ಕೋಲ್ಕತ್ತಾ: 2024 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಹೊಸದಾಗಿ ಘೋಷಿಸಲಾದ ಮಹಾಮೈತ್ರಿಕೂಟ ಭಾರತದ ಭಾಗವಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನನಗೆ ಪ್ರಧಾನಿಯಾಗಲು ಆಸಕ್ತಿ ಇಲ್ಲ ಆದರೆ ಕೇಸರಿ ಪಕ್ಷ ಮಾತ್ರ ತೊಲಗಬೇಕು ಎಂದು ಹೇಳಿದ್ದಾರೆ.
ಪಕ್ಷದ ವಾರ್ಷಿಕ ಹುತಾತ್ಮ ದಿನಾಚರಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ, ತನಗೆ ಯಾವುದೇ ಕುರ್ಚಿಯ ಮಹತ್ವಾಕಾಂಕ್ಷೆ ಇಲ್ಲ ಆದರೆ ಬಿಜೆಪಿಯಿಂದ ಅದನ್ನು ಕಿತ್ತೊಗೆಯಲು ಆಡಳಿತದ ವಿರುದ್ಧ ಹೋರಾಡಲು ಸಿದ್ಧ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿ ಸ್ಥಾನದ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:Team India:ರಾಹುಲ್, ಬುಮ್ರಾ, ಅಯ್ಯರ್, ಪ್ರಸಿಧ್, ಪಂತ್ ಫಿಟ್ನೆಸ್ ಅಪ್ಡೇಟ್ ಕೊಟ್ಟ ಬಿಸಿಸಿಐ
ಮಣಿಪುರ ಬಿಕ್ಕಟ್ಟಿನ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯ ‘ಬೇಟಿ ಬಚಾವೋ’ ಯೋಜನೆ ಈಗ ‘ಬೇಟಿ ಜಲಾವೋ’ (ಹೆಣ್ಣು ಮಕ್ಕಳನ್ನು ಸುಟ್ಟುಬಿಡಿ) ಆಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ ಜನಾಂಗೀಯ ಕಲಹವು 160 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಮಣಿಪುರಕ್ಕೆ ಕೇಂದ್ರ ತಂಡಗಳನ್ನು ಕಳುಹಿಸಲು ಕೇಂದ್ರವು ಏಕೆ ಯೋಚಿಸಿಲಿಲ್ಲ ಎಂದರು.
“ನಾವು ಮಣಿಪುರದೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಬಯಸುತ್ತೇವೆ. ಬಿಜೆಪಿಯು ಬಂಗಾಳಕ್ಕೆ ಹಲವು ಕೇಂದ್ರ ತಂಡಗಳನ್ನು ಕಳುಹಿಸಿದೆ (ಪಂಚಾಯತ್ ಚುನಾವಣೆಯ ನಂತರ), ಈಶಾನ್ಯ ರಾಜ್ಯಕ್ಕೆ ಕೇಂದ್ರ ತಂಡವನ್ನು ಏಕೆ ಕಳುಹಿಸಲಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.