Advertisement

ಮಹಿಳೆಯರಿಗೆ ಟಿಕೆಟ್‌ ನೀಡದಿರುವುದು ಲಿಂಗ ತಾರತಮ್ಯವಲ್ಲ

11:49 AM Apr 29, 2018 | Team Udayavani |

ಬೆಂಗಳೂರು: ಚುನಾವಣೆಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಟಿಕೆಟ್‌ ನೀಡದಿರುವುದು ಲಿಂಗ ತಾರತಮ್ಯವಲ್ಲ. ಬೆಂಗಳೂರಿನಲ್ಲಿ ಪಕ್ಷದಿಂದ ಸ್ಪರ್ಧಿಸಲು ಮಹಿಳೆಯರಿಗೆ ಟಿಕೆಟ್‌ ನೀಡಿಲ್ಲ ಎಂದ ಮಾತ್ರಕ್ಕೆ ಮಹಿಳೆಯರು ಪುರುಷರಿಗೆ ಸಮಾನವಾಗಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಪ್ಪು ತಿಳಿಯಬಾರದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ನಗರದ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ನಡೆದ “ಕರುನಾಡ ಮಹಿಳಾ ಜಾಗೃತಿ ಸಂವಾದ’ದಲ್ಲಿ ಪಾಲ್ಗೊಂಡಿದ್ದ ಅವರು, ರಾಜಕೀಯದಲ್ಲಿ ಮಹಿಳೆಯರಿಗೆ ನಿರಂತರವಾಗಿ ಅವಕಾಶ ನೀಡಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಮತದಾರರ ಮನೋಭಾವ ಆಧರಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಎಲ್ಲ ಪಕ್ಷಗಳು ಟಿಕೆಟ್‌ ನೀಡುತ್ತವೆ. ಪುರುಷರಾಗಲಿ, ಮಹಿಳೆಯರಾಗಲಿ ಅರ್ಹರಿಗೆ ಟಿಕೆಟ್‌ ಕೊಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಮಹಿಳೆಯರಿಗಿಂತ ಪುರುಷ ಅಭ್ಯರ್ಥಿಗೆ ಮತ ಹಾಕುವುದು ಸೂಕ್ತ ಎಂಬ ಭಾವನೆ ಜನರಲ್ಲಿರುವುದೂ ನಿಜ ಎಂದು ಹೇಳಿದರು.

ಈ ಹಿಂದೆ ಶೇ.33ರಷ್ಟಿದ್ದ ಮಹಿಳಾ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಪಂಚಾಯ್ತಿ, ನಗರಸಭೆ, ಪುರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರೂ ಅಧಿಕಾರ ಪಡೆಯುವಂತಾಗಿದೆ. ಪಕ್ಷದಲ್ಲಿ ಮಹಿಳೆಯರು ಬೆಳೆಯಲು ಸಾಕಷ್ಟು ಅವಕಾಶವಿದೆ. ಉತ್ತಮವಾಗಿ ಕೆಲಸ ಮಾಡುವವರನ್ನು ಪಕ್ಷ ಗುರುತಿಸುತ್ತದೆ ಎಂದು ಹೇಳಿದರು.

ದೇಶಾದ್ಯಂತ ಎನ್‌ಸಿಸಿ ವ್ಯವಸ್ಥೆ ಕೆಲಸ ಮಾಡುತ್ತಿದ್ದು, ಯಾರಾದರೂ ಅದರಲ್ಲಿ ಪಾಲ್ಗೊಳ್ಳಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎನ್‌ಸಿಸಿಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದರೆ ಎಲ್ಲ ಮಹಿಳೆಯರು ಎನ್‌ಸಿಸಿಯಲ್ಲಿ ತರಬೇತಿ ಪಡೆಯುವುದು ಸೂಕ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅತ್ಯಾಚಾರಿಗಳಿಗೆ ಶಿಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ.

ಕೆಲ ಪ್ರಕರಣಗಳಲ್ಲಿ ನಿಧಾನಗತಿಯ ವಿಚಾರಣೆಯಿಂದ ಸಂತ್ರಸ್ತರು ನ್ಯಾಯಕ್ಕಾಗಿ ದೀರ್ಘ‌ಕಾಲ ಕಾಯುವಂತಾಗಿದೆ. ಈ ಸಮಸ್ಯೆ ನಿವಾರಿಸುವ ಸಲುವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಕಾಲಮಿತಿಯಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಬೇಕೆಂಬ ನಿಯಮವನ್ನೂ ರೂಪಿಸಲಾಗಿದೆ ಎಂದು ಹೇಳಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿರುವ “ನ್ಯೂ ಇಂಡಿಯಾ’ ಪರಿಕಲ್ಪನೆಯಲ್ಲಿ ಮಹಿಳಾ ಸುರಕ್ಷತೆ, ಹೆಣ್ಣು ಮಕ್ಕಳ ಶಿಕ್ಷಣ, ಲಿಂಗ ತಾರತಮ್ಯ ನಿವಾರಣೆ, ಮಹಿಳಾ ಸಬಲೀಕರಕ್ಕೆ ಪೂರಕವಾದ ಅಂಶಗಳಿದ್ದು, ಇದಕ್ಕೆ ಜನರ ಸಹಭಾಗಿತ್ವ ಮುಖ್ಯ. ಜನರು ಪಾಲ್ಗೊಳ್ಳುವ ಮೂಲಕ ಸಮಾಜದಲ್ಲಿ ಸುಧಾರಣೆ ತಂದು “ನ್ಯೂ ಇಂಡಿಯಾ’ ನಿರ್ಮಿಸಬೇಕಿದೆ’ ಎಂದು ಉತ್ತರಿಸಿದರು. 

ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿವೆ. ವಿವಿಯ ವಿದ್ಯಾರ್ಥಿ ಸಂಘಟನೆಯಲ್ಲೂ ಇಂತಹ ಶಕ್ತಿಗಳು ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುವುದನ್ನು ಬೆಂಬಲಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆ ಇತರರು ಉಪಸ್ಥಿತರಿದ್ದರು.

ಚರ್ಚೆ ನಡೆದಿದೆ: ಭಾರತೀಯ ಸೇನೆಯಿಂದ ನಿವೃತ್ತಿಯಾಗಿರುವ ದಾದಿಯರನ್ನು ಮಾಜಿಗಳೆಂದು ಪರಿಗಣಿಸಿ ಪಿಂಚಣೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಆಶಾ ಎಂಬುವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, “ಐದಾರು ವರ್ಷ ಯೋಧರಿಗೆ ಸೇವೆ ಸಲ್ಲಿಸಿ ನಿವೃತ್ತರಾದ ನರ್ಸ್‌ಗಳನ್ನು ಮಾಜಿಗಳೆಂದು ಪರಿಗಣಿಸುತ್ತಿಲ್ಲ.

ಈ ಸಂಬಂಧ ಬದಲಾವಣೆ ತರಲು ಚರ್ಚೆ ನಡೆದಿದೆ. ನಿವೃತ್ತ ನರ್ಸ್‌ಗಳನ್ನು ಮಾಜಿಗಳೆಂದು ಪರಿಗಣಿಸಿ ಸೌಲಭ್ಯ ನೀಡುವುದು, ಹಾಲಿ ಸಿಬ್ಬಂದಿಯನ್ನು ಕಾಯಂಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಪರ ನಾನಿದ್ದೇನೆ’ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next