ಕೋಲ್ಕತ್ತಾ : ಸಾರ್ವಜನಿಕರೆದುರೇ ನಾಲ್ಕೈದು ಜನ ನನ್ನ ಮೇಲೆ ಹಲ್ಲೆ ನಡೆಸಿದರು. ಈ ಘಟನೆ ವೇಳೆ ಯಾವೊಬ್ಬ ಪೊಲೀಸ್ ಅಧಿಕಾರಿಯೂ ಇರಲಿಲ್ಲ. ಇದೊಂದು ವ್ಯವಸ್ಥಿತವಾದ ಪಿತೂರಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಿಂದ ಸ್ಪರ್ಧಿಸಲು ಬುಧವಾರ(ಮಾರ್ಚ್ 10) ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸಲು ತೆರಳಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.
ಘಟನೆ ಕುರಿತು ಆಕ್ರೋಶ ಹೊರಹಾಕಿರುವ ದೀದಿ, 4-5 ಗಂಟೆಯವರೆಗೆ ದೊಡ್ಡ ಕಾರ್ಯಕ್ರಮ ನಡೆದರೂ ಕೂಡ ಯಾವೊಬ್ಬ ಸ್ಥಳೀಯ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಸಾಕಷ್ಟು ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯೂ ಹಾಜರಿರಲಿಲ್ಲ. ಇದೊಂದು ಪಿತೂರಿ ಎಂದು ನನಗೆ ಅನ್ನಿಸುತ್ತಿದೆ. ಘಟನೆ ಕುರಿತು ಚುನಾವಣೆ ಆಯೋಗದ ಗಮನಕ್ಕೆ ತರುತ್ತೇನೆ ಎಂದರು.
ಇನ್ನು ಘಟನೆ ಬಳಿಕ ಕಾರಿನಲ್ಲಿ ಕುಳಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದೀದಿ, ತನ್ನ ಕಾಲಿಗೆ ಬಲವಾದ ನೋವು ಆಗಿದೆ ಎಂದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ಕಷ್ಟಪಡುತ್ತಿದ್ದರು.