ಕಡೂರು: ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಈ ಬಾರಿ ವಿಧಾನಸಭಾ ಚುನಾವಣಾ ಕಣದಲ್ಲಿರುವುದು ಖಚಿತ. ಮರಳಿ ಜೆಡಿಎಸ್ ಸೇರ್ಪಡೆಯಾಗಲ್ಲ, ಪಕ್ಷೇತರನಾಗಿಯಾದರೂ ಸ್ಪರ್ಧೆ ಮಾಡುತ್ತೇನೆಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಘೋಷಿಸಿದರು.
ತಾಲೂಕಿನ ಯಗಟಿ ಗ್ರಾಮದಲ್ಲಿ ಶುಕ್ರವಾರ “ಉದಯವಾಣಿ” ಜತೆ ಮಾತನಾಡಿದ ಅವರು, ದತ್ತಣ್ಣನಿಗೆ ಸಾಲವಿದೆ. ಒಂದಿಷ್ಟು ಹಣ ನೀಡಿ ಸಮಾಧಾನ ಮಾಡೋಣ ಎಂದು ಕಾಂಗ್ರೆಸ್‌ನ ದೊಡ್ಡ ಮುಖಂಡರು ಮಾತನಾಡುತ್ತಾರೆ. ನನಗೆ, ನನ್ನ ಕಾರ್ಯಕರ್ತರಿಗೆ ಸ್ವಾಭಿಮಾನವಿಲ್ಲವೆ? ಮತದಾರನ ಮನ ನಾನು ಗೆದ್ದಿರುವೆ. ಚುನಾವಣಾ ಕಣದಲ್ಲಿ ಇರಲೇಬೇಕೆಂದು ಕಾರ್ಯಕರ್ತರು ಪ್ರೀತಿ, ವಿಶ್ವಾಸದಿಂದ ಹೇಳುತ್ತಿದ್ದಾರೆ. ಅವರ ಅಭಿಮತಕ್ಕೆ ನಾನು ಬದ್ಧನಾಗಿದ್ದು ಮತದಾರನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದರು.
ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯಿಂದಲೇ ಯಗಟಿಯ ನಿವಾಸದಲ್ಲಿ ಸಾವಿರಾರು ಜನರು ಬಂದು ಭೇಟಿ ಮಾಡುತ್ತಿದ್ದು ಅಣ್ಣ ನೀವು ನಿಲ್ಲಬೇಕು. ನಿಮ್ಮ ಪರವಾಗಿ ನಾವಿದ್ದೀವಿ. ಹೋರಾಟ ಮಾಡುತ್ತೇವೆ. ನಿಮ್ಮನ್ನು ಪಕ್ಷೇತರರಾಗಿಯಾದರೂ ನಿಲ್ಲಿಸಿ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಕಾರ್ಯಕರ್ತರ ಸ್ವಾಭಿಮಾನಕ್ಕೆ ನಾನು ಋಣಿಯಾಗಿದ್ದು ಚುನಾವಣೆಗೆ ನಿಲ್ಲುವುದು ಖಚಿತ. ಮರಳಿ ಜೆಡಿಎಸ್ ಸೇರ್ಪಡೆಯ ಬಗ್ಗೆ ಕಾರ್ಯಕರ್ತರು ಒಪ್ಪುವ ಸ್ಥಿತಿಯಲ್ಲಿಲ್ಲ. ತಾವು ಪಕ್ಷೇತರರಾಗಿಯೇ ಕಣ ಪ್ರವೇಶ ಮಾಡಲು ಇಚ್ಛಿಸಿದ್ದೇನೆ. ಏ.9ರಂದು ನಮ್ಮ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳ ಸಭೆಯನ್ನು ಕಡೂರು ಪಟ್ಟಣದ ಗೀತಾ ಮಂದಿರದಲ್ಲಿ (ಶ್ರೀವೆಂಕಟೇಶ್ವರ ದೇವಾಲಯದ ಹಿಂಭಾಗ) ನಾನೇ ಕರೆದಿದ್ದು ಅವರೆಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ದತ್ತ ಭೇಟಿ ಮಾಡಿದ ಕೆ.ಎಸ್.ಆನಂದ್?
ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಹೆಸರಿರುವ ಕೆ.ಎಸ್.ಆನಂದ್ ಶುಕ್ರವಾರ ಸಂಜೆ ವೈ.ಎಸ್.ವಿ. ದತ್ತ ಅವರನ್ನು ಯಗಟಿ ಗ್ರಾಮದ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.