Advertisement

ಸುಬ್ರಹ್ಮಣ್ಯ: ಸೂರು ದೊರಕದೆ ಬದುಕು ನುಚ್ಚುನೂರು!

10:07 AM Oct 01, 2018 | Team Udayavani |

ಸುಬ್ರಹ್ಮಣ್ಯ: ನಿವೇಶನ ಸಿಗದ ದಲಿತ ಕುಟುಂಬವೊಂದು ದಿಕ್ಕು ತೋಚದೆ ಬದುಕಿನ ಹಂಗು ತೊರೆದು ಗುಡಿಸಲಿನಲ್ಲಿ ವಾಸಿಸುತ್ತಿದೆ. ಈ ಭಾಗದಲ್ಲಿ ಸುರಿದ ಮಹಾಮಳೆಯ ಪ್ರವಾಹದ ವೇಳೆಯೂ ಈ ಕುಟುಂಬ ಇದೇ ಗುಡಿಸಿಲಿನಲ್ಲಿ ದಿನ ಕಳೆದಿದೆ. ತೀರಾ ಕಷ್ಟದ ಸ್ಥಿತಿಯಲ್ಲಿ ಇರುವ ಈ ಬಡ ಕುಟುಂಬದ ಜೀವನ ವ್ಯವಸ್ಥೆಯನ್ನೇ ಶಪಿಸುತ್ತಿದೆ.

Advertisement

ಗುತ್ತಿಗಾರು ಗ್ರಾಮದ ವಳಲಂಬೆಯ ಕಲ್ಚಾರು ಎಂಬಲ್ಲಿ ಪತ್ನಿ, ಹತ್ತನೆ ತರಗತಿ ಓದುತ್ತಿ ರುವ ಮಗಳ ಜತೆ ನೆಲೆಸಿರುವ ಕುಂಡ ಅಜಿಲ ಎಂಬವರ ಕುಟುಂಬ ಇಂದು ದಿಕ್ಕು ಕಾಣದೆ ಬದುಕು ಸವೆಸುತ್ತಿದೆ. ಇವರಿರುವ ಮನೆಯನ್ನು ಕೆಡವಿ ಈಗಾಗಲೇ ಕಳೆದ 8 ತಿಂಗಳು ಗಳಾಗಿವೆ. ಬಳಿಕ ಇವರು ಪ್ಲಾಸ್ಟಿಕ್‌ ಟಾರ್ಪಲ್‌ ಹೊದಿಸಿ ನಿರ್ಮಿಸಿಕೊಂಡ ಪುಟ್ಟ ಗುಡಿಸ ಲಲ್ಲಿ ದಿನ ಕಳೆಯುತ್ತ ಬಂದಿದ್ದಾರೆ.

ಕಲ್ಚಾರುವಿನ ಕುಂಡ ಅಜಿಲ ಕುಟುಂಬಕ್ಕೆ ಇಂದಿರಾ ಆವಾಸ್‌ ಯೋಜನೆಯಡಿ 2017-18ನೇ ಸಾಲಿನಲ್ಲಿ ಮನೆ ಮಂಜೂರಾಗಿದೆ. ಇರುವ ಸ್ವಲ್ಪ ಜಾಗದಲ್ಲಿ ಹಳೆ ಮನೆಯಿದ್ದು ಹೊಸ ಮನೆ ನಿರ್ಮಾಣಕ್ಕೆ ಬೇರೆ ಜಾಗವಿಲ್ಲ. ಜಾಗವಿಲ್ಲದ ಕಾರಣ ಇರುವ ಜಾಗದ ಶಿಥಿಲಗೊಂಡ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಜಾಗ ಗೊತ್ತು ಮಾಡಿದ್ದರು.

ಅನಿದಾನ ಬಿಡುಗಡೆಗೊಂಡಿಲ್ಲ
ಈ ಕುರಿತಾಗಿ ತೀರಾ ಜ್ಞಾನ ಹೊಂದಿರದ ಕುಂಡ ಅಜಿಲ ಕೂಲಿ ಕೆಲಸ ಮಾಡಿಯೇ ಸಂಸಾರದ ಹೊಣೆ ನಡೆಸುತ್ತಾರೆ. ಬಡತನದಲ್ಲಿ ಮನೆ ತುಂಬಿರುವಾಗ ಕೈನಲ್ಲಿ ಬಿಡಿಗಾಸು ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದರು. ಈ ವೇಳೆ ಇವರ ಸಹಾಯಕ್ಕೆ ಬಂದ ಪಂ. ಸದಸ್ಯರೊಬ್ಬರು ಮನೆ ರಚನೆಗೆ ಜೆಸಿಬಿ ತರಿಸಿ ನೆಲ ಸಮತಟ್ಟುಗೊಳಿಸಿ ಪಂಚಾಂಗ ನಿರ್ಮಿಸಿಕೊಟ್ಟಿದ್ದರು. ಒಂದು ಬಾರಿ ಅವರೇ ಹಣ ಕೈಯಿಂದ ತುಂಬಿದ್ದರು. ಬಳಿಕ ಪಂಚಾಯತ್‌ ಮೂಲಕ ಮನೆಯ ಪಂಚಾಂಗವನ್ನು ಜಿಪಿಎಸ್‌ ಮಾಡಿ ಸರಕಾರದ ಅನುದಾನಕ್ಕಾಗಿ ಕಾಯಲಾಗಿತ್ತು. ಮುಂದಿನ ಕಾಮಗಾರಿ ನಡೆಸಲು ಸಾಧ್ಯವಾಗದೇ ಕೈಚೆಲ್ಲಿ ಕುಳಿತಿದೆ ಈ ಬಡ ಕುಟುಂಬ.

ಪಕ್ಕಾ ಮನೆ ದಾರಿ ತೋರಿ
ಗುಡಿಸಲು ಮುಕ್ತ ಭಾರತ ನಿರ್ಮಾಣದ ಕನಸು ಒಂದು ಕಡೆಯಾದರೆ ಇತ್ತ ಅದೇಷ್ಟೋ ಕುಟುಂಬಗಳು ಇಂತಹ ಗುಡಿಸಲಿನಲ್ಲಿ ದಿನ ದೂಡುತ್ತಿವೆ. ಅದರಲ್ಲಿ ಕುಂಡ ಅಜಿಲ ಅವರ ಕುಟುಂಬವೂ ಸೇರಿದೆ. ಈ ಬಡ ಕುಟುಂಬವನ್ನು ಗುಡಿಸಲಿನಿಂದ ಪಕ್ಕಾ ಮನೆಗೆ ಕರೆತರಲು ಜನಪ್ರತಿನಿಧಿಗಳು ಶ್ರಮಿಸಲೇಬೇಕಾಗಿದೆ.

Advertisement

ನೀರು ಹೊತ್ತೆ ತರಬೇಕು
ಕಲ್ಚಾರಿನಲ್ಲಿ ಮೂರು ಪ.ಜಾತಿ ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. 

ಗುಡಿಸಲ ವಾಸ 
ಪರಿಣಾಮ ಕಳೆದ 8 ತಿಂಗಳಿನಿಂದ ಈ ಕುಟುಂಬ ಹರಕಲು ಪ್ಲಾಸ್ಟಿಕ್‌ ಗುಡಿಸಲಿನ ಕೆಳಗೆ ಜೀವನ ಸಾಗಿಸುತ್ತಿದೆ. ದಿನನಿತ್ಯದ ಖರ್ಚಿಗೆ ಕೂಲಿ ಕೆಲಸ ಮಾಡಿ ಬದುಕುವ ಈ ಕುಟುಂಬ ಸಾವಿರಾರು ರೂಪಾಯಿ ಹೊಂದಿಸಿ ಮನೆ ನಿರ್ಮಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಗುಡಿಸಲ್ಲಿ ಕಷ್ಟದ ದಿನಗಳನ್ನು ಸವೆಸುತ್ತಿರುವ ಈ ಕುಟುಂಬದ ಯಜಮಾನ ಸೂರು ನಿರ್ಮಿಸಿ ಕೊಡಿ ಎಂದು ಹಲವು ವರ್ಷಗಳಿಂದ ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದಾರೆ. ಸ್ಥಳೀಯ ಗ್ರಾ.ಪಂ. ಕಚೇರಿಗೂ ಮನವಿ ಮಾಡಿದ್ದರು. ಇದಕ್ಕೆ ಯಾವ ಸ್ಪಂದನೆ ದೊರಕಿಲ್ಲ ಎನ್ನುತ್ತಾರೆ ಕುಂಡ ಅಜಿಲ. ಮನೆ ಮಂಜೂರಾತಿಗೊಂಡು ಮನೆ ನಿರ್ಮಾಣಕ್ಕೆ ಬ್ಯಾಂಕ್‌ ಪಾಸ್‌ ಪುಸ್ತಕ ಇತ್ಯಾದಿ ದಾಖಲೆ ಪತ್ರ ಸಿದ್ಧಪಡಿಸಿ ನೀಡಿದ್ದರೂ ಇಲ್ಲಿ ತನಕ ಹಣ ಬಿಡುಗಡೆ ಆಗದೆ ಇರುವುದು ಕನಸಿನ ಮನೆ ನನಸಾಗಲು ಇರುವ ಅಡ್ಡಿಯಾಗಿದೆ.

  ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next