Advertisement
“”ಪಿ.ಜಿ.ಗೆ ಸೇರುವ ಮುನ್ನ ಎರಡು ವರ್ಷ ಚಿಕ್ಕವರಿದ್ದೆವು. ಈಗ ಎರಡು ವರ್ಷ ದೊಡ್ಡವರಾಗಿದ್ದೇವೆ”- ಇದೇ ಎಮ್‌ಎಸ್‌ಸಿ ಮುಗಿಸಿದ ಮಹಾನುಭಾವರು ಕಂಡುಕೊಂಡ ಬದಲಾವಣೆ. ಯಾವುದೋ ಒಂದು ಪ್ರಕ್ರಿಯೆಗೆ ಒಳಗಾಗುವಾಗ, ವ್ಯವಸ್ಥೆಗೆ ಒಗ್ಗಿಕೊಳ್ಳುವಾಗ, ಮುಂದೇನೋ ಮಹತ್ತರವಾದದ್ದು ಸಂಭವಿಸಲಿದೆ ಅಂತ ಬಹಳ ವಿಶ್ವಾಸ ಇಟ್ಟುಕೊಂಡಿರುತ್ತೇವೆ. ಶನಿಕಥೆ ಪೂಜೆ ಮಾಡಿಸಿದ ಕೂಡಲೇ ಶನಿದೋಷ ಮಾಯವಾಗುತ್ತದೆ, ಗ್ರೀನ್ ಟೀ ಕುಡಿಯುತ್ತಿದ್ದರೆ ತೂಕ ಕಡಿಮೆಯಾಗುತ್ತದೆ, ಬಿಸಿಹಾಲಿಗೆ ಅರಸಿನ ಹಾಕಿ ದಿನಾ ಕುಡಿದರೆ ಶೀತ ನಿಯಂತ್ರಣಕ್ಕೆ ಬರುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಕಲಿತ ಕೂಡಲೇ ಕೆಲಸ ಸಿಗುತ್ತದೆ- ಎಂದೋ ಬರುವ ರಾಮನಿಗಾಗಿ ದಿನವೂ ಹಣ್ಣು ಆಯ್ದಿಡುತ್ತಿದ್ದ ಶಬರಿಯ ಹಾಗೆ, ಎಂದೋ ಘಟಿಸಲಿರುವ ಬಹುನಿರೀಕ್ಷಿತ ಅಂತ್ಯಕ್ಕೆ ಈಗ ಅನುಭವಿಸುತ್ತಿರುವ ಕಷ್ಟಗಳನ್ನೆಲ್ಲ ನುಂಗಿಕೊಂಡು ಕಾಯುತ್ತಿರುತ್ತೇವೆ. ಅಷ್ಟಾದರೂ ಮೊದಲು ಮತ್ತು ನಂತರವನ್ನು ಪ್ರತ್ಯೇಕಿಸಲಾಗದ ಏನೂ ಬದಲಾಗಿಲ್ಲ ಎಂಬ ದುಃಖ ತರುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.
Related Articles
Advertisement
ಬಡಜನರೇ ತುಂಬಿದ್ದ ಒಂದು ಊರಿತ್ತು. ಅಲ್ಲಿ ಎಲ್ಲರೂ ಬಡವರು ಹಾಗೂ ಸಾಲಗಾರರು. ಪ್ರತಿಯೊಬ್ಬರೂ ಮತ್ತೂಬ್ಬರಿಂದ ಯಾವುದೋ ಕಾರಣಕ್ಕೆ ಸಾಲ ತೆಗೆದುಕೊಂಡಿದ್ದರು, ಮರಳಿಸಲು ಯಾರೊಬ್ಬರಲ್ಲಿಯೂ ಹಣ ಇರಲಿಲ್ಲ. ಆ ಊರಲ್ಲಿ ಒಂದು ವಸತಿ ಗೃಹ ಇತ್ತು. ಅದೂ ನಷ್ಟದಲ್ಲೇ ನಡೆಯುತ್ತಿತ್ತು. ಒಂದು ದಿನ ಒಬ್ಬ ಶ್ರೀಮಂತ ಅತಿಥಿ ಅಲ್ಲಿಗೆ ಬಂದ. ವಸತಿ ಗೃಹದಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ. ವಸತಿ ಗೃಹದ ಮ್ಯಾನೇಜರ್ ಉಳಿಯುವ ಮುನ್ನ ಅತಿಥಿಯು ಮುಂಗಡವಾಗಿ ಸ್ವಲ್ಪ ಹಣ ಪಾವತಿಸಬೇಕೆಂದೂ, ಅತಿಥಿಗೆ ವಸತಿಗೃಹ ಇಷ್ಟವಾಗದಿದ್ದರೆ ಅದನ್ನು ಮರಳಿಸಲಾಗುವುದು ಎಂದೂ ಹೇಳಿದ. ಅತಿಥಿ ಒಪ್ಪಿ ಮುಂಗಡ ಹಣ ಪಾವತಿಸಿದ. ವಸತಿಗೃಹದ ಅಡುಗೆಯವನ ಮೂರು ತಿಂಗಳ ಸಂಬಳ ಬಾಕಿ ಇತ್ತು ಹಾಗೂ ಆ ಹಣ ಅತಿಥಿ ಪಾವತಿಸಿದ ಮುಂಗಡ ಹಣಕ್ಕೆ ಸಮವಾಗಿತ್ತು. ಮ್ಯಾನೇಜರ್ ಅಡುಗೆಯವನಿಗೆ ಮೂರು ತಿಂಗಳ ಸಂಬಳ ತೆಗೆದುಕೊಳ್ಳೆಂದು ಹೇಳಿ ಆ ಹಣ ನೀಡಿದ. ಅಡುಗೆಯವನು ಹಿಂದೊಮ್ಮೆ ದಿನಸಿ ಅಂಗಡಿಯವನ ಬಳಿ ಸಾಲ ಮಾಡಿದ್ದ. ಈಗ ನೋಡಿದರೆ ತನಗೆ ಸಿಕ್ಕ ಸಂಬಳವೂ ದಿನಸಿಯವನ ಸಾಲದ ಹಣವೂ ಸರಿಸಮವಾಗಿದೆ. ಅವನು ಕೂಡಲೇ ದಿನಸಿ ಅಂಗಡಿಯವನ ಸಾಲ ತೀರಿಸಿದ. ದಿನಸಿ ಅಂಗಡಿಯವ ತನ್ನ ಮಡದಿಯ ಕಾಯಿಲೆಗೆ ಮದ್ದು ಮಾಡಿದ ವೈದ್ಯರ ಫೀಸ್ ಪಾವತಿಸಿರಲಿಲ್ಲ. ಅಡುಗೆಯವ ತೀರಿಸಿದ ಸಾಲ ಹಾಗೂ ವೈದ್ಯನ ಬಾಕಿ ಹಣ ಸಮವಾಗಿದೆ. ಅವನೂ ಕೂಡಲೇ ವೈದ್ಯನ ಫೀಸ್ ಕಟ್ಟಿದ. ವೈದ್ಯ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ನರ್ಸ್ ನ ಸಂಬಳ ಬಾಕಿ ಇಟ್ಟಿದ್ದ. ತನಗೀಗ ಬಂದ ಹಣವೂ ಸಂಬಳದ ಮೊತ್ತವೂ ಒಂದೇ ಆಗಿರೋದನ್ನ ಗಮನಿಸಿದ ಆತ ಕೂಡಲೇ ಅವಳ ಸಂಬಳ ಪಾವತಿಸಿದ. ಆ ನರ್ಸ್ ಆ ಊರಿಗೆ ಹೊಸತಾಗಿ ಬಂದಿದ್ದಳು ಹಾಗೂ ಮನೆಯ ವ್ಯವಸ್ಥೆ ಆಗಿರದ ಕಾರಣ ವಸತಿಗೃಹದಲ್ಲಿ ಉಳಿದುಕೊಂಡಿದ್ದಳು, ಸಂಬಳ ಬಾರದೇ ಇದ್ದುದರಿಂದ ಬಾಡಿಗೆ ಕೊಟ್ಟಿರಲಿಲ್ಲ. ಈಗ ಸಂಬಳ ಬಂತು, ಮ್ಯಾನೇಜರ್‌ಗೆ ಬಾಡಿಗೆ ಹಣ ಕೊಟ್ಟಳು. ಅಷ್ಟರಲ್ಲಿ ಶ್ರೀಮಂತ ಅತಿಥಿ ಬಂದ- ತನಗೆ ವಸತಿಗೃಹ ಇಷ್ಟವಾಗಿಲ್ಲ, ಹಣ ಮರಳಿಸಿ- ಅಂತಂದ. ಮ್ಯಾನೇಜರ್ ಹಣ ಮರಳಿಸಿ ಕೊಟ್ಟ.
ಹಣ ಒಂದು ಸುತ್ತು ಹಾಕಿ ಬಂದದ್ದರಿಂದ ಅವರೆಲ್ಲರ ಸಾಲ ತೀರಿದಂತಾಯ್ತು. ಆದರೆ, ಅವರಲ್ಲಿ ಯಾರ ಬಳಿಯೂ ಹಣವಿಲ್ಲ. ಹಾಗಾಗಿ, ಸಾಲ ತೀರುವ ಮೊದಲು ಹಾಗೂ ನಂತರದ ಅವರ ಹಣಕಾಸಿನ ಸ್ಥಿತಿ- ಏನೂ ಬದಲಾಗಿಲ್ಲ!
ಯಶಸ್ವಿನಿ ಕದ್ರಿ