Advertisement

ಸಕಾಲದಲ್ಲಿ ಸಿಗದ ಅನುದಾನ: ವಸತಿ ಕಾಮಗಾರಿ ಅರ್ಧದಲ್ಲಿ

01:19 AM May 07, 2021 | Team Udayavani |

ಮಂಗಳೂರು: ವಸತಿ ಯೋಜನೆಗಳಡಿ ಮಂಜೂರಾದ ಮನೆಗಳಿಗೆ ವಸತಿ ನಿಗಮದಿಂದ ಸಕಾಲದಲ್ಲಿ ಹಣ ಬಿಡುಗಡೆಯಾಗದೆ ಕಾಮಗಾರಿಗಳು ಅರ್ಧದಲ್ಲೇ ಬಾಕಿಯಾಗಿವೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ದ.ಕ., ಉಡುಪಿ ಸೇರಿದಂತೆ ಕರಾವಳಿಯ ವಸತಿ ಯೋಜನೆ ಫ‌ಲಾನುಭವಿಗಳಲ್ಲಿ ಆತಂಕ ಮನೆ ಮಾಡಿದೆ.

Advertisement

ಒಂದು ವರ್ಷದಿಂದ ಕೋವಿಡ್  ತಾಂತ್ರಿಕ ಕಾರಣಗಳಿಂದ ನಿಗಮದಿಂದ ಅನುದಾನ ಬಿಡುಗಡೆ ವಿಳಂಬವಾಗಿತ್ತು. ಕಳೆದ ಎರಡು ಮೂರು ತಿಂಗಳುಗಳಿಂದ ಬಿಡುಗಡೆ ಆಗುತ್ತಿದ್ದರೂ ಇನ್ನೂ ಹಲವು ಫ‌ಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂಬ ದೂರುಗಳಿವೆ.

ಮತ್ತೆ ಹಳೇ ಆ್ಯಪ್‌ ಮೊರೆ :

ವಸತಿ ಯೋಜನೆಗಳಿಗೆ ವೇಗ ನೀಡುವ ಉದ್ದೇಶದಿಂದ ಸರಕಾರ ವಿಜಿಲ್‌ ಆ್ಯಪ್‌ ಆಧಾರಿತ ಜಿಪಿಎಸ್‌ ಕೈಬಿಟ್ಟು ಮತ್ತೆ ಈ ಹಿಂದೆ ಇದ್ದಂತೆ “ಇಂದಿರಾ ಮನೆ’ ಮೊಬೈಲ್‌ ಆ್ಯಪ್‌ ಮೂಲಕ ಜಿಪಿಎಸ್‌ ಮಾಡುವಂತೆ ಪಿಡಿಒಗಳಿಗೆ ಸೂಚಿಸಿದೆ. ವಿಜಿಲ್‌ ಆ್ಯಪ್‌ನಲ್ಲಿ ಜಿಪಿಎಸ್‌ ವಿಳಂಬವಾಗುತ್ತಿತ್ತು ಮತ್ತು ವಸತಿ ಯೋಜನೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಅಕ್ರಮ ನಡೆದಿತ್ತು ಎಂಬ ದೂರು ಕೂಡ ಈ ಬದಲಾವಣೆಗೆ ಕಾರಣ.

ಕಳೆದೊಂದು ವರ್ಷದಿಂದ ವಿಜಿಲ್‌ ಆ್ಯಪ್‌ನಲ್ಲಿ ಆಗಿರುವ ಜಿಪಿಎಸ್‌ ವಿವರಗಳನ್ನು ಕೈಬಿಟ್ಟು ಇಂದಿರಾ ಆ್ಯಪ್‌ ಮೂಲಕ ಮತ್ತೂಮ್ಮೆ ಜಿಪಿಎಸ್‌ ಮಾಡಬೇಕಾಗಿ ಬಂದಿರುವುದು ಕೂಡ ಮನೆ ನಿರ್ಮಾಣ ಪ್ರಗತಿ  ಹಿನ್ನಡೆಗೆ ಕಾರಣವಾಯಿತು ಎಂದು ಕೆಲವು ಪಿಡಿಒಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಛಾವಣಿ ಹಂತದ ಮನೆಗೆ ಆದ್ಯತೆ : 

ಇನ್ನೂ ಕಾಮಗಾರಿ ಆರಂಭಿಸದೆ ಇರುವವರು ಕಾಮಗಾರಿ ಆರಂಭಿ ಸುವಂತೆ ನಿಗಮ ಮತ್ತು ಜಿ.ಪಂ.ಗಳಿಂದ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಛಾವಣಿ ಹಂತದಲ್ಲಿ ರುವ ಮನೆಗಳ ಕಾಮಗಾರಿ ಪೂರ್ಣ ಗೊಳಿಸುವಂತಾಗಲು ಪಿಡಿಒಗಳು ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪತ್ರದ ಮೂಲಕ ಗೊಂದಲ ನಿವಾರಣೆ :

ಕೆಲವು ತಿಂಗಳುಗಳಲ್ಲಿ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗಿರಲಿಲ್ಲ. 15 ದಿನಗಳಿಂದ ನಿಗಮದಿಂದ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿದೆ. ಕೆಲವು ಫ‌ಲಾನುಭವಿಗಳು ಈಗಲೂ ಹಣ ಬಿಡುಗಡೆಯಾಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ. ಅವರಿಗೆ ಸೂಕ್ತ ಮಾಹಿತಿ ನೀಡಿ ಕಾಮಗಾರಿ ಆರಂಭಿಸುವಂತೆ/ ಮುಂದುವರಿಸುವಂತೆ ನೇರವಾಗಿ ಪತ್ರ ಬರೆಯಲು ಕೂಡ ನಿರ್ಧರಿಸಲಾಗಿದೆ. ವಸತಿ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಇಒ ಮತ್ತು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಡಾ| ಕುಮಾರ್‌, ಸಿಇಒ, ದ.ಕ. ಜಿ.ಪಂ.

ಅಂತಿಮ ಹಂತದ ಮನೆಗಳಿಗೆ ಆದ್ಯತೆ :

ಒಂದೂವರೆ ತಿಂಗಳುಗಳಿಂದ ನಿಗಮದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗುತ್ತಿದೆ. 4ರಿಂದ 5 ಕೋ.ರೂ. ಅನುದಾನ ಫ‌ಲಾನುಭವಿಗಳ ಖಾತೆಗೆ ಜಮೆಯಾಗಿದೆ. ಪೂರ್ಣಗೊಳ್ಳುವ ಹಂತದಲ್ಲಿರುವ ಮನೆಗಳಿಗೆ ಆದ್ಯತೆ ನೀಡಿ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ.ಡಾ| ನವೀನ್‌ ಭಟ್‌,  ಸಿಇಒ, ಉಡುಪಿ ಜಿ.ಪಂ.

 ಸಂತೋಷ್‌ ಬೊಳ್ಳೆಟ್ಟು

 

Advertisement

Udayavani is now on Telegram. Click here to join our channel and stay updated with the latest news.

Next