Advertisement

ದಾಸೋಹಕ್ಕೆ ಸಿಗದ ಅನುಮತಿ; ಕಚೇರಿಗೆ ಬೀಗ, ಧರಣಿ

05:13 PM Apr 21, 2019 | Team Udayavani |

ಕೊರಟಗೆರೆ:- ರಥೋತ್ಸವ ಮತ್ತು ಜಾತ್ರೆಗೆ ಸಮಯದಲ್ಲಿ ಉಚಿತ ದಾಸೋಹ ವ್ಯವಸ್ಥೆಗೆ ಅವಕಾಶ ನೀಡದಿರುವ ಸಿದ್ಧರಬೆಟ್ಟದ ಶ್ರೀಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್‌ನ ಕಾರ್ಯದರ್ಶಿ ರಾಜಣ್ಣನನ್ನು ತಕ್ಷಣ ಹುದ್ದೆಯಿಂದ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವ ಘಟನೆ ಇತ್ತೀಚಿಗೆ ನಡೆದಿದೆ. ತಾಲೂಕಿನ ಚನ್ನರಾಯನ ದುರ್ಗ ಹೋಬಳಿ ಬೂದಗವಿ ಗ್ರಾಪಂ ಕೇಂದ್ರ ಸ್ಥಾನ ದಲ್ಲಿರುವ ಸಿದ್ಧರಬೆಟ್ಟದ ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿಯ ಕೇಂದ್ರದ ದಾಸೋಹದ ಕೇಂದ್ರದಲ್ಲಿ ಪ್ರತಿವರ್ಷದಂತೆ ಉಚಿತ ದಾಸೋಹಕ್ಕೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಕುರಿಹಳ್ಳಿ, ಜೋನಿಗರ ಹಳ್ಳಿ, ಕುರಂಕೋಟೆ, ಮಲ್ಲೇಕಾವು ಗ್ರಾಮದ ನೂರಾರು ಜನ ಗ್ರಾಮಸ್ಥರ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕುರಂಕೋಟೆ ಗ್ರಾಮಸ್ಥ ಸಿದ್ಧರಾಜು ಮಾತ ನಾಡಿ, ಸಿದ್ಧರ ಬೆಟ್ಟದಲ್ಲಿ ರಥೋತ್ಸಹ ಮತ್ತು ಜಾತ್ರೆ ವೇಳೆ ದಾಸೋಹ ಕೇಂದ್ರದಲ್ಲಿ ಕಳೆದ 40ವರ್ಷದಿಂದ ಪ್ರತಿವರ್ಷ ಉಚಿತ ದಾಸೋಹ ನಡೆಸುತ್ತೇವೆ. ಕಾರ್ಯದರ್ಶಿ ರಾಜಣ್ಣನ ಏಕಪಕ್ಷಿಯ ನಿರ್ಧಾರ ತೆಗೆದುಕೊಂಡು ದಾಸೋಹಕ್ಕೆ ಅನುಮತಿ ನೀಡಿಲ್ಲ. ಭಕ್ತಾದಿಗಳಿಗೆ ಸೇವಾ ಸಮಿತಿಯು ದಾಸೋಹದ ವ್ಯವಸ್ಥೆ ಮಾಡೋಲ್ಲ. ದಾಸೋಹ ಸಮಿತಿಯ ಹುಂಡಿಯ ಲೆಕ್ಕಾಚಾರದ ಮಾಹಿತಿಯನ್ನು ಯಾರಿಗೂ ನೀಡದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡರು. ಕುರಂಕೋಟೆ ದೊಡ್ಡಕಾಯಪ್ಪ ಸೇವಾ ಸಮಿತಿ ಅಧ್ಯಕ್ಷ ಆರ್‌.ಸಿದ್ಧರಾಜು ಮಾತನಾಡಿ, ಸಿದ್ದೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ರಾಜಣ್ಣ ಏಕಪಕ್ಷಿಯ ನಿರ್ಧಾರದಿಂದ ಸಿದ್ಧರಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಹಲವಾರು ರೀತಿಯ ತೊಂದರೆ ಯಾಗುತ್ತಿದೆ. ಹತ್ತಾರು ಹಳ್ಳಿಯ ಗ್ರಾಮಸ್ಥರು ದಾಸೋಹಕ್ಕೆ ಅನುಮತಿ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಕಾರ್ಯದರ್ಶಿ ಬದಲಾವಣೆ ಮಾಡಿ ಸೇವಾ ಸಮಿತಿಯ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಕುರಂಕೋಟೆ, ಕುರಿಹಳ್ಳಿ, ಜೋನಿಗರಹಳ್ಳಿ, ಮಲ್ಲೇಕಾವು ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರ ಆಗ್ರಹದಿಂದ ಸಿದ್ಧರಬೆಟ್ಟದ ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿಯ ಕಚೇರಿ ಕೇಂದ್ರಕ್ಕೆ ಪಾರುಪತ್ತೇದಾರ್‌ ವೀರಮಲ್ಲಮ್ಮ, ನೇಗಲಾಲ ಗ್ರಾಮ ಲೇಕ್ಕಾಧಿಕಾರಿ ಕಲ್ಪನಾ, ಮಲ್ಲೆಕಾವು ಗ್ರಾಪಂ ಲೆಕ್ಕಾಧಿಕಾರಿ ರಮೇಶ್‌ ಸಮ್ಮುಖದಲ್ಲಿ ಟ್ರಸ್ಟ್‌ ಅಧಿಕ್ಷರಾದ ದೊಡ್ಡಸಿದ್ದಯ್ಯ ಸೇವಾ ಸಮಿತಿಗೆ ಬೀಗ ಹಾಕಿದರು. ನಾಗಣ್ಣ, ಸುರೇಶ್‌, ಪಾಂಡುರಂಗಯ್ಯ, ಸಿದ್ಧರಾಜು, ರಂಗರಾಜು, ಚನ್ನಕೇಶಯ್ಯ, ತಿಮ್ಮಯ್ಯ, ನಟರಾಜು, ಲಕ್ಷಣ, ರಮೇಶ್‌, ಮಂಜುನಾಥ, ಮಲ್ಲೇಶ್‌, ಭೀಮಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next