Advertisement
ಇದು ಬಾಲ್ಯದಲ್ಲಿನ ಘಟನೆ. ರಾಜ್ಯದ ರಾಜಧಾನಿಯಿಂದ ಸುಮಾರು 400 ಕಿ.ಮೀ. ದೂರದಲ್ಲಿ ವಾಸವಿದ್ದ ಸಂದರ್ಭವದು. ಆಗಷ್ಟೇ ಹಳ್ಳಿಗಳ ವಿದ್ಯಾವಂತ ಹುಡುಗರು ಹಾಗೂ ಅರೆ ವಿದ್ಯಾವಂತ ಹುಡುಗರು ಉದ್ಯೋಗಕ್ಕೆಂದು ನಗರಗಳಿಗೆ, ವಿಶೇಷವಾಗಿ ಬೊಂಬಾಯಿ, ಬೆಂಗಳೂರಿಗೆ ವಲಸೆ ಹೋಗುತ್ತಿದ್ದ ಹೊತ್ತು. ಆಗ ನಮ್ಮ ಕಣ್ಣಿಗೆ ಬೊಂಬಾಯಿಯೇ ದೊಡ್ಡ ನಗರವಾಗಿ ಕಾಣುತ್ತಿದ್ದುದು. ಅನಿವಾರ್ಯತೆಯ ಬದಲಿಗೆ ಆಯ್ಕೆಯಾಗಿ ಬೆಂಗಳೂರು ಆಗತಾನೇ ಕಾಣತೊಡಗಿತ್ತು. ನನ್ನ ಸಂಬಂಧಿಕನೊಬ್ಬ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿ ಕೆಲವು ತಿಂಗಳ ಬಳಿಕ ಕಂಪೆನಿಯೊಂದರ ಉದ್ಯೋಗಿಯಾದ. ಆ ಸುದ್ದಿಗೆ ಊರಿಗೇ ಊರೇ ಸಂಭ್ರಮಿಸುತ್ತಿತ್ತು. ನನ್ನಂತ ಮಕ್ಕಳು ಬಹಳಷ್ಟು ಮಂದಿ ಇದ್ದರು. ಎಲ್ಲರ ಅಪ್ಪಂದಿರೂ ನನ್ನ ಸಂಬಂಧಿಕನ ಮುಖವಿರುವಲ್ಲಿ ನಮ್ಮ ಮುಖವನ್ನು ಕಟ್ ಆ್ಯಂಡ್ ಪೇಸ್ಟ್ ಮಾಡಿ ನೋಡುತ್ತಿದ್ದರು ಎನಿಸುತ್ತದೆ. ಯಾಕೆಂದರೆ ಎಲ್ಲ ಅಪ್ಪಂದಿರ ಒಂದೇ ಗುರಿ- “ಮಕ್ಕಳು ಓದಿ, ಬೆಂಗಳೂರಿನಂಥ ನಗರಕ್ಕೆ ಹೋಗಿ ಉದ್ಯೋಗ ಪಡೆಯಬೇಕು’. ಈ ನಗರದತ್ತ ವಲಸೆ ಆಗಲೇ ಜೋರಾಗಿತ್ತು. ಆದರೆ ಚಿಕ್ಕವರಾಗಿದ್ದ ನಮಗೆ ಈ ನಗರ ವಲಸೆ ಇತ್ಯಾದಿ ಯಾವುದೂ ಅರ್ಥವಾಗುತ್ತಿರಲಿಲ್ಲ. ಎಲ್ಲರ ಕಣ್ಣೆದುರು ಅದೊಂದು ಹಂಬಲದ ಪರ್ವತವಾಗಿತ್ತಷ್ಟೆ.
Related Articles
Advertisement
ಇಂದು ನಾವಿರುವುದು ಆನ್‌ಲೈನ್ ಜಗತ್ತಿನಲ್ಲಿ. ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಅಂತರ್ಜಾಲ ಸಂಪರ್ಕವಿದೆ. ಮೊಬೈಲ್‌ನಲ್ಲಿ ಸಿಗುವ ಅಂಗಡಿಗಳಲ್ಲಿ ಉಪ್ಪಿನಿಂದ ಹಿಡಿದು ನಮ್ಮೂರಿನ ಸೌತೆಕಾಯಿ ಸಹಿತ ಎಲ್ಲವನ್ನೂ ಖರೀದಿಸುವ ಹುಮ್ಮಸ್ಸಿನಲ್ಲಿದ್ದೇವೆ. ಅದರಲ್ಲಿ ಕಾಣುವ ರಿಯಾಯಿತಿಯ ಬಣ್ಣಗಳು ನಮ್ಮನ್ನು ಆಕರ್ಷಿಸುತ್ತವೆ. ಇದರ ಎದುರು ನಮಗೆ ಬೇರೇನೂ ತೋರದು. ಒಂದು ವೇಳೆ ಯಾರಾ ದರೂ ಹಿರಿಯರು ಎಲ್ಲವೂ ಆನ್‌ಲೈನ್‌ನಲ್ಲಿ ಯಾಕಪ್ಪಾ ಎಂದು ಕೇಳಿದರೆ, “ನಿಮ್ಮ ಕಾಲ ಮುಗೀತಪ್ಪ. ಈಗ ಎಲ್ಲವೂ ಮೊಬೈಲ್‌ನಲ್ಲೇ. ಅದೊಂದಕ್ಕೆ ಅಲ್ಲಿ ಹೋಗಿ ಯಾರು ಟೈಮ್ ವೇಸ್ಟ್ ಮಾಡ್ತಾರೆ’ ಎಂದು ಮಾತು ಮುಗಿಸುತ್ತೇವೆ. ನಿಜ, ವಿವಿಧ ರಂಗುಗಳ ಎದುರು ಹಳೆಯದ್ದೇನಿದ್ದರೂ ಕಪ್ಪು ಮತ್ತು ಬಿಳುಪು!
ಲೇಖನದ ಆರಂಭದಲ್ಲಿ ಬಂದ ಅಪ್ಪನ ಮಾತನ್ನು ಮತ್ತೆ ನೆನಪಿಸಿಕೊಳ್ಳೋಣ. ಊರಲ್ಲಿರುವ ಅಂಗಡಿಯವನ ಬದುಕಿನ ಬಗೆಗಿನ ಪ್ರಶ್ನೆ ಸ್ಥಳೀಯ ಆರ್ಥಿಕತೆಯ ಮೂಲದ್ದೇ.
ಜಾಗತೀಕರಣದ ಭರದಲ್ಲಿ ನಾವು ಸ್ಥಳೀಯ ಆರ್ಥಿಕತೆಯ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಆ ಅಪ್ಪ ಹೇಳಿದ ಮಾತಿನ ಅರ್ಥವನ್ನು ಶೋಧಿಸದೇ ಅವ ಗಣಿಸುತ್ತೇವೆ. ಆದರೆ ಈ ಮಾತಿನಲ್ಲಿ ಸತ್ಯವೂ ಇದೆ, ಸತ್ವವೂ ಇದೆ. ಒಂದು ಕೆ.ಜಿ. ಉಪ್ಪನ್ನು ಊರಿನ ಅಂಗಡಿಯಿಂದ ಕೊಳ್ಳುವುದಕ್ಕೂ, ಆನ್‌ಲೈನ್ ಇತ್ಯಾದಿ ಖರೀದಿಗೂ ಇರುವ ಕಣ್ಣಿಗೆ ಢಾಳಾಗಿ ಕಾಣುವ ವ್ಯತ್ಯಾಸ ಒಂದಿದೆ. ಉದಾಹರಣೆಗೆ ನಮ್ಮ ಹಳ್ಳಿಯ ಅಂಗಡಿಯವನಲ್ಲಿ ಹತ್ತು ರೂ. ಕೊಟ್ಟು ಒಂದು ಕೆ.ಜಿ. ಉಪ್ಪನ್ನು ಖರೀದಿಸಿದೆವು ಎಂದುಕೊಳ್ಳಿ. ಆ ಹತ್ತು ರೂ. ನಲ್ಲಿ 5-6 ರೂ. ಉಪ್ಪು ಉತ್ಪಾದಿಸಿದ ಕಂಪೆನಿಗೆ ಹೋಗಬಹುದು. ಉಳಿದ ನಾಲ್ಕು ರೂ. ಗಳು ಅಂಗಡಿಯವನಿಗೆ ಸಿಗಬಹುದು. ಆತ ಆ ನಾಲ್ಕು ರೂ. ಗಳಲ್ಲಿ ಒಂದು ರೂ. ಗಳನ್ನು ತನ್ನಲ್ಲಿನ ಉದ್ಯೋಗಿಗಳಿಗೆ ಕೊಡುತ್ತಾನೆ. ಆ ಉದ್ಯೋಗಿಗಳೂ ಸ್ಥಳೀಯರೇ. ಉಳಿದ ಎರಡು ರೂ. ಗಳನ್ನು ಬಂಡವಾಳವಾಗಿ ಹೂಡಿಕೆ ಮಾಡುತ್ತಾನೆ. ಒಂದು ರೂ. ಅವನ ಸ್ಥಳೀಯ ಖಾತೆಗೆ ಠೇವಣಿಗೆ ತೆರಳಬಹುದು ಎಂದುಕೊಳ್ಳೋಣ.
ಈಗ ಇದರ ಒಂದು ವೃತ್ತವನ್ನು ಗಮನಿಸೋಣ. ಇಂಥ ಉಳಿತಾಯದ ಹಣದಿಂದಲೇ ಆ ಬ್ಯಾಂಕ್ ಸ್ಥಳೀಯರಿಗೆ ಸಾಲ ಒದಗಿಸುತ್ತದೆ. ಅದರ ಮೂಲಕ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಆರ್ಥಿಕತೆ ಬಲಗೊಳ್ಳುತ್ತದೆ. ಆ ಅಂಗಡಿಯ ಉದ್ಯೋಗಿಗಳು ಪಡೆದ ಸಂಬಳದಲ್ಲಿ ತಮ್ಮ ಅಗತ್ಯಗಳನ್ನು ಖರೀದಿಸುವ ಮೂಲಕ ಆ ಹಣವನ್ನು ಸ್ಥಳೀಯ ಆರ್ಥಿಕತೆಗೆ ಹರಿಯಬಿಡುತ್ತಾರೆ. ಅಂದರೆ ನಮ್ಮ ಹತ್ತು ರೂ. ಗಳಲ್ಲಿನ ಶೇ. 40 ರಷ್ಟು ಹಣ ಸ್ಥಳೀಯ ಆರ್ಥಿಕತೆಗೆ ಮರು ಹೊಂದಿಕೆಯಾಗುತ್ತದೆ. ಸ್ಥಳೀಯ ಪಂಚಾಯತ್‌ಗಳಿಗೆ ತೆರಿಗೆ ಪಾವತಿಯಾಗುವುದೂ ಈ ಹಣದಿಂದಲೇ. ಅದರಿಂದಲೇ ಸೌಲಭ್ಯ ಒದಗಿಸಲೂ ಸಾಧ್ಯವಾಗುವಂಥದ್ದು. ಒಂದುವೇಳೆ ಈ ಸರಪಳಿ ಕಡಿದು ಹೋದರೆ ಒಂದೊಂದೇ ಕಂಬಗಳು ಕುಸಿಯತೊಡಗುತ್ತವೆ.
ಆನ್‌ಲೈನ್ ಖರೀದಿಯಲ್ಲಿ ನಾಲ್ಕು ರೂ. ನಲ್ಲಿ ಹೆಚ್ಚೆಂದರೆ ಒಂದು ರೂ. ಸ್ಥಳೀಯವಾಗಿ (ತೆರಿಗೆ, ಡೆಲಿವರಿ ಬಾಯ್‌ಗೆ ಕೊಡುವ ಸಂಭಾವನೆ) ಬಳಕೆಯಾದರೆ ದೊಡ್ಡದು. ಲಾಭಾಂಶವೆಲ್ಲವೂ ಕಂಪೆನಿ ಇರುವಲ್ಲಿ ಹೂಡಿಕೆಯಾಗುತ್ತದೆ. ಇದರರ್ಥ ಸ್ಥಳೀಯ ಆರ್ಥಿಕತೆಗೆ ಹಣ ಹರಿಯುವುದಿಲ್ಲ.
ಇಂಥದೊಂದು ಸೂಕ್ಷ್ಮ ಆರ್ಥಿಕ ಸಂಗತಿಯನ್ನು ಎಷ್ಟು ಸರಳವಾಗಿ ಅವರು ಹೇಳಿಕೊಟ್ಟರು. ಮಹಾತ್ಮಾ ಗಾಂಧಿ ಗ್ರಾಮರಾಜ್ಯದ ಬಗ್ಗೆ ಹೇಳಿದ್ದು. ನಮ್ಮ ಊರುಗಳು ಸ್ವಾವಲಂಬಿಗಳಾಗಬೇಕೆಂದರೆ ಸ್ಥಳೀಯ ಆರ್ಥಿಕತೆಯ ಆರೋಗ್ಯ ಸದೃಢ ವಾಗಿರಬೇಕು. ಅಂಥದೊಂದು ಶಕ್ತಿ ತುಂಬು ವುದು ನಾವೇ, ನಮ್ಮ ಒಂದೊಂದು ರೂ. ಗಳೇ.ಹಾಗಾಗಿ ನಮ್ಮ ಆಲೋಚನೆಯಲ್ಲಿ ಸಣ್ಣದೊಂದು ಸುಧಾರಣೆ ಮಾಡಿಕೊಳ್ಳೋಣ. ಊರಿನಲ್ಲೇ ಸಿಗುವ ಸರಕು ಗಳನ್ನು ಅಲ್ಲಿಯೇ ಖರೀದಿಸೋಣ. ಒಂದುವೇಳೆ ಸಿಗದ್ದನ್ನು ಹತ್ತಿರದ ಸಣ್ಣ ಪಟ್ಟಣದಲ್ಲಿ ಖರೀದಿಸೋಣ, ಅಲ್ಲೂ ಸಿಗದ್ದಕ್ಕೆ ನಗರಕ್ಕೆ ಹೋಗೋಣ. ಅಲ್ಲೆಲ್ಲೂ ಸಿಗದಿದ್ದನ್ನು ಮೊಬೈಲ್‌ನಲ್ಲಿ ಹುಡುಕೋಣ. ನಮ್ಮ ಮೊದಲ ಆದ್ಯತೆ ಸ್ಥಳೀಯವಾದದ್ದು, ಕೊನೆಯ ಆದ್ಯತೆ ದೂರದ್ದಾದರೆ ಮುಂದೊಂದು ದಿನ ಊರಿಗೆ ಬೀಗ ಹಾಕುವಂಥ ಪ್ರಮೇಯ ಉದ್ಭವಿಸದು. -ಅರವಿಂದ ನಾವಡ