Advertisement

ಬೇಸರ ಇಲ್ಲ; ಮತ್ತೂಮ್ಮೆ ಬರುವ ನಿರೀಕ್ಷೆ ಇದೆ: ಪಲಿಮಾರು ಶ್ರೀ

09:57 AM May 02, 2018 | Harsha Rao |

ಉಡುಪಿ: ಈ ಬಾರಿ ಪ್ರಧಾನಿ ಶ್ರೀ ಕೃಷ್ಣ ದರ್ಶನ ಪಡೆಯದ ಬಗ್ಗೆ ಬೇಸರವಿಲ್ಲ. ಅವರು ಮತ್ತೂಮ್ಮೆ ಬರುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಶ್ರೀಪಾದರನ್ನು ಭೇಟಿ ಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ಸಮಾವೇಶಗಳ ನಡುವೆ ತಾನು ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಇರಿಸಿ ಕೊಳ್ಳುವುದಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ. ಅಲ್ಲದೆ ಇನ್ನೊಮ್ಮೆ ಭೇಟಿ ನೀಡುವ ಕುರಿತು ಹೇಳಿದ್ದಾರೆ ಎಂದರು.

Advertisement

ಪ್ರಧಾನಿ ಅಷ್ಟಮಠಗಳ ಬಗ್ಗೆ, ಮಧ್ವಾಚಾರ್ಯರ ಬಗ್ಗೆ ಇಂದಿನ ಸಮಾವೇಶದಲ್ಲಿ ಚೆನ್ನಾಗಿ ಮಾತನಾಡಿರುವುದು ಕೇಳಿದ್ದೇನೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಬಗ್ಗೆ ಗೌರವ, ಅಭಿಮಾನವಿದೆ. ಮುಂದಿನ ಬಾರಿ ಪಾದೂರಿಗೆ ಬರುವಾಗ ಅವರನ್ನು ಶ್ರೀ ಕೃಷ್ಣ ಮಠಕ್ಕೆ ಬರುವಂತೆ ಆಹ್ವಾನಿಸಲಾಗುವುದು. ಅವರು ಮಠಕ್ಕೆ ಭೇಟಿ ನೀಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದುದರಿಂದ ಮಠದಲ್ಲಿ ಪೂರ್ವತಯಾರಿ ನಡೆಸಿರಲಿಲ್ಲ. ಒಂದು ವೇಳೆ ಕಾರ್ಯಕ್ರಮದ ಬದಲಾವಣೆಯಿಂದ ಆಗಮಿಸಿದರೆ ಎನ್ನುವ ನಿರೀಕ್ಷೆಯಲ್ಲಿ ಪೊಲೀಸರು ಭದ್ರತಾ ವ್ಯವಸ್ಥೆ ಮಾಡಿದ್ದಾರೆ ಎಂದು ಶ್ರೀಪಾದರು ಹೇಳಿದರು.

ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡದ ಪ್ರಧಾನಿ
ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಿದ ಪ್ರಧಾನಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಇತ್ತಾದರೂ ಅವರು ಭೇಟಿ ನೀಡದೆ ಮುಂದಿನ ಕಾರ್ಯ ಕ್ರಮಕ್ಕೆ ತೆರಳಿದರು. ಕೃಷ್ಣ ಮಠಕ್ಕೆ ಭೇಟಿ ಅಧಿಕೃತವಾಗಿ ಇಲ್ಲದಿದ್ದರೂ ನಿರೀಕ್ಷೆ ಇದ್ದೇ ಇತ್ತು. ಸ್ವಾಗತಿಸಲು ಸಿದ್ಧತೆಗಳೂ ನಡೆದಿದ್ದವು. 

ಸಾಮಾನ್ಯ ಭದ್ರತೆ
ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಭೇಟಿ ಬಗ್ಗೆ ಯಾವುದೇ ಮಾಹಿತಿ ನೀಡದ ಪೊಲೀಸ್‌ ಅಧಿಕಾರಿಗಳು ಮಠದ ಸುತ್ತಮುತ್ತ ಸಾಮಾನ್ಯ ಭದ್ರತೆ ಒದಗಿಸಿದ್ದರು. ಮಠದ ಸುತ್ತ ಮುತ್ತಲಿನ ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚಿದ್ದವು. ಶ್ರೀಕೃಷ್ಣ ಮಠ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದರೂ ಮಧ್ಯಾಹ್ನದ ಬಳಿಕ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next