ಹೊಸದಿಲ್ಲಿ : ಕ್ಯಾಸ್ಟಿಂಗ್ ಕೌಚ್ (ಹಾಸಿಗೆ ಸುಖ ನೀಡಿ ಅವಕಾಶ ಪಡೆಯುವ) ಸಂಸ್ಕೃತಿ ಕೇವಲ ಸಿನೆಮಾ ರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಸಂಸತ್ತನ್ನು ಕೂಡ ಬಾಧಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹೇಳಿದ್ದಾರೆ.
ಸಿನೇಮಾ ತಾರಾಗಣದಲ್ಲಿ ಅವಕಾಶ ಪಡೆಯಲು ಹುಡುಗಿಯರು ಹಾಸಿಗೆ ಸುಖ ನೀಡುವ ಸಂಸ್ಕೃತಿಯೇ ಕ್ಯಾಸ್ಟಿಂಗ್ ಕೌಚ್ ಆಗಿ ಕುಖ್ಯಾತಿ ಪಡೆದಿದೆ. ಈ ಪಿಡುಗು ಈಗ ಸಂಸತ್ತನ್ನೂ ಕಾಡುತ್ತಿದೆ ಎಂದು ರೇಣುಕಾ ಚೌಧರಿ ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸಿನೇಮಾ ರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಸಂಸ್ಕೃತಿಯು ಜೀವನೋಪಾಯವಾಗಿದೆ ಎಂದು ಪ್ರಖ್ಯಾತ ಕೋರಿಯೋಗ್ರಾಫರ್ ಸರೋಜ್ ಖಾನ್ ಹೇಳಿದ ಕೆಲವೇ ತಾಸುಗಳ ಒಳಗೆ ರೇಣುಕಾ ಚೌಧರಿ ಅವರಿಂದ ಈ ವಿವಾದಾತ್ಮಾಕ ಹೇಳಿಕೆ ಬಂದಿದೆ.
“ಕ್ಯಾಸ್ಟಿಂಗ್ ಕೌಚ್ ಸಂಸ್ಕೃತಿ ಕೇವಲ ಸಿನೇಮಾ ರಂಗಕ್ಕೆ ಸೀಮಿತವಾಗಿಲ್ಲ; ಅದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇದೆ ಎನ್ನುವುದು ಕಹಿ ಸತ್ಯ. ಪಾರ್ಲಿಮೆಂಟ್ ಅಥವಾ ಇತರ ಕಾರ್ಯಸ್ಥಳಗಳು ಇದರಿಂದ ಮುಕ್ತವಾಗಿವೆ ಎಂದು ಯಾರೂ ಭಾವಿಸಬೇಕಾಗಿಲ್ಲ; ಇದೊಂದು ಕಹಿಯಾದ ಸತ್ಯ’ ಎಂದು ರೇಣುಕಾ ಚೌಧರಿ ಹೇಳಿದರು.
ಚೌಧರಿ ಅವರು ಈ ಸಂದರ್ಭದಲ್ಲಿ “ಭಾರತವೇ ಎದ್ದು ನಿಂತು ನಾನು ಕೂಡ ಅದರ ಬಲಿಪಶು’ ಎಂದು ಹೇಳಬೇಕು ಎಂಬುದಾಗಿ ಕರೆ ನೀಡಿದರು.