Advertisement

ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ

06:15 AM Apr 02, 2018 | |

ಮೈಸೂರು: ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದೆ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ಗೆ ಮತ ಹಾಕಿದರೆ, ಅದು ಕಾಂಗ್ರೆಸ್‌ಗೆ ಮತ ಹಾಕಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಆದರೆ, ವಾಸ್ತವವಾಗಿ ಜೆಡಿಎಸ್‌ಗೆ ಮತಹಾಕಿದರೆ ಅದು ಬಿಜೆಪಿಗೆ ಮತ ನೀಡಿದಂತೆ. ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಿದಂತೆ ಎಂದು ತಿರುಗೇಟು ನೀಡಿದರು.

ವಿಶ್ರಾಂತಿ ಹೆಸರಲ್ಲಿ ಬಂಡೀಪುರದ ರೆಸಾರ್ಟ್‌ನಲ್ಲಿ ಕುಳಿತು ಮುಖ್ಯಮಂತ್ರಿಯವರು ಹಣದ ಬಂಡಲ್‌ ಸಿದ್ಧಮಾಡುತ್ತಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆಗೆ, ಚುನಾವಣೆ ಸಂದರ್ಭದಲ್ಲಿ ತಾವು ಮಾಡಿದ್ದನ್ನು ನೆನಪಿಸಿಕೊಂಡು ಅವರು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಕಿಡಿ ಕಾರಿದರು.

ಬಿಜೆಪಿಯ ಕೆಲವರು ಸಂಪರ್ಕದಲ್ಲಿದ್ದಾರೆ: ಮಾಲೀಕಯ್ಯ ಗುತ್ತೇದಾರ್‌ ಅವರು ಬಿಜೆಪಿಗೆ ಹೋಗಿರುವುದರಿಂದ ಸ್ಥಳೀಯ ಬಿಜೆಪಿ ನಾಯಕರು ಏನು ಮಾಡಬೇಕು? ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿರುವ ಅವರು ಏನು ತಾನೇ ಮಾಡಿಯಾರು? ಸಹಜವಾಗಿ ಅವರು ಕಾಂಗ್ರೆಸ್‌ ಸೇರುತ್ತಾರೆ. ಈಗಾಗಲೇ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.ಇನ್ನು, ಬಿಜೆಪಿಯ ಮಾಜಿ ಶಾಸಕ ಹರತಾಳು ಹಾಲಪ್ಪ ಕಾಂಗ್ರೆಸ್‌ ಸೇರುವ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಸ್ಥಳೀಯ ಮುಖಂಡರ ಜತೆಗೆ ಅವರು ಮಾತನಾಡುತ್ತಿದ್ದಾರೆ.

ತಾವು ಹೈಕಮಾಂಡ್‌ ಜತೆಗೆ ಮಾತನಾಡಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಹಿಂದುಳಿದ ವರ್ಗಗಳ ನಾಯಕರಾಗಿರುವ ಹಾಲಪ್ಪ ವಿರುದ್ಧದ ಆರೋಪ ನಿರಾಧಾರ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದು ಸಮರ್ಥಿಸಿಕೊಂಡರು. ಜೊತೆಗೆ, ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಕಾಂಗ್ರೆಸ್‌ ಸೇರುವ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ. ಅವರು ನಮ್ಮನ್ನು ಸಂಪರ್ಕಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಹೆಗಡೆಯವರನ್ನು ವಜಾ ಮಾಡಿ: ಅನಂತಕುಮಾರ್‌ ಹೆಗಡೆ ಅವರು ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿದ್ದು ಸತ್ಯವಲ್ಲವೆ? ಅಮಿತ್‌ ಶಾ ಪಾಲ್ಗೊಂಡಿದ್ದ ಸಭೆಯಲ್ಲಿ ಅದನ್ನು ದಲಿತ ಮುಖಂಡರು ಪ್ರಶ್ನಿಸಿದರೆ ತಪ್ಪೇನು? ಇದರಲ್ಲಿ ಕಾಂಗ್ರೆಸ್‌ ಕೈವಾಡವಿಲ್ಲ. ಅನಂತಕುಮಾರ್‌ ಹೆಗಡೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಅಲ್ಲ. ಅನಂತಕುಮಾರ್‌ ಹೆಗಡೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುತ್ತೇವೆ ಎಂದು ಹೇಳಬೇಕಿತ್ತು, ಇಲ್ಲವೇ ವಜಾ ಮಾಡಬೇಕಿತ್ತು.

7.5 ಕ್ವಿಂಟಲ್‌ ಸೇಬಿನ ಹಾರ
ಸಿದ್ದರಾಮಯ್ಯನವರು ಮೂರನೇ ದಿನವೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ಬಿಸಿಲಿನಿಂದ ರಕ್ಷಣೆ ಪಡೆಯಲು ಕಾಂಗ್ರೆಸ್‌ ಟೋಪಿ, ತಂಪು ಕನ್ನಡಕ ಹಾಕಿಕೊಂಡು, ಮಧ್ಯೆ ನೀರು ಕುಡಿಯುತ್ತಾ ದಣಿವಾರಿಸಿಕೊಂಡು ಉತ್ಸಾಹದಿಂದಲೇ ಮುನ್ನಡೆದರು. ಸಿದ್ದು ಹೋದಲ್ಲೆಲ್ಲಾ ಗ್ರಾಮದ ಪ್ರವೇಶ ದ್ವಾರದಲ್ಲಿ ತಳಿರು-ತೋರಣ ಕಟ್ಟಿ, ಮಂಗಳವಾದ್ಯದೊಂದಿಗೆ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರು. ಹೂಟಗಳ್ಳಿಗೆ ಆಗಮಿಸಿದಾಗ ಅಭಿಮಾನಿಗಳು ಅವರಿಗೆ 7.5 ಕ್ವಿಂಟಲ್‌ ತೂಕದ ಸೇಬಿನ ಬೃಹತ್‌ ಹಾರ ಹಾಕಿದರು. ಈ ಬೃಹತ್‌ ಹಾರವನ್ನು ಹೊತ್ತು ತರಲು ಕ್ರೇನ್‌ ಬಳಸಲಾಗಿತ್ತು.

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಏ.12ರ ಬಳಿಕ ಪ್ರಕಟವಾಗಲಿದೆ.
 – ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next