Advertisement

ಕಲ್ಲಡ್ಕ ನಗರದಲ್ಲಿ ಪೊಲೀಸ್‌ ಠಾಣೆ ಭರವಸೆ ಈಡೇರಲೇ ಇಲ್ಲ

04:38 AM Feb 04, 2019 | Team Udayavani |

ಬಂಟ್ವಾಳ: ಕಲ್ಲಡ್ಕ ನಗರದಲ್ಲಿ ಪ್ರತ್ಯೇಕ ಪೊಲೀಸ್‌ ಠಾಣೆ ಆಗಬೇಕು ಎಂಬುದು ಬಹುಕಾಲದ ಬೇಡಿಕೆ. ನಗರದಲ್ಲಿ ಅಹಿತಕರ ಘಟನೆ ನಡೆದಾಗ ಕಲ್ಲಡ್ಕಕ್ಕೆ ಪೊಲೀಸ್‌ ಠಾಣೆಯ ಅಗತ್ಯದ ಬಗ್ಗೆ ಶಾಂತಿ ಸಭೆಗಳಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾವ ಆಗುತ್ತದೆ. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಬೇಡಿಕೆ ಈಡೇರಲೇ ಇಲ್ಲ.

Advertisement

ಅಶಾಂತಿ ಸಮಯದಲ್ಲಿ ಪೊಲೀಸ್‌ ಠಾಣೆ ಬೇಕೆಂದು ಬೇಡಿಕೆ ಇಡುವವರು ಅನಂತರ ಮೌನವಾಗುತ್ತಾರೆ. ಜನಪ್ರತಿ ನಿಧಿಗಳು, ಪೊಲೀಸ್‌ ವ್ಯವಸ್ಥೆಯೂ ಕಲ್ಲಡ್ಕಕ್ಕೆ ಒಂದು ಠಾಣೆ ಬೇಕು ಎಂಬು ದನ್ನು ಮರೆತು ಸುಮ್ಮನಾಗುತ್ತಿರುವುದು ಬಹುಕಾಲದ ಬೇಡಿಕೆ ಈಡೇರದೇ ಇರುವುದಕ್ಕೆ ಪ್ರಮುಖ ಕಾರಣ.

ತಂಗುದಾಣದಲ್ಲಿ ಪೊಲೀಸರು
ಕಲ್ಲಡ್ಕದಲ್ಲಿ ಪೊಲೀಸ್‌ ತುಕಡಿಯೊಂದು ಪ್ರಯಾ ಣಿಕರ ತಂಗುದಾಣದಲ್ಲಿ ಬೀಡು ಬಿಟ್ಟಿದೆ. ಕರ್ತವ್ಯ ನಿರತ ಪೊಲೀಸ್‌ ಸಿಬಂದಿ ಮಳೆ, ಚಳಿ, ಬಿಸಿಲಿನಲ್ಲಿ ಪೊಲೀಸ್‌ ವಾಹನದಲ್ಲೇ ದಿನ ಕಳೆಯಬೇಕಾದ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಕಲ್ಲಡ್ಕದಲ್ಲಿ ಠಾಣೆ ಇರುತ್ತಿದ್ದರೆ ಪೊಲೀಸ್‌ ಸಿಬಂದಿ ಈ ಪರಿಸ್ಥಿತಿ ಎದುರಿಸಬೇಕಾಗಿಲ್ಲ.

ಸೂಕ್ತ ವ್ಯವಸ್ಥೆ, ಸ್ಥಳಾವಕಾಶ ಇಲ್ಲ
ಕಲ್ಲಡ್ಕ ಮೇಲಿನ ಪೇಟೆಯ ಪ್ರಯಾಣಿಕರ ತಂಗುದಾಣದ ಬಳಿ ಪೊಲೀಸ್‌ ವಾಹನ ನಿಲುಗಡೆ ಆಗಿದೆ. ಇಲ್ಲಿ ಪೊಲೀಸರು ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು, ಒಂದಷ್ಟು ಹೊತ್ತು ವಿಶ್ರಾಂತಿ ಪಡೆದುಕೊಳ್ಳಲು ಸೂಕ್ತ ವ್ಯವಸ್ಥೆ, ಸ್ಥಳಾವಕಾಶ ಇಲ್ಲವಾಗಿದೆ. ಕರ್ತವ್ಯದ ಸಂದರ್ಭ ತಂಗುದಾಣದಲ್ಲಿಯೇ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಕಲ್ಲಡ್ಕ ಸೂಕ್ಷ್ಮಪ್ರದೇಶ
ಕಲ್ಲಡ್ಕ ಸೂಕ್ಷ್ಮಪ್ರದೇಶವಾಗಿದ್ದು, ಸನ್ನದ್ದ ಸ್ಥಿತಿಯಲ್ಲಿ ಪೊಲೀಸ್‌ ಸಿಬಂದಿ ಅಲ್ಲಿರುವುದು ಅನಿವಾರ್ಯ. ಕಲ್ಲಡ್ಕ ಪೇಟೆ ಮುಂದಿನ ಹಂತದಲ್ಲಿ ಆರು ಪಥಗಳ ಹೆದ್ದಾರಿಯಾಗಿ ವಿಸ್ತರಣೆ ಮತ್ತು ಒಂದು ಫ್ಲೈಓವರ್‌ ಹೊಂದುವ ಮೂಲಕ ಸಮಗ್ರ ಅಭಿವೃದ್ಧಿ ಹೊಂದಲಿದೆ. ಈ ಪ್ರದೇಶದಲ್ಲಿ ಶೀಘ್ರ ಪೊಲೀಸ್‌ ಠಾಣೆ ನಿರ್ಮಾಣವಾಗಲಿ ಎಂಬುದು ಸಾರ್ವಜನಿಕರ ಅಪೇಕ್ಷೆ.

Advertisement

ಪ್ರಸ್ತಾವನೆೆ ಸಲ್ಲಿಕೆಯಾಗಿದೆ
ಕಲ್ಲಡ್ಕಕ್ಕೆ ಪೊಲೀಸ್‌ ಠಾಣೆ ಬೇಡಿಕೆಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಪ್ರಸ್ತಾವನೆ ಬೆಂಬತ್ತಿ ಕೆಲಸ ಮಾಡುವ ವ್ಯವಸ್ಥೆ ಆಗಬೇಕು. ಕಲ್ಲಡ್ಕದಲ್ಲಿ ಪೊಲೀಸ್‌ ಜತೆಗೆ ವಾಹನ ಇರಬೇಕಾಗಿದೆ. ರಸ್ತೆ ಬದಿ, ಅಂಗಡಿ ಮುಂಗಟ್ಟು ಎದುರಲ್ಲಿ ಪೊಲೀಸ್‌ ವಾಹನ ನಿಲ್ಲಿಸಿದಲ್ಲಿ ವ್ಯಾಪಾರಕ್ಕೆ ಕಿರಿಕಿರಿ ಆಗುತ್ತದೆ. ಅದಕ್ಕಾಗಿ ಮೇಲಿನಪೇಟೆ ಪ್ರಯಾಣಿಕರ ತಂಗುದಾಣ ಬಳಿ ಸಿಬಂದಿ ಸಹಿತ ವಾಹನ ನಿಲುಗಡೆ ಮಾಡಲಾಗುತ್ತಿದೆ.
– ಚಂದ್ರಶೇಖರ್‌
ಬಂಟ್ವಾಳ ನಗರ ಠಾಣಾಧಿಕಾರಿ

ಬೇಡಿಕೆ ಶೀಘ್ರ ಈಡೇರಲಿ
ಕಲ್ಲಡ್ಕ ನಗರಕ್ಕೆ ಪೊಲೀಸ್‌ ಠಾಣೆ ಬೇಕೆಂಬ ಬಲವಾದ ಬೇಡಿಕೆ ಇದೆ. ಸುಧೀರ್‌ ರೆಡ್ಡಿ ಅವರು ದ.ಕ. ಪೊಲೀಸ್‌ ಅಧೀಕ್ಷಕರಾಗಿದ್ದಾಗ ಪ್ರತ್ಯೇಕ ಠಾಣೆಯ ಪ್ರಸ್ತಾವವನ್ನು ಸರಕಾರಕ್ಕೆ ಕಳುಹಿಸಿದ್ದರು ಎಂಬುದಾಗಿ ಪೊಲೀಸ್‌ ಮೂಲಗಳು ತಿಳಿಸಿದ್ದವು. ಅವರ ವರ್ಗಾವಣೆ ಬಳಿಕ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಮುಂದೆ ಹೋಗಿಲ್ಲ ಎಂಬ ಆರೋಪವಿದೆ. ಜನಪರ ಬೇಡಿಕೆ ಈಡೇರಿಸುವಲ್ಲಿ ವಿಳಂಬ ಇಲ್ಲದೆ ಕೆಲಸ ಆಗಬೇಕು.
 ಜಯ ಕಲ್ಲಡ್ಕ
ಸ್ಥಳೀಯರು

ರಾಜಾ ಬಂಟ್ವಾಳ‌

Advertisement

Udayavani is now on Telegram. Click here to join our channel and stay updated with the latest news.

Next