ಬೆಂಗಳೂರು: ಜಾಹೀರಾತು ನೀತಿಗೆ ಸಂಬಂಧಿಸಿದ ಬೈಲಾಗಳ ಕರಡು ನೀತಿಗೆ ಅನುಮೋದನೆ ನೀಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ ಎಂಬ ಸರ್ಕಾರದ ಹೇಳಿಕೆಗೆ ಕಾನೂನು ಚಾಟಿ ಬೀಸಿದ ಹೈಕೋರ್ಟ್, ಇದು ಕೊನೆಯ ಅವಕಾಶ. ಇನ್ನೊಂದು ವಾರದಲ್ಲಿ ಕರಡು ಬೈಲಾಗಳಿಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಬೇಕು ಎಂದು ತಾಕೀತು ಮಾಡಿದೆ.
ನಗರದಲ್ಲಿನ ಅಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಜಾಹಿರಾತು ನೀತಿ ಕರಡು ಅನುಮೋದನೆಗೆ ಚುನಾವಣಾ ನೀತಿ ಸಂಹಿತೆ ಅನ್ವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಜಾಹೀರಾತು ನೀತಿ ಹಾಗೂ ಬೈಲಾಗೆ ಅನುಮೋದನೆ ನೀಡುವ ಕರಡು ಸರ್ಕಾರದ ಮುಂದಿದೆ. ಆದರೆ, ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಅನುಮೋದನೆ ನೀಡಲು ಸಾಧ್ಯವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಅಸಮಧಾನಗೊಂಡ ನ್ಯಾಯಪೀಠ, ನೀತಿ ಸಂಹಿತೆ ಕಾರಣ ಹೇಳಿ ಕೋರ್ಟ್ ಆದೇಶ ಪಾಲಿಸದೇ ಇರಲು ಸಾಧ್ಯವೇ? ಅಷ್ಟಕ್ಕೂ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ಕೋರ್ಟ್ ಆದೇಶ ಹೊರಡಿಸಿತ್ತಲ್ಲವೇ? ಕೋರ್ಟ್ ಆದೇಶ ಪಾಲಿಸಲು ಚುನಾವಣಾ ನೀತಿ ಸಂಹಿತೆ ಅದ್ಹೇಗೆ ಅಡ್ಡಿ ಬರುತ್ತದೆ ಎಂದು ಪ್ರಶ್ನಿಸಿತು.
ಆಗ ಅಡ್ವೋಕೇಟ್ ಜನರಲ್, ಜಾಹೀರಾತು ನೀತಿಗೆ ಅನುಮೋದನೆ ನೀಡಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂಬುದಾಗಿ ನ್ಯಾಯಾಲಯ ಲಿಖೀತ ಆದೇಶ ನೀಡಿದಲ್ಲಿ, ಈ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಆ ಮನವಿ ಪರಿಗಣಿಸಿದ ನ್ಯಾಯಪೀಠ, ಜಾಹೀರಾತು ನೀತಿಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಬಹುದು. ಸರ್ಕಾರಕ್ಕೆ ಇದೇ ಕೊನೆಯ ಅವಕಾಶ. ಇನ್ನೊಂದು ವಾರದಲ್ಲಿ ಕರಡು ಬೈಲಾಗೆ ಅನುಮೋದನೆ ನೀಡಿ, ಅದನ್ನು ಕೋರ್ಟ್‌ಗೆ ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ಮಾ.22ಕ್ಕೆ ಮುಂದೂಡಿತು.