ್ಯ ಇರುವುದರಿಂದ ರೈತರು ನಿರಾತಂಕವಾಗಿ ಹಿಂಗಾರು ಬೆಳೆದು ಇಳುವರಿ ಪಡೆದುಕೊಳ್ಳಬಹುದಾಗಿದೆ. ಕೆಲವು ಕಡೆ ತೊಗರಿ ಹಾಗೂ ಹತ್ತಿ ಹೂ ಆಡುವ ಹಂತದಿಂದ ಕಾಯಿಯಾಗುವ ಹಂತಕ್ಕೂ ಬಂದಿವೆ. ಈ ವಾರ ಮಳೆ ಸುರಿದರೆ ಬೆಳೆ ಕೈಗೆ ಸಿಗುತ್ತದೆ. ಇಲ್ಲದಿದ್ದರೆ ಈ ಬೆಳೆಗಳು ಕೈ ಕೊಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕಳೆದ ಸಲ 5.92 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಈ ಬಾರಿ 6.79 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಂಡಿದ್ದರ ಪೈಕಿ ಈಗಾಗಲೇ ಶೇ. 6.73 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಶೇ. 99ರಷ್ಟು ಗುರಿ ಸಾಧಿಸಿದಂತಾಗಿದೆ.

ಜಂಟಿ ಸಮೀಕ್ಷೆ ಹೇಗೆ?
ಈಗಾಗಲೇ ಕೃಷಿ ಇಲಾಖೆ ಪ್ರಾಥಮಿಕ ಹಂತದಲ್ಲಿ ಬೆಳೆ ಸಮೀಕ್ಷೆ ನಡೆಸಿದ್ದು, ಈಗ ಮತ್ತೂಮ್ಮೆ ಬೆಳೆ ಸಮೀಕ್ಷೆ ನಡೆಸಲು ಮುಂದಾಗಿದೆ. ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಯೊಂದಿಗೆ ಸೇರಿ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಸೆಪ್ಟೆಂಬರ್‌ ಮಾಸಾಂತ್ಯದೊಳಗೆ ಸಮೀಕ್ಷೆ ಮುಗಿಸಿ ಸರಕಾರಕ್ಕೆ ವರದಿ ಕಳುಹಿಸಲಿದೆ. ನಾಲ್ಕು ತಂಡಗಳನ್ನು ರಚಿಸಿ ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಶೆ. 10ರಷ್ಟು ಹಳ್ಳಿಗಳನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಕನಿಷ್ಟ 5 ಫೋಟೊಗಳನ್ನು ಪಡೆಯಲಾಗುತ್ತದೆ.

ನೋಟ್‌ ಆ್ಯಪ್‌ದಿಂದ ಸಮೀಕ್ಷೆ
ಜಿಲ್ಲೆಯಲ್ಲಿ ಬೆಳೆ ಹಾನಿ ಪತ್ತೆ ಹಚ್ಚಲು ಕೃಷಿ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು, ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ನೋಟ್‌ ಕ್ಯಾಮ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ಸಮೀಕ್ಷೆ ನಡೆಸಲಿದೆ. ಈ ಆ್ಯಪ್‌ದಿಂದ ಅಕ್ಷಾಂಶ, ರೇಖಾಂಶ ಎಲ್ಲವೂ ನಮೂದಾಗುತ್ತ¨ದೆ. ರೈತರ ಹೆಸರು, ಸಮೀಕ್ಷೆ ನಡೆಸಿದ ದಿನಾಂಕ, ಸಮಯ, ಹವಾಮಾನ ವರದಿ ಹೀಗೆ ಎಲ್ಲವೂ ಉಲ್ಲೇಖವಾಗುತ್ತದೆ. ಇದರಿಂದ ಸಮೀಕ್ಷೆಯ ಪ್ರಸೆಂಟೇಷನ್‌ ಮಾಡುವಾಗಲೂ ಅನುಕೂಲವಾಗುತ್ತದೆ.

ರಾಜ್ಯದ 86 ತಾಲೂಕುಗಳ ಬರ ಪಟ್ಟಿಯಲ್ಲಿ ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳು ಬರ ಪೀಡಿತವಾಗಿರುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಮತ್ತೆ ಇನ್ನುಳಿದ ಅಥಣಿ, ರಾಯಬಾಗ ಹಾಗೂ ಸವದತ್ತಿ ತಾಲೂಕುಗಳಲ್ಲಿ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ ಮಾಸಾಂತ್ಯದೊಳಗೆ ಮುಗಿಸಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿ ಸಿದ್ಧಪಡಿಸಲಾಗುವುದು.
  . ಜೀಲಾನಿ ಎಚ್‌. ಮೊಕಾಶಿ, 
  ಜಂಟಿ ನಿರ್ದೇಶಕರು, ಕೃಷಿ ಇಲಾಖೆ 

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next