ಹೊನ್ನಾಳಿ: ನನಗೆ ಸಚಿವನಾಗಬೇಕೆಂಬ ಆಸೆ ಇಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿಯನ್ನೂ ಮಾಡಿಲ್ಲ. ಆದರೆ ಸಚಿವ ಸ್ಥಾನದ ಬದಲಾಗಿ ಅವಳಿ ತಾಲೂಕಿನ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ನಾನು ಮನೆ ಮಗನಾಗಿ ಕೆಲಸ ಮಾಡುತ್ತಿದ್ದೇನೆ. ಕೆಲವರು ಚುನಾವಣೆ ಬಂದಾಗ ಸೇವಕರಾಗುತ್ತಾರೆ, ಚುನಾವಣೆ ಬಳಿಕ ಮಾಲೀಕರಾಗುತ್ತಾರೆ. ಚುನಾವಣೆ ಮುಗಿದ ಬಳಿಕ ಕಾಣದಂತೆ ಮಾಯವಾಗುತ್ತಾರೆ ಎಂದು ಕುಟುಕಿದರು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿಗೆ ಹೊಸದಾಗಿ 2100 ಮನೆಗಳನ್ನು ವಸತಿ ಸಚಿವರ ಬಳಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಫಲಾನುಭವಿಗಳ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಅಧಿಕಾರಿಗಳು ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಜನರ ಮನೆಬಾಗಿಲಿಗೆ ಹೋಗಿ ಸಮಸ್ಯೆಯನ್ನು ಆಲಿಸುವ ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಧ್ಯಾ ಸುರಕ್ಷಾ ಯೋಜನೆ 32, ನಿರ್ಗತಿಕ ವಿಧವಾ ವೇತನ 11, ಅಂಗವಿಕಲ ಘೋಷಣಾ ವೇತನ 10, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ 26 ಸೇರಿದಂತೆ ನ್ಯಾಮತಿ ತಾಲೂಕಿನಲ್ಲಿ ಒಟ್ಟು 79 ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಸವಲತ್ತು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಡಾ| ಎ. ಚನ್ನಪ್ಪ ಗ್ರಾಮ ವಾಸ್ತವ್ಯದ ಉದ್ದೇಶ ತಿಳಿಸಿದರು.
ಉಪವಿಭಾಗಾಧಿಕಾರಿ ತಿಮ್ಮಣ್ಣ ಹುಲ್ಲುಮನಿ, ತಹಶೀಲ್ದಾರ್ ರೇಣುಕಾ ಮಾತನಾಡಿದರು. ಬೆಳಗುತ್ತಿ ಗ್ರಾಪಂ ಅಧ್ಯಕ್ಷೆ ಪ್ರೇಮಾ, ಯರಗನಾಳ್ ಗ್ರಾಪಂ ಅಧ್ಯಕ್ಷ ಶೇಖರಪ್ಪ, ಬೆಳಗುತ್ತಿ, ಯರಗನಾಳ್, ಗುಡ್ಡೆಹಳ್ಳಿ ಗ್ರಾಪಂ ಸದಸ್ಯರು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್, ತಹಶೀಲ್ದಾರ್ ರಶ್ಮಿ, ನಿರ್ಮಿತಿ ಕೇಂದ್ರದ ರವಿಕುಮಾರ್, ಭೂಸ್ವಾನಾಧಿಕಾರಿ ರೇಷ್ಮಾ ಹಾನಗಲ್, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ, ತಾಪಂ ಇಒ ರಾಮಾ ಬೋವಿ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ನಾವು ಭಾಷಣ ಮಾಡಿ ಹೋದರೆ ಸಾಲದು, ಜನರ ಸಮಸ್ಯೆಗಳನ್ನು ಆಲಿಸಿ ಚರ್ಚಿಸಿ ಬಗೆಹರಿಸಿದಾಗ ಮಾತ್ರ ಕಾರ್ಯಕ್ರಮ ಆಯೋಜಿಸಿದ್ದು ಸಾರ್ಥಕವಾಗುತ್ತದೆ.
– ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ