Advertisement

ನಾಣ್ಯ ಹಾಕಿದರೂ ಬರುತ್ತಿಲ್ಲ ನೀರು!

04:19 AM Mar 16, 2019 | Team Udayavani |

ಸುಬ್ರಹ್ಮಣ್ಯ: ಬೇಸಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೇಟೆ, ಪಟ್ಟಣಗಳಿಗೆ ತೆರಳುವವರು ಬಾಯಾರಿಕೆ ಆದಾಗ ನೀರಿಗಾಗಿ ಸಾರ್ವಜನಿಕ ನೀರು ಘಟಕಗಳತ್ತ ಮುಖ ಮಾಡುತ್ತಾರೆ. ಸರಕಾರವು ಖಾಸಗಿ ಗುತ್ತಿಗೆ ಸಂಸ್ಥೆಗಳ ಮೂಲಕ ಅನುಷ್ಠಾನಿಸಿರುವ ಒಂದು ರೂಪಾಯಿಗೆ ನೀರಿನ ಯೋಜನೆಯ ಘಟಕ ಮಾತ್ರ ಪ್ರಯೋಜನಕ್ಕೆ ಸಿಗುತ್ತಿಲ್ಲ.

Advertisement

2017ನೇ ಸಾಲಿನಲ್ಲಿ ಆಯ್ದ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿ ನಾಣ್ಯ ಬಳಸಿ ಕುಡಿಯುವ ನೀರು ಪಡೆದುಕೊಳ್ಳುವ ಯೋಜನೆಯನ್ನು ಸರಕಾರ ಜಾರಿಗೆ ತಂದಿತ್ತು. ಅದರಂತೆ ಸುಳ್ಯ ತಾಲೂಕಿನ ಹಲವೆಡೆ ಇಂತಹ ಘಟಕಗಳನ್ನು ಸ್ಥಾಪನೆ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಇನ್ನೂ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಜಾರಿಗೆ ಬಂದಿಲ್ಲ.

ತಾಲೂಕಿನ ಪ್ರಮುಖ 11 ಗ್ರಾ.ಪಂ. ಗಳ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಆರ್‌ ಸಿಸಿ ಛಾವಣಿ ಅಳವಡಿಸಿ ಘಟಕ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ ಸಹಿತ ಲಕ್ಷಾಂತರ ರೂ. ವೆಚ್ಚದ ಸಾಮಗ್ರಿಗಳನ್ನು ಈ ಘಟಕಕ್ಕೆ ಜೋಡಿಸಲಾಗಿದೆ. ಕೆಲವೆಡೆ ಘಟಕಗಳಿಗೆ ವಿದ್ಯುತ್‌ ಸಂಪರ್ಕವೂ ಆಗಿದೆ. ಆದರೆ ಯಾವ ಘಟಕವೂ ಇನ್ನೂ ಕಾರ್ಯಾರಂಭಿಸಿಲ್ಲ. ಕೆಲ ಘಟಕದ ಸುತ್ತ ಪೊದೆಗಳೂ ಬೆಳೆದಿವೆ.

ಹಣ ಬಂದಿಲ್ಲ
ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷೆ ಯೋಜನೆಯಿದು. ಎನ್‌ ಆರ್‌ಡಬ್ಲೂಎಸ್‌ಆರ್‌ ಯೋಜನೆಯಂತೆ ಈ ಘಟಕಗಳನ್ನು ಸ್ಥಾಪಿಸಲಾಗಿದೆ. ರಾಜ್ಯ ಮಟ್ಟದ ಕೆಆರ್‌ಡಿಎಲ್‌ ಸಂಸ್ಥೆ ಇದರ ಗುತ್ತಿಗೆ ಪಡೆದುಕೊಂಡಿತ್ತು. ಐದು ವರ್ಷಗಳ ನಿರ್ವಹಣೆಗೆ ಅವರಿಗೆ ನೀಡಲಾಗಿತ್ತು.

ಅವಧಿ ಪೂರ್ಣವಾದ ಬಳಿಕ ಆಯಾ ಸ್ಥಳೀಯ ಆಡಳಿತ ಗಳು ಇದರ ನಿರ್ವಹಣೆ ಮಾಡುವ ಜವಾಬ್ದಾರಿ ಹೊರ ಬೇಕು. ಆದರೆ ಘಟಕಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿದ್ದ ನಳ್ಳಿ ನೀರಿನ ವ್ಯವಸ್ಥೆಗಳೂ ಕೈಕೊಟ್ಟಿವೆ.

Advertisement

ನೋಟಿಸ್‌ ಜಾರಿ
ಒಂದು ಹಂತದಲ್ಲಿ ಹಣಕಾಸು ಒದಗಿಸಲಾಗಿದೆ. ಅನಂತರದಲ್ಲಿ ಹಣಕಾಸು ಪೂರೈಕೆ ಆಗದೆ ಇರುವುದು ಕಾರ್ಯಾರಂಭ ಆಗದಿರಲು ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಗುತ್ತಿಗೆದಾರರು ನಿಗದಿತ ಅವ ಧಿಯೊಳಗೆ ಕೆಲಸ ಪೂರ್ಣಗೊಳಿಸಿಲ್ಲ.

ಸರಕಾರದ ಮಹತ್ವಾಕಾಂಕ್ಷಿ ಯೋಜನೆಯೇ ಹಳ್ಳ ಹಿಡಿದಿದೆ. ಕೆಲಸ ಪೂರ್ಣಗೊಳಿಸುವಂತೆ ಎರಡೆರಡು ಬಾರಿ ಇಲಾಖೆ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಿದೆ.

ಎಲ್ಲೆಲ್ಲಿ ಘಟಕ?
ಸಾರ್ವಜನಿಕ ಕುಡಿಯುವ ನೀರಿನ ಘಟಕವು ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ.ನ ಯೇನೆಕಲ್ಲು, ಹರಿಹರಪಳ್ಳತ್ತಡ್ಕ, ಕೊಲ್ಲಮೊಗ್ರು, ಮಡಪ್ಪಾಡಿ, ಬಾಳಿಲ, ಪಂಜ-2, ಕೊಡಿಯಾಲ, ಕಳಂಜ, ಕಲ್ಮಡ್ಕ, ಎಣ್ಮೂರು ಇಲ್ಲಿ ನಿರ್ಮಾಣಗೊಂಡಿವೆ.

ಇನ್ನೂ ವಿದ್ಯುತ್‌ ಸಂಪರ್ಕವೇ ಆಗಿಲ್ಲ!
ತಾ| ವ್ಯಾಪ್ತಿಯ ಉದ್ದೇಶಿತ 11 ಸ್ಥಳಗಳ ಪೈಕಿ ಕೆಲವೆಡೆ ಕೆಲಸ ಅಂತಿಮ ಹಂತದಲ್ಲಿದ್ದರೆ ಇನ್ನೂ ಕೆಲವೆಡೆ ಅರೆಬರೆಯಾಗಿದೆ. ಘಟಕಗಳಿಗೆ ವಿದ್ಯುತ್‌ ಲೈನ್‌ ಅಳವಡಿಸುವ ಕಾರ್ಯ ವರ್ಷದ ಹಿಂದೆಯೇ ಪೂರ್ಣಗೊಂಡಿದೆ. ಘಟಕಗಳ ವೈರಿಂಗ್‌ ಅಳವಡಿಕೆ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿ ಕೊಟ್ಟಿದ್ದಾರೆ. ಆದರೆ ವಿದ್ಯುತ್‌ ಸಂಪರ್ಕ ಇನ್ನೂ ಆಗಿಲ್ಲ.

ನಿರ್ಲಕ್ಷ್ಯ ಸರಿಯಲ್ಲ
ಕಾಯಿನ್‌ ಹಾಕಿ ಕುಡಿಯುವ ನೀರು ಪಡೆಯುವ ಘಟಕವಿದ್ದರೂ ಅದು ಬಳಕೆಗೆ ಸಿಕ್ಕಿಲ್ಲ. ಕೋಟಿಗಟ್ಟಲೆ ವೆಚ್ಚ ಮಾಡಿ ಈ ರೀತಿ ಯೋಜನೆ ಕುರಿತು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.
– ರಮೇಶ್‌
ಆಟೋ ಚಾಲಕ, ಯೇನೆಕಲ್ಲು

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next