Advertisement

ಧರ್ಮದ್ವೇಷಿಯಲ್ಲ ; ಧರ್ಮಪಾಲಕರಾಗಿ: ಸಿಎಂ

06:05 AM Jan 08, 2018 | Harsha Rao |

ಬೆಳ್ತಂಗಡಿ: ಶಿಕ್ಷಣದ ಉದ್ದೇಶ ಸ್ವಾರ್ಥಭಾವನೆ, ಅಮಾನವೀಯ ನಡತೆ ಬೆಳೆಸುವುದು ಅಲ್ಲ. ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗ ಶಾಲೆಯಾಗದಿರಲಿ, ಚುನಾವಣೆಯ ದೃಷ್ಟಿಯಿಂದ ವಿಪಕ್ಷ ಇಂಥವನ್ನು ಮಾಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರವಿವಾರ ಇಲ್ಲಿನ ಮಿನಿ ವಿಧಾನಸೌಧ ಉದ್ಘಾಟಿಸಿದ ಅವರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 53 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಧಾರ್ಮಿಕ ಸ್ವಾತಂತ್ರ ಗೌರವಿಸಿ
ಧರ್ಮ ಪಾಲನೆಗೆ ಸ್ವಾತಂತ್ರ ಇದೆ. ಇನ್ನೊಂದು ಧರ್ಮದ ದ್ವೇಷ ಸಲ್ಲದು. ಧರ್ಮಪಾಲಕರಾಗಬೇಕು, ಆದರೆ ಧರ್ಮ ದ್ವೇಷಿಗಳಾಗಬಾರದು. ಹೆಣಗಳ ಮೇಲೆ, ಮೃತ್ಯುವಿನಲ್ಲಿ ರಾಜಕೀಯ ಮಾಡಬಾರದು. ಅಂತಹವರನ್ನು ನಾಗರಿಕರು ಒಕ್ಕೊರಲಿನಿಂದ ತಿರಸ್ಕರಿಸಬೇಕು. ಸಮಾಜದಲ್ಲಿ ಅಶಾಂತಿ ಇದ್ದರೆ, ನೆಮ್ಮದಿ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಅಸಾಧ್ಯ. ನಾನು ಎಲ್ಲರನ್ನೂ ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯುವ ನಿಲುಮೆಯವನು ಎಂದು ಅವರು ಹೇಳಿದರು.

ದ.ಕ.ದಲ್ಲಿ  ಇಂದಿರಾ ಕ್ಯಾಂಟೀನ್‌
ಮುಂದಿನ ತಿಂಗಳು ಬೆಳ್ತಂಗಡಿ ಸಹಿತ ದ.ಕ. ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲಾಗುವುದು ಎಂದರು.

ಬಂಗೇರರೇ ಸ್ಪರ್ಧಿ
ಐದು ಬಾರಿ ಗೆದ್ದ ಜಿಲ್ಲೆಯ ಹಿರಿಯ ನಾಯಕ ಕೆ. ವಸಂತ ಬಂಗೇರರು ಸದಾ ಕ್ಷೇತ್ರದ ಕುರಿತೇ ಚಿಂತಿಸುವ, ನೇರ ನುಡಿಯ ನಿಸ್ವಾರ್ಥಿ, ಪ್ರಾಮಾಣಿಕ ರಾಜಕಾರಣಿ. ಮುಂದಿನ ಬಾರಿಯೂ ಅವರನ್ನೇ ಗೆಲ್ಲಿಸಬೇಕು. ಅವರು ಉತ್ತಮ ಸ್ನೇಹಿತ, ವಿಶ್ವಾಸ- ನಂಬಿಕೆಗೆ ಅರ್ಹ ವ್ಯಕ್ತಿ. ಆದ್ದರಿಂದ ಬಂಗೇರರೇ ಜನರಿಗೆ ಆಸ್ತಿ ಎಂದರು.

Advertisement

ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಿ ಸುವ ಕನಸಿಗೆ ಕೆಲವು ಅಭಿವೃದ್ಧಿ ವಿರೋಧಿ ಪರಿಸರವಾದಿ ಗಳು ರಾಜಕೀಯ ಕಾರಣಕ್ಕಾಗಿ ಹಸಿರು ಪೀಠಕ್ಕೆ ಹೋಗಿ ತಡೆ ತಂದರು. ಈಗ ತಡೆಯಾಜ್ಞೆ ತೆರವಾ ಗಿದ್ದು, ಸಂಕೀರ್ಣ ನಿರ್ಮಾಣವಾಗಲಿದೆ ಎಂದರು.

ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಕೆ. ಪ್ರತಾಪಚಂದ್ರ ಶೆಟ್ಟಿ, ಸುಜಿತಾ ವಿ. ಬಂಗೇರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಗೇರು ಅಭಿವೃದ್ಧಿ ನಿಗಮದ ಬಿ.ಎಚ್‌. ಖಾದರ್‌, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕ ಉಪಾಧ್ಯಕ್ಷ ಬಿ. ಪೀತಾಂಬರ ಹೆರಾಜೆ, ಬ್ಲಾಕ್‌ ಕಾಂಗ್ರೆಸ್‌ ನಗರ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ವಿ. ಕಿಣಿ, ಜಿ.ಪಂ. ಸದಸ್ಯರಾದ ಸಾಹುಲ್‌ ಹಮೀದ್‌ ಕೆ.ಕೆ., ಪಿ. ಧರಣೇಂದ್ರ ಕುಮಾರ್‌, ಶೇಖರ ಕುಕ್ಕೇಡಿ, ನಮಿತಾ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್‌, ಎಪಿಎಂಸಿ ಅಧ್ಯಕ್ಷ ಸತೀಶ್‌ ಕೆ. ಕಾಶಿಪಟ್ಣ, ಪಕ್ಷದ ಮುಖಂಡರಾದ ಮಮತಾ ಗಟ್ಟಿ, ರಾಜಶೇಖರ ಕೋಟ್ಯಾನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಭಿ ನಂದನ್‌ ಹರೀಶ್‌ ಕುಮಾರ್‌, ಕೆ.ಎಸ್‌. ಯೋಗೀಶ್‌ ಕುಮಾರ್‌ ನಡಕರ, ಎಚ್‌. ಪದ್ಮಕುಮಾರ್‌ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿ, ಶಿಕ್ಷಕ ಅಜಿತ್‌ ಕೊಕ್ರಾಡಿ ನಿರ್ವ ಹಿಸಿ, ತಾ.ಪಂ. ಸಿಇಒ ಬಸವರಾಜ್‌ ಅಯ್ಯಣ್ಣನವರ್‌ ವಂದಿಸಿದರು.

ದುಷ್ಕರ್ಮಿಗಳ ದಾಳಿಗೆ ಬಲಿಯಾದ ದೀಪಕ್‌ ಮತ್ತು ಬಶೀರ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮುಖ್ಯಮಂತ್ರಿಗಳ ಸೂಚನೆಯಂತೆ ಸಭೆಯ ಆರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ವೈದ್ಯ ಕಾಲೇಜು: ಮನವಿ
ಶಾಸಕ, ರಾಜ್ಯ ಸಣ್ಣ  ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. 
ತಾಲೂಕಿಗೆ ವೈದ್ಯಕೀಯ ಕಾಲೇಜು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಹೆಚ್ಚು ಕಿಂಡಿ ಅಣೆಕಟ್ಟು ಮಂಜೂರು ಮಾಡಬೇಕು. 1,200 ಎಕ್ರೆ ಡಿಸಿ ಮನ್ನಾ ಭೂಮಿಯನ್ನು ಅರ್ಹರಿಗೆ ಹಂಚಲು ಅನುವು ಮಾಡಿಕೊಡಬೇಕು. ದ.ಕ.- ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಹಕ್ಕು ದೊರಕಿಸಿಕೊಡಬೇಕು. ಅಕ್ರಮ ಸಕ್ರಮದಲ್ಲಿ ಕುಮ್ಕಿ ಮಂಜೂರಿಗೆ ಅನುಮತಿ ಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next