Advertisement

ಬಸ್‌ ನಿಲ್ದಾಣ ಕಾಮಗಾರಿಗೆ ಅಡ್ಡಿಪಡಿಸಿಲ್ಲ: ನಾಡಗೌಡ

03:46 PM Dec 01, 2020 | Suhan S |

ನಾಲತವಾಡ: ಇಲ್ಲಿನ ಬಸ್‌ನಿಲ್ದಾಣ ಕಾಮಗಾರಿಗೆ ನಾನು ಅಡ್ಡಿಪಡಿಸುತ್ತಿದ್ದೇನೆಂದು ಬಿಜೆಪಿ ಧುರೀಣ ಎಂ.ಎಸ್‌.ಪಾಟೀಲರು ಆರೋಪಿಸಿದ್ದು ಸುಳ್ಳು. ನನ್ನ ಹೆಸರು ಬಳಸಿ ತಾವು ಪ್ರಚಾರ ಪಡೆದುಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಪಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೃಥ್ವಿರಾಜ್‌ನಾಡಗೌಡ ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂರ ಗ್ರಾಪಂ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭ ಇಲ್ಲಸಲ್ಲದ ಆರೋಪ ಮಾಡಿರುವುದು ಹತಾಶೆಯ ಪ್ರತೀಕ. ನಿಲ್ದಾಣ ಜಾಗ ಪಪಂ ಹೆಸರಲ್ಲಿದ್ದು ಪಪಂಗೆ ಆದಾಯ ತಂದುಕೊಡುವ ಮಾರುಕಟ್ಟೆ ನಿರ್ಮಾಣಕ್ಕೆ ಹಿಂದಿನ ಪಪಂ ಆಡಳಿತದಲ್ಲಿ ನಿರ್ಣಯಿಸಲಾಗಿತ್ತು. ಬೇರೆಡ ಇರುವ 4 ಎಕರೆ ಜಾಗದಲ್ಲಿ ನಿಲ್ದಾಣ ಕಟ್ಟಲು ಪತ್ರ ಬರೆದಿದ್ದೆವು. ಡಿಸಿಎಂ ಸವದಿ ಇಲ್ಲಿಗೆ ಬಂದಾಗಲೂ ಮನವಿ ಸಲ್ಲಿಸಿದ್ದೆವು. ಇದೆಲ್ಲ ಗೊತ್ತಿದ್ದರೂ ಜನರ ಸಹಾನುಭೂತಿ ಗಿಟ್ಟಿಸಲು ಸುಳ್ಳು ಆರೋಪ ಹರಿಬಿಡುತ್ತಿದ್ದಾರೆ. ನಾನು ಸಾರಿಗೆ ಸಂಸ್ಥೆಯ ಎಇಇಗೆ ಫೋನ್‌ ಮಾಡಿ ಕಾಮಗಾರಿ ಬಂದ್‌ ಮಾಡಲುಧಮಕಿ ಹಾಕಿದ್ದೇನೆ ಎನ್ನುವ ಆರೋಪವನ್ನು ಪಾಟೀಲರು ಸಾಬೀತುಪಡಿಸಬೇಕು ಎಂದು ಸವಾಲೆಸೆದರು.

ಪಾಟೀಲ ಅನುಕೂಲಸಿಂಧು ರಾಜಕಾರಣಿ. ಗೆದ್ದೆತ್ತಿನ ಬಾಲ ಹಿಡಿಯೋ ಸ್ವಭಾವದವರು. ವೀರೇಶ್ವರ ಶರಣರ ಶತಮಾನೋತ್ಸವಕ್ಕೆ ಜನರಿಂದ ಸಂಗ್ರಹಿಸಿದ ಹಣದಲ್ಲಿ 40 ಲಕ್ಷ ಉಳಿತಾಯವಾಗಿದೆ ಎಂದಿದ್ದರು. ಆ ಹಣದಲ್ಲಿ ಶರಣರ ದ್ವಾರ ಮಾಡಬೇಕೆನ್ನುವುದು ಜನರ ಬೇಡಿಕೆಯಾಗಿತ್ತು. ಇದರ ಬಗ್ಗೆ ಪಾಟೀಲರು ಉತ್ತರಿಸಿ ಆಮೇಲೆ ನನ್ನ ಬಗ್ಗೆ ಮಾತಾಡಲಿ ಎಂದು ಕುಟುಕಿದರು.

ವೀರೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಾಟೀಲರು ನಿರ್ದೇಶಕರಾದ ಮೇಲೆ ದೊಡ್ಡ ಹಗರಣ ನಡೆದಿದೆ. ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವಂಥವರಿಂದ ನಾನು ಪಾಠ ಕಲಿಯುವುದು ಅಗತ್ಯವಿಲ್ಲ. ದೇಶಮುಖ, ನಾಡಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಈ ಹಿಂದೆ ಮಾಜಿ ಸಚಿವರಾಗಿದ್ದ ದೇಶಮುಖರಒಡನಾಟದಲ್ಲೇ ಬೆಳೆದು, ಬೆನ್ನಿಗೆ ಚೂರಿ ಹಾಕಿ ಸ್ವಾರ್ಥ ಸಾಧಿಸಿಕೊಂಡಿದ್ದವರು ಈಗ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಯವರ ಒಡನಾಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಬೆನ್ನಿಗೂ ಚೂರಿ ಹಾಕಿದರೆ ಯಾರೂ ಅಚ್ಚರಿಪಡಬೇಕಿಲ್ಲ. ಅವರ ಎಲ್ಲ ಹಗರಣ ಜನತೆ ಮುಂದಿಡಲು ತಯಾರಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next