Advertisement

ಜೆಡಿ “ಎಸ್‌’ ಅಲ್ಲ; ಜೆಡಿ “ಸಿ’: ಕುಟುಕಿದ ಸಿಎಂ ಸಿದ್ದರಾಮಯ್ಯ

10:48 PM Feb 21, 2024 | Team Udayavani |

ಬೆಂಗಳೂರು: ಜಾತ್ಯತೀತ ಜನತಾದಳ ಈಗ ಜೆಡಿ “ಎಸ್‌’ ಅಲ್ಲ; ಜೆಡಿ “ಸಿ’ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ 5ನೇ ಬಾರಿಗೆ ಗೆದ್ದಿರುವ ಪುಟ್ಟಣ್ಣ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, “ಕುವೆಂಪು ಏನು ಹೇಳಿದ್ದಾರೆ ಗೊತ್ತಾ’ ಎಂದು ಜೆಡಿಎಸ್‌ನ ಭೋಜೇಗೌಡರಿಗೆ ಕೇಳಿದರು.

Advertisement

“ಸರ್ವಜನಾಂಗದ ಶಾಂತಿಯ ತೋಟ’ ಎಂದು ಭೋಜೇಗೌಡ ಉತ್ತರಿಸಿದರು. ಅದೂ ಹೌದು. ಆದರೆ “ಸರ್ವೋದಯವಾಗಲಿ ಸರ್ವರಲಿ’ ಎಂದೂ ಕುವೆಂಪು ಹೇಳಿರುವುದು ಎಂದು ಸಿಎಂ ಪ್ರಸ್ತಾವಿಸಿದರು. ಆಗ ಕುವೆಂಪು ಕುರಿತು ಭೋಜೇಗೌಡ ಮಾತು ಮುಂದುವರಿಸಿದರು.”ಏಯ್‌ ಭೋಜೇಗೌಡ, ಕುವೆಂಪು ಆಶಯ ಹೇಳ್ತಾ ಇದೀಯಾ; ಆದರೆ, ಜೆಡಿಎಸ್‌ನವರು ಬಿಜೆಪಿ ಜತೆಗೆ ಹೋಗಿದ್ದಾರೆ. ಅಲ್ಲಿ ಯಾಕಿದ್ದೀಯಾ? ಈಗ ಜಾತ್ಯತೀತ ಜನತಾದಳ ಜೆಡಿ “ಎಸ್‌’ ಅಲ್ಲ, ಜೆಡಿ “ಸಿ’ ಆಗಿದೆ’ ಎಂದರು.

“ಸಿ’ ಅಂದರೆ ಕಮ್ಯೂನಲ್‌’ ಎಂದು ಕಾಂಗ್ರೆಸ್‌ ಸದಸ್ಯರು ಧ್ವನಿಗೂಡಿಸಿದರು. ನಿಮ್ಮಿಂದ ಏನೂ ಆಗುವುದಿಲ್ಲ ಎಂದು ಭೋಜೇಗೌಡರಿಗೆ ಗೊತ್ತಾಗಿದೆ. ಅದಕ್ಕೆ ಅವರು ನಮ್ಮ ಜತೆ ಬಂದಿದ್ದಾರೆ ಎಂದು ಬಿಜೆಪಿಯ ರವಿಕುಮಾರ್‌ ಕಾಲೆಳೆದರು.

ಮಾತು ಮುಂದಿವರಿಸಿದ ಸಿಎಂ, ಪುಟ್ಟಣ್ಣ ಗೆಲುವು ಲೋಕಸಭೆ ಚುನಾವಣೆಗೆ ದಿಕ್ಸೂಚಿ. ನಾವು ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ. ನಾವು 28 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದರು. 25 ಗೆದ್ದಿರುವ ನಮಗೆ 28 ಸ್ಥಾನ ಹೇಳಲು ಯಾವ ಸಮಸ್ಯೆ? ನಾವು ಸುಳ್ಳು ಹೇಳುತ್ತಿಲ್ಲ. ನೀವು ಸಮರ್ಥರಿದ್ದೀರಿ. ಪಾರ್ಲಿಮೆಂಟ್‌ಗೆ ಹೋಗಿ ಎಂದು ಕೋಟ ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯರನ್ನು ಛೇಡಿಸಿದರು. ನಾನು ಅಸೆಂಬ್ಲಿಗೂ ಸಮರ್ಥ, ಪಾರ್ಲಿಮೆಂಟ್‌ಗೂ ಸಮರ್ಥ, ಇಂಟರ್‌ನ್ಯಾಷನಲ್‌ ಪಾರ್ಲಿಮೆಂಟ್‌ ಇದ್ದರೆ ಅದಕ್ಕೂ ಸಮರ್ಥ ಎಂದು ಸಿಎಂ ತಿರುಗೇಟು ನೀಡಿದರು.

ಬದುಕಿರುವ ತನಕ ಶಿಕ್ಷಕರ ಸೇವೆ ಮಾಡುತ್ತೇನೆ: ಪುಟ್ಟಣ್ಣ
ಚುನಾವಣೆಯಲ್ಲಿ ನಾನು ಬಿಜೆಪಿ-ಜೆಡಿಎಸ್‌ ಎರಡೂ ಪಕ್ಷಗಳನ್ನು ಟೀಕಿಸಿಲ್ಲ. ನನ್ನ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಸಿಎಂ, ಡಿಸಿಎಂ, ಕಾಂಗ್ರೆಸ್‌ ನಾಯಕರು ಹಾಗೂ ಶಿಕ್ಷಕರ ಬೆಂಬಲದಿಂದ ನಾನು ಗೆದ್ದು ಬಂದಿದ್ದೇನೆ ಎಂದು ಪುಟ್ಟಣ್ಣ ಹೇಳಿದರು. ನಾನು ಬಿಜೆಪಿ ಬಿಟ್ಟ ಕಾರಣ ಏನೆಂದರೆ, ಹಿಂದಿನ ಬಿಜೆಪಿ ಸರಕಾರ ಇದ್ದಾಗ ಶಿಕ್ಷಕರು 141 ದಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಮೂವರು ಆತ್ಮಹತ್ಯೆ ಮಾಡಿಕೊಂಡರು. ಪರಿಸ್ಥಿತಿ ಬಿಗಡಾಯಿಸಬಹುದು ಒಂದು ಸಭೆ ಮಾಡಿ ಎಂದು ಆಗಿನ ಮುಖ್ಯಮಂತ್ರಿಯವರಿಗೆ ನಾನು ಕೇಳಿಕೊಂಡೆ. ಯಾವುದೇ ಕಾರಣಕ್ಕೂ ಸಭೆ ಕರೆಯುವುದಿಲ್ಲ ಎಂದು ಸಿಎಂ ಹೇಳಿದರು. ಆ ದಿನವೇ ಬಿಜೆಪಿ ಬಿಡಲು ನಿರ್ಧರಿಸಿದೆ. ಈಗ ಕಾಂಗ್ರೆಸ್‌ನಿಂದ ಗೆದ್ದಿದ್ದೇನೆ. ಬದುಕಿರುವ ತನಕ ಶಿಕ್ಷಕರ ಸೇವೆ ಮಾಡುತ್ತೇನೆ ಎಂದರು.

Advertisement

ಹೊರಟ್ಟಿ ದಾಖಲೆ ಮುರಿಯೋದು ಸಾಧ್ಯವಿಲ್ಲ ಬಿಡಿ
ಐದನೇ ಬಾರಿ ಗೆದ್ದಿರುವ ಪುಟ್ಟಣ ನನ್ನ ಸಮೀಪಕ್ಕೆ ಬಂದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಿಮ್ಮ ದಾಖಲೆ ಮುರಿಯುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ವಿಧಾನಪರಿಷತ್‌ ಚುನಾವಣೆ ಪಕ್ಷಾತೀತ ಅನ್ನುವುದಕ್ಕೆ ಹೊರಟ್ಟಿಯವರೇ ಉದಾಹರಣೆ ಎಂದು ಬಿಜೆಪಿ ಸದಸ್ಯರು ಹೇಳಿದರು. ಪುಟ್ಟಣ್ಣ ಅವರ ಗೆಲುವು ಕಾಂಗ್ರೆಸ್‌ ಪಕ್ಷದ ಗೆಲುವು ಅಲ್ಲ, ವೈಯಕ್ತಿಕ ಗೆಲುವು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next