ಯುದ್ಧ ಮುಗಿದಿದೆ. ಮೈಥಿಲಿ ಪ್ರತಿಜ್ಞೆ ಮಾಡಿದಂತೆ, ಆಕೆ ಅಪಹರಣಕ್ಕೊಳಗಾಗಿ ಒಂದು ವರ್ಷ ಕಳೆಯುವುದರೊಳಗಾಗಿ ರಘುಪತಿ ಆಕೆಯನ್ನು ಬಿಡಿಸಿಕೊಂಡಿದ್ದಾನೆ. ನಿರಂತರ ವರ್ಷದಿಂದ ದೇಹವನ್ನು ದಂಡಿಸಿರುವುದರಿಂದ ವೈದೇಹಿ ಕಳೆಗುಂದಿದ್ದಾಳೆ. ಅದಕ್ಕಿಂತ ಹೆಚ್ಚಾಗಿ ಆಕೆ ಮಾನಸಿಕವಾಗಿ ಜರ್ಝರಿತಗೊಂಡಿದ್ದಾಳೆ. ನೀವೇ ಗಮನಿಸಿ, ಆಕೆ ರಾಜಪುತ್ರಿಯಾಗಿದ್ದರೂ ಅವಳ ಬದುಕಿನಲ್ಲಿ ನೋವೇ ಜಾಸ್ತಿ. ಸರಿಯಾಗಿ ವಿವೇಚಿಸುವುದಾದರೆ ಆಕೆ ಅನಾಥೆ, ಜನಕರಾಜ ನೆಲವನ್ನು ಉಳುವಾಗ ಸಿಕ್ಕಿದವಳು. ಅಂದರೆ ಆಕೆಯ ಅಪ್ಪ, ಅಮ್ಮ ಯಾರು? ಆಕೆಯ ಮೂಲವೇನು ಎನ್ನುವುದೇ ಗೊತ್ತಿಲ್ಲ! ತನ್ನನ್ನು ಸ್ವಂತ ಮಗಳಿಗೆಂತ ಹೆಚ್ಚು ಪ್ರೀತಿಸುವ ಅಪ್ಪಅಮ್ಮ ಸಿಕ್ಕಿದ್ದರೂ, ತನ್ನ ಮೂಲವೇನು ಎಂದು ಗೊತ್ತಿಲ್ಲದ ಸಂಗತಿ ಆಕೆಯನ್ನು ಕಾಡುವುದು ಸತ್ಯವಲ್ಲವೇ? ಜನಕರಾಜನಿಗೂ ಆಕೆಯನ್ನು ವಿವಾಹ ಮಾಡಿಕೊಡುವಾಗ ಮನದ ಮೂಲೆಯಲ್ಲಿ ಇದೊಂದು ಆತಂಕವಿದ್ದಿರಲಿಕ್ಕೂ ಸಾಕು.
ರಾಜರು ತಮ್ಮ ವಂಶಪರಂಪರೆ, ಪ್ರತಿಷ್ಠೆ ಎಂದು ಜೋತುಬಿದ್ದು, ಯಾರು ಏನು ಎಂದು ಗೊತ್ತಿಲ್ಲದ ಸೀತೆಯನ್ನು ವಿವಾಹವಾಗಲು ನಿರಾಕರಿಸಿಬಿಟ್ಟರೆ? ಬಹುಶಃ ಆ ಕಾಲದಲ್ಲಿ ಸೀತೆಯ ಮೂಲವನ್ನು ಗುಟ್ಟಾಗಿಟ್ಟಿದ್ದಿರಬಹುದು. ಕೇವಲ 12 ವರ್ಷಕ್ಕೆ ವಿವಾಹವಾದ ಅವಳು, ಅತಿಚಿಕ್ಕವಯಸ್ಸಿನಲ್ಲಿ ವನವಾಸಕ್ಕೂ ಸಜ್ಜಾಗಿಬಿಟ್ಟಳು. ಕಡೆಗೆ ಎಲ್ಲ ಮುಗಿಯಿತು, ಇನ್ನು ಅಯೋಧ್ಯೆಗೆ ಹಿಂತಿರುಗಬಹುದು ಎಂದು ನಿರುಮ್ಮಳವಾಗಿದ್ದಾಗಲೇ, ಅಪಹರಣಕ್ಕೊಳಗಾಗಿ ಲಂಕೆ ಸೇರುವ ಪಾಡು. ಅಲ್ಲಿ ನಿತ್ಯನಿಂದನೆ, ಹಿಂಸೆ, ಕಳವಳ, ಅಭದ್ರತೆ…ಇದೆಲ್ಲದರ ಮಧ್ಯೆ ರಾಮ ಬಂದೇ ಬರುತ್ತಾನೆ ಎಂಬ ಏಕೈಕ ಭರವಸೆ!
ಇಷ್ಟರ ಮಧ್ಯೆ ಯುದ್ಧ ಮುಗಿದು, ಹತಾಶೆಯಿಂದ ಕುಗ್ಗಿಹೋಗಿರುವ ವೈದೇಹಿ, ರಘುರಾಮನನ್ನು ಭೇಟಿಯಾಗಲು ಸಿದ್ಧವಾಗುತ್ತಾಳೆ. ವಿಭೀಷಣ ಆಕೆಯನ್ನು ರಾಮನ ಸಾನ್ನಿಧ್ಯಕ್ಕೆ ಕರೆತರುತ್ತಾನೆ. ಆಕೆ ಯಾವ ಹೆಚ್ಚುವರಿ ಅಲಂಕಾರಗಳಿಲ್ಲದೇ, ಸಹಜವಾಗಿ ರಾಮನ ಬಳಿ ಬರುತ್ತಾಳೆ. ರಾಮಾಯಣ ಏನೆಂದು ಗೊತ್ತಿಲ್ಲದವರಿಗೆ ಅಥವಾ ಆ ಕಾಲದಲ್ಲಿ, ಆಕ್ಷಣದಲ್ಲಿ ನಿಂತು ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುತ್ತಿದ್ದವರಿಗೆ ಆಘಾತವಾಗುವಂತಹ ಮಾತುಗಳು ರಾಮನ ಬಾಯಿಂದ ಬರುತ್ತವೆ. ನಾನು ನಿನ್ನನ್ನು ಬಿಡಿಸಿಕೊಂಡಿದ್ದು, ನಿನಗಾಗಿ ಅಲ್ಲ, ನನ್ನ ವಂಶಗೌರವಕ್ಕಾಗಿ, ಇಕ್ಷ್ವಾಕು ಕುಲದ ಗೌರವಕ್ಕಾಗಿ, ನನ್ನ ಆತ್ಮಗೌರವಕ್ಕಾಗಿ ಎನ್ನುತ್ತಾನೆ ರಾಮ. ಅಷ್ಟು ಮಾತ್ರ ಆತ ಹೇಳಿ ಸುಮ್ಮನಿದ್ದರೆ, ಸಹಿಸಿಕೊಳ್ಳಬಹುದಿತ್ತೋ, ಏನೋ? ಆದರೆ, ಹೋಗು. ಎಲ್ಲಿಗೆ ಬೇಕಾದರೂ ಹೋಗು, ಇಲ್ಲಿರುವ ಯಾರ ಆಶ್ರಯವನ್ನಾದರೂ ಪಡೆ ಎಂದು ಸೀತೆಯನ್ನು ನಿರ್ಲಕ್ಷಿಸುತ್ತಾನೆ. ಹನುಮಂತ, ಲಕ್ಷ್ಮಣನಾದಿಯಾಗಿ ಎಲ್ಲರೂ ಬೆಚ್ಚಿಬೀಳುತ್ತಾರೆ. ಇದೆಂತಹ ಕ್ರೌರ್ಯ ಎಂದು ನೊಂದುಕೊಳ್ಳುತ್ತಾರೆ.
ಕೆಲವರಂತೂ ಅಸಹ್ಯಪಟ್ಟುಕೊಳ್ಳುತ್ತಾರೆ. ಆದರೆ ಶ್ರೀರಾಮನ ನಿಲುವಿನಲ್ಲಿ ಬದಲಾವಣೆಯೇ ಇಲ್ಲ. ಸೀತೆ ವಿಪರೀತ ಕಸಿವಿಸಿಕೊಳ್ಳುತ್ತಾಳೆ. ಲಕ್ಷ್ಮಣನಿಗೆ ಸೌದೆಯನ್ನು ಪೇರಿಸಿ ಚಿತೆಯನ್ನು ಸಿದ್ಧ ಮಾಡಲು ಹೇಳುತ್ತಾಳೆ. ಧಗಧಗ ಉರಿಯುತ್ತಿರುವ ಅಗ್ನಿಗೆ ಮೂರು ಸುತ್ತು ಪ್ರದಕ್ಷಿಣೆ ಬರುವ ಆಕೆ, ತನ್ನಲ್ಲಿ ಶುದ್ಧತೆಯಿದ್ದರೆ, ತಾನು ಪತಿವ್ರತೆಯೇ ಆಗಿದ್ದರೆ ತನ್ನನ್ನು ರಕ್ಷಿಸುವಂತೆ ಬೇಡಿಕೊಂಡು ಅಗ್ನಿಪ್ರವೇಶ ಮಾಡುತ್ತಾಳೆ. ಎಲ್ಲರೂ ಆತಂಕದಿಂದ ನೋಡುತ್ತಿದ್ದರೆ, ಸೀತೆ ಇತಿಹಾಸ ಸೃಷ್ಟಿಸುತ್ತಾಳೆ. ಇಡೀ ಜಗತ್ತು ಶಾಶ್ವತವಾಗಿ ನೆನಪಿಟ್ಟುಕೊಂಡ ಘಟನೆಯೊಂದಕ್ಕೆ ಆಕೆ ಕಾರಣವಾಗುತ್ತಾಳೆ. ಆಕೆಯನ್ನು ಸ್ವತಃ ಅಗ್ನಿದೇವ ಶ್ರೀರಾಮನಿಗೆ ಒಪ್ಪಿಸುತ್ತಾನೆ. ಆಕೆಯಲ್ಲಿ ಕಿಂಚಿತ್ತೂ ದೋಷವಿಲ್ಲ ಎಂದು ಸಾಕ್ಷೀಕರಿಸುತ್ತಾನೆ. ಈ ಘಟನೆಯನ್ನು ಮಹಾಕವಿ ಕುವೆಂಪು ತಮ್ಮ ಶ್ರೀ ರಾಮಾಯಣ ದರ್ಶನಂನಲ್ಲಿ ತುಸು ಬದಲಿಸುತ್ತಾರೆ. ಅಲ್ಲಿ ರಾಮ ಸೀತೆಯನ್ನು ಅಗ್ನಿಪ್ರವೇಶ ಮಾಡಲು ಬಿಡುವುದಿಲ್ಲ. ಬದಲಿಗೆ ಆಕೆಯ ಕೈಹಿಡಿದುಕೊಂಡು ತಾನೇ ಅಗ್ನಿಕುಂಡದ ಸುತ್ತ ಮೂರುಸುತ್ತು ಪ್ರದಕ್ಷಿಣೆ ಹಾಕುತ್ತಾನೆ. ಮೂಲ ರಾಮಾಯಣದ ರಾಮನ ಪಾತ್ರದಲ್ಲಿರುವ ಕೆಲವು ದೋಷಗಳನ್ನು ಇಲ್ಲಿ ಕುವೆಂಪು ತಿದ್ದಲು ಯತ್ನಿಸಿದ್ದಾರೆ. ಬಹುಶಃ ಈ ತಿದ್ದುವಿಕೆಯೂ, ಯಥಾಸ್ಥಿತಿಯೂ ಕಾವ್ಯದ ಅನುಪಮ ಗುಣವೆಂದೇ ಪರಿಗಣಿಸಬೇಕಾಗುತ್ತದೆ.