Advertisement

ಸಿದ್ದರಾಮಯ್ಯ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಾರೆ: ಸಚಿವ ಆರ್‌.ಅಶೋಕ್‌

07:03 PM Jan 29, 2022 | Team Udayavani |

ಬೆಂಗಳೂರು: ಸರ್ಕಾರದ ಆರು ತಿಂಗಳ ಸಾಧನೆಗಳ ಬಗ್ಗೆ ಟೀಕೆ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್‌. ಅಶೋಕ್‌, ಸಿದ್ದರಾಮಯ್ಯ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುತ್ತಾರೆ ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಎಲ್ಲದಕ್ಕೂ ಮಾತನಾಡುವ ಚಟ ಇದೆ. ನಾನು ಮಾಡಿದ್ದೇ ನಿಜ, ಬೇರೆಯವರು ಮಾಡಿದ್ದು ಸುಳ್ಳು ಅನ್ನುವ ಮಾನಸಿಕ ಸ್ಥಿತಿಗೆ ಅವರು ಹೋಗಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದು ಯಾವುದು ಕಾಣುವುದಿಲ್ಲ. ಎಲ್ಲವನ್ನೂ ಅವರು ಕಾಮಾಲೆ ಕಣ್ಣುಗಳಿಂದ ನೋಡುತ್ತಾರೆ ಹೇಳಿದರು.

ನಮ್ಮ ಸರ್ಕಾರ ಎಲ್ಲ ವರ್ಗಗಳಿಗೂ, ಎಲ್ಲಾ ವಲಯಗಳಿಗೂ ಆದ್ಯತೆ ನೀಡಿ ಅಭಿವೃದ್ಧಿ ಮಾಡಿದೆ. ಬೆಂಗಳೂರಿಗೆ ಮುಖ್ಯಮಂತ್ರಿಯವರು 6 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ.

ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು ಹೋಗುತ್ತಿವೆ. ಬೊಮ್ಮಾಯಿ ಅವರಿಗೆ ಆರೇ ತಿಂಗಳು ಸಿಕ್ಕಿದ್ದು, ಸಿದ್ದರಾಮಯ್ಯನವರಿಗೆ ಐದು ವರ್ಷ ಸಿಕ್ಕರೂ ಏನೂ ಮಾಡಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ನವರಿಗೆ ಬುದ್ಧಿ ಬರುತ್ತಿಲ್ಲ:
ಹಿಂದೆ 15 ಮಂದಿ ಶಾಸಕರು ಕಾಂಗ್ರೆಸ್‌ ಬಿಟ್ಟು ಹೋದಾಗ ಏನೂ ಮಾಡಿಲ್ಲ, ಅವರು ಯಾಕೆ ಬಿಟ್ಟು ಹೋದರು ಎಂದು ಕಾಂಗ್ರೆಸ್‌ ನಾಯಕರು ಕಾರಣ ಹುಡಕಲು ಹೋಗಿಲ್ಲ. ಈ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ ಟಾಟಾ, ಗುಡ್‌ ಬೈ ಎಂದು ಹೇಳುತ್ತಿದ್ದಾರೆ. ಇಷ್ಟಾದರೂ ಕಾಂಗ್ರೆಸ್‌ ನಾಯಕರಿಗೆ ಬುದ್ಧಿ ಬರುತ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯ ಇಲಿ-ನೋಣಗಳನ್ನು ಹುಡಕುತ್ತಿದ್ದಾರೆ. ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್‌ ನಡುವೆ ನಿತ್ಯ ಪೈಪೋಟಿ ಇರುತ್ತದೆ. ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಅಶೋಕ್‌ ಹೇಳಿದರು.

Advertisement

ಇದನ್ನೂ ಓದಿ:ಮಂಡ್ಯ: ಕತ್ತುಕೊಯ್ದು ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ

ರಮೇಶ್‌ ಜಾರಕಿಹೊಳಿ ನಮ್ಮ ನಾಯಕರು
ರಮೇಶ್‌ ಜಾರಕಿಹೊಳಿ ನಮ್ಮ ನಾಯಕರು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಬೆಳಗಾವಿ ನಾಯಕರ ಸಭೆ ಕುರಿತು ಕೇಳಿದ್ದಕ್ಕೆ ಪ್ರತಿಕ್ತಿಯಿಸಿದ ಅವರು, ಬೆಳಗಾವಿಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಟ್ಟಾಗಿ ಮತ್ತೇ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ.

ಬೆಳಗಾವಿ ಮೇಯರ್‌ ಚುನಾವಣೆ ವಿಚಾರಕ್ಕೆ ಸಭೆ ಮಾಡಿದ್ದಾರೆ. ರಮೇಶ್‌ ಜಾರಕಿಹೊಳಿ ಅವರ ಕ್ಷೇತ್ರವನ್ನು ತುಂಬಾ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ರಮೇಶ್‌ ಜಾರಕಿಹೊಳಿ ನಮ್ಮ ನಾಯಕರು ಎಂದು ಅಶೋಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next