ಮಹಾನಗರ: ಜೀವನದ ವಿವಿಧ ಹಂತಗಳಲ್ಲಿ ಸೋಲು ಗೆಲುವು ನಿರಾಸೆ ಎದುರಾಗುವುದು ಸಹಜ. ಗೆದ್ದಾಗ ಹಿಗ್ಗದೆ, ಸೋತಾಗ ಎದೆಗುಂದದೆ ಕಠಿನ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ವಾಮಂಜೂರು ಸಂತ ಜೋಸೆಫರ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಂ| ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ ಹೇಳಿದರು.
ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್, ಪಾದುವ ಕಾಲೇಜ್ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಜೇಸಿಐ ಮಂಗಳೂರು ಲಾಲ್ ಭಾಗ್ ಸಹಯೋಗದೊಂದಿಗೆ ಶನಿವಾರ ಮಂಗಳೂರಿನ ಪಾದುವ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾದುವ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಆ್ಯಂಟನಿ ಶೆರಾ ಅವರು ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಮಾಜಿ ವಲಯಾಧ್ಯಕ್ಷ ಸೇನ್ ಕೃಷ್ಣ ಮೋಹನ್, ಜೇಸಿಐ ಮಂಗಳೂರಿನ ಅಧ್ಯಕ್ಷೆ ಸೌಜನ್ಯಾ ಹೆಗ್ಡೆ, ಜಾಬ್ ಫೇರ್ ಸಂಘಟಕ ದೀನತ್ ಡಿ’ಸೋಜಾ, ಜಾಬ್ ಫೇರ್ ಸಂಚಾಲಕ ರೋಷನ್ ವಿನ್ಸಿ ಸಂತುಮಯೂರು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಲೆಕ್ಸ್ ಸ್ಟುವರ್ಟ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಿನ್ಸಿಪಾಲ್ ವಂ| ಆಲ್ವಿನ್ ಸೆರಾವೊ ಸ್ವಾಗತಿಸಿದರು. ಪ್ರಶಾಂತ್ ಕೆವಿನ್ ಡಿ’ಕೋಸ್ಟ ನಿರೂಪಿಸಿದರು. ಮೇಳದಲ್ಲಿ ಸುಮಾರು 55 ಕಂಪೆನಿಗಳು, ಒಂದು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರಿಶ್ರಮದಿಂದ ಯಶಸ್ಸು
ಆತ್ಮವಿಶ್ವಾಸ, ಕೌಶಲ, ಸಾಮರ್ಥ್ಯ, ಉತ್ತಮ ಗುಣ ನಡತೆಗಳು ಜೀವನದಲ್ಲಿ ಸಫಲರಾಗಲು ಮುಖ್ಯವಾಗಿದ್ದು, ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ.
– ವಂ| ವಿಲ್ಫ್ರೆಡ್ ಪ್ರಕಾಶ್ ಡಿ’ಸೋಜಾ