ಸುಳ್ಯ: ಅಭಿವೃದ್ಧಿ ನೆಪದಲ್ಲಿ ಹಸುರು ಸಂಪತ್ತಿನ ಮೇಲೆ ಪ್ರಹಾರ ಮಾಡಲಾಗುತ್ತಿದೆ. ಇದರಿಂದ ನೀರಿನ ಕೊರತೆ, ಬಿಸಿಲಿನ ತಾಪ ಏರಿಕೆಯಾಗಿ ಪ್ರಕೃತಿ ವಿಕೋಪದಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಸಿವಿಲ್ ನ್ಯಾಯಾಧೀಶ ಯಶ್ವಂತ ಕುಮಾರ್ ಕೆ.ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸ.ಪ.ಪೂ. ಕಾಲೇಜಿನ ಆಶ್ರಯದಲ್ಲಿ ಬುಧವಾರ ಸುಳ್ಯ ಸ.ಪ.ಪೂ. ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪರಿಸರದ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಪೂರಕವಾಗಬೇಕು. ಗಿಡ ನೆಟ್ಟು ಅದನ್ನು ಉಳಿಸುವಲ್ಲಿ ಯುವ ಸಮುದಾಯ ಆಸಕ್ತಿ ಹೊಂದಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ದಳ ಸುಬ್ರಾಯ ಭಟ್ ಮಾತನಾಡಿ, ಪ್ರಕೃತಿ ವಿನಾಶಕ್ಕೆ ಪ್ರಯತ್ನಿಸಬೇಡಿ. ಅಕ್ರಮ ಗಣಿಗಾರಿಕೆ, ಅವೈಜ್ಞಾನಿಕ ಮೀನುಗಾರಿಕೆ ಪ್ರಕೃತಿ ವಿಕೋಪದಂತಹ ಘಟನೆಗೆ ಕಾರಣ ಎಂದು ವಿವರಿಸಿದರು. ಕಸ ವಿಲೇವಾರಿ ಕುರಿತು ವಿದೇಶದಲ್ಲಿ ಸಾಕಷ್ಟು ಜಾಗೃತಿ ಇದೆ. ಅಲ್ಲಲ್ಲಿ ಕಸದ ಬುಟ್ಟಿ ಇಟ್ಟು ಎಲ್ಲೆಂದರಲ್ಲಿ ಕಸ ಎಸೆಯದಂತೆ ಎಚ್ಚರ ವಹಿಸಲಾಗಿದೆ. ಆದರೆ ಭಾರತದಲ್ಲಿ ಆ ಜಾಗೃತಿ, ಸೌಲಭ್ಯದ ಕೊರತೆ ಇದ್ದು, ಆ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.
ಗುಡ್ಡ ಪ್ರದೇಶದಲ್ಲಿ ಪ್ರಕೃತಿ ತನ್ನ ಬಳಕೆಗಾಗಿ ಸಂಗ್ರಹಿಸಿಟ್ಟಿರುವ ನೀರನ್ನು ಹಲವೆಡೆ ಪೈಪ್ ಬಳಸಿ ಮನೆ, ತೋಟಕ್ಕೆ ಉಪಯೋಗಿಸುತ್ತಾರೆ. ಉಚಿತವಾಗಿ ಬರುವ ನೀರು ಎಂದು ಬೇಕಾಬಿಟ್ಟಿ ಪೋಲು ಮಾಡಲಾಗುತ್ತದೆ. ಆದರೆ ಈ ರೀತಿ ಬಳಕೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಇದು ಕಾನೂನು ಬಾಹಿರ ಎಂದು ಮಂಜುನಾಥ ಹೇಳಿದರು.
ಸುಳ್ಯ ಸಪ.ಪೂ. ಕಾಲೇಜು ಪ್ರಾಂಶುಪಾಲ ಮೋಹನ ಗೌಡ ಬಿ.ಕೆ. ಮಾತನಾಡಿ, ನೆಲ, ಜಲ, ಗಾಳಿ ಮಾಲಿನ್ಯ ಆಗದಂತೆ ಪ್ರತಿಯೊಬ್ಬರೂ ಜಾಗೃತರಾಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಉಪಾಧ್ಯಕ್ಷ ಶ್ರೀಹರಿ ಕುಕ್ಕುಡೇಲು ಮಾತನಾಡಿ, ವಿದ್ಯಾರ್ಥಿ ಶಕ್ತಿಗೆ ಪರಿಸರ ಸಂರಕ್ಷಿಸುವ ಸಾಮರ್ಥ್ಯ ಇದೆ. ಈ ನಿಟ್ಟಿನಲ್ಲಿ ಹೆಚ್ಚು ಒತ್ತು ಕೊಡಬೇಕು ಎಂದರು.
ವೇದಿಕೆಯಲ್ಲಿ ಸುಳ್ಯ ಪಿಎಸ್‌ಐ ಹರೀಶ್ ಕುಮಾರ್, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ಉಪಸ್ಥಿತರಿದ್ದರು. ನ್ಯಾಯವಾದಿ ಹರೀಶ್ ಬೂಡುಪನ್ನೆ ಸ್ವಾಗತಿಸಿ, ನಾಗೇಶ ವಂದಿಸಿದರು. ದಿನೇಶ್ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಸ.ಪ.ಪೂ. ಕಾಲೇಜಿನ ವಠಾರದಲ್ಲಿ 10 ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳಿಗೆ 30 ಗಿಡಗಳನ್ನು ವಿತರಿಸಲಾಯಿತು.
ಬೆಳೆಯಲು 60 ವರ್ಷ; ಕಡಿಯಲು 5 ನಿಮಿಷ
ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್. ಮಾತನಾಡಿ, ಒಂದು ಗಿಡ ಮರವಾಗಿ ಬೆಳೆಯಲು 60 ವರ್ಷ ಬೇಕು. ಅದನ್ನು ಕಡಿಯಲು 5 ನಿಮಿಷ ಸಾಕು. ಹೀಗಾಗಿ ಕಡಿಯುವ ಮನಃಸ್ಥಿತಿ ಬದಲಾಯಿಸಿ ಬೆಳೆಸುವ ಬಗ್ಗೆ ಯೋಚನೆ ಮಾಡಬೇಕು. ಸ್ವಂತ ಜಾಗೃತಿ ಇಲ್ಲದಿರುವುದೇ ವಿನಾಶಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಿದರು.