ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ಮೇಲ್ದರ್ಜೆ ಗೇರಿದಾಗ ಹಳ್ಳಿ ಅಭಿವೃದ್ಧಿಯಾಗುತ್ತದೆ ಎಂಬುದು ಜನಜನಿತವಾದ ವಿಚಾರ. ಆದರೆ ನರಿಕೊಂಬು ಗ್ರಾ.ಪಂ. ವ್ಯಾಪ್ತಿ ಯಲ್ಲಿ ಗ್ರಾಮದ ಮುಖ್ಯರಸ್ತೆ ಮೇಲ್ದರ್ಜೆಗೇರಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ!
ರಾ.ಹೆ. 75ರ ಪಾಣೆಮಂಗಳೂರು ಶ್ರೀ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಿಂದ ಶಂಭೂರು ಮೂಲಕ ಸಾಗಿ ಬಾಳ್ತಿಲ ಗ್ರಾಮದ ದಾಸಕೋಡಿಯನ್ನು ಸಂಪರ್ಕಿಸುವ ರಸ್ತೆಯು ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್) ಯಾಗಿ ಅಭಿವೃದ್ಧಿ ಗೊಂಡಿರುವುದರಿಂದ ರಸ್ತೆಯ ಎರಡೂ ಭಾಗದಲ್ಲಿ ಮಧ್ಯ ಭಾಗದಿಂದ 25 ಮೀ.(ಸುಮಾರು 82 ಅಡಿ) ವರೆಗೆ ಖಾಸಗಿ ಜಾಗದಲ್ಲೂ ಯಾವುದೇ ಚಟುವಟಿಕೆಗೆ ಗ್ರಾ.ಪಂ.ನಿಂದ ಅನುಮತಿ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯ ಎರಡೂ ಬದಿಗಳಲ್ಲೂ ಸಾಕಷ್ಟು ಖಾಲಿ ಜಾಗಗಳಿದ್ದು, ಈಗಾಗಲೇ ಹಲವು ಮಂದಿ ಚಟುವಟಿಕೆಗಾಗಿ ಗ್ರಾ.ಪಂ.ನ ಅನುಮತಿ ಕೇಳಿದ್ದರೂ, ಅವಕಾಶ ಸಿಕ್ಕಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಮನೆಯೋ ಅಥವಾ ಇನ್ಯಾವುದೋ ಕಟ್ಟಡ ನಿರ್ಮಾಣಕ್ಕಾಗಿ ಸಣ್ಣ ಜಾಗ ಖರೀದಿಸಿದವರಿಗೆ ಧರ್ಮ ಸಂಕಟ ಎದುರಾಗಿದೆ. ಒಂದು ವೇಳೆ ಅನುಮತಿ ಪಡೆಯದೇ ಉದ್ದೇಶಿತ ಯೋಜನೆಗಾಗಿ ಕಟ್ಟಡ ನಿರ್ಮಿಸಿದರೂ, ಅದು ಅಕ್ರಮ ಕಟ್ಟಡ ಎನಿಸಿಕೊಳ್ಳುತ್ತದೆ. ವಿದ್ಯುತ್ ಅಥವಾ ಇನ್ಯಾವುದೇ ಸೌಕರ್ಯಕ್ಕೆ ಅರ್ಜಿ ಸಲ್ಲಿಸಿದರೆ ಸಿಗದೇ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ.
ನಿಯಮ ಸಡಿಲಿಕೆ ಆಗ್ರಹ
ಸುಮಾರು 2 ವರ್ಷಗಳ ಹಿಂದೆಯಷ್ಟೇ ಈ ರಸ್ತೆ ಮೇಲ್ದರ್ಜೆಗೇರಿದೆ. ಅದರ ಹಿಂದೆ ಈಗ ನಿರ್ಬಂಧವಿರುವ ವ್ಯಾಪ್ತಿಯ ಒಳಭಾಗದಲ್ಲಿ ಸಾಕಷ್ಟು ಮನೆ, ವಾಣಿಜ್ಯ ಚಟುವಟಿಕೆಯ ಕಟ್ಟಡಗಳಿವೆ. ಸದ್ಯಕ್ಕೆ ಅವುಗಳಿಗೆ ಯಾವುದೇ ತೊಂದರೆ ಇಲ್ಲದೇ ಇದ್ದರೂ, ಮುಂದೆ ರಸ್ತೆ ವಿಸ್ತರಣೆಗೊಳ್ಳುವ ಸಂದರ್ಭದಲ್ಲಿ ತೊಂದರೆಬಾರದು ಎಂಬುದನ್ನು ಈಗಲೇ ಹೇಳುವಂತಿಲ್ಲ. ನಿಯಮದ ಪ್ರಕಾರ 25 ಮೀ. ಮಾರ್ಜಿನ್ ಒಳಭಾಗದಲ್ಲಿ ಇರುವ ಕಟ್ಟಡಗಳ ಅಭಿವೃದ್ಧಿ, ಇತರ ಚಟುವಟಿಕೆಗಳಿಗೆ ಗ್ರಾಮ ಪಂಚಾಯತ್‌ನ ಅನುಮತಿ ಕೇಳಿದರೆ ಸಿಗುವುದು ಕೂಡ ಕಷ್ಟವಾಗುವ ಸಾಧ್ಯತೆ ಇದೆ. ಹೀಗಾಗಿ ನಿಯಮ ಸಡಿಲಿಕೆ ಮಾಡುವಂತೆ ಆಗ್ರಹಗಳು ಕೇಳಿ ಬರುತ್ತಿದೆ. ಆದರೆ ಎಂಡಿಆರ್ ರಸ್ತೆಗಳ ನಿಯಮವೇ ಹಾಗೇ ಇರುವುದರಿಂದ ಗ್ರಾಮಸ್ಥರ ಆಗ್ರಹಕ್ಕೆ ಯಾವ ರೀತಿಯ ಸ್ಪಂದನೆ ಸಿಗಬಹುದು ಎನ್ನುವುದನ್ನೂ ಹೇಳುವಂತಿಲ್ಲ.
ನಿಯಮದಲ್ಲಿ ಅವಕಾಶವಿಲ್ಲ
ಪಾಣೆಮಂಗಳೂರು ಗುಡಿಯ ಬಳಿಯಿಂದ ನರಿಕೊಂಬು -ದಾಸ ಕೋಡಿ ರಸ್ತೆಯು ಎಂಡಿಆರ್ ರಸ್ತೆಯಾಗಿ ಮೇಲ್ದರ್ಜೆಗೇರಿರುವುದರಿಂದ ಇಲಾಖೆಯ ನಿಯಮ ಪ್ರಕಾರ 25 ಮೀ. ವರೆಗೆ ಖಾಸಗಿ ಜಮೀನು ಇದ್ದರೂ ಯಾವುದೇ ಚಟುವಟಿಕೆ ಗಳನ್ನು ನಡೆಸುವುದಕ್ಕೆ ಅವಕಾಶವಿಲ್ಲ.
–ಷಣ್ಮುಗಂ, ಎಇಇ, ಲೋಕೋಪಯೋಗಿ ಇಲಾಖೆ, ಬಂಟ್ವಾಳ
ನಿಯಮ ಸಡಿಲಿಕೆ ಆಗಲಿ
ನರಿಕೊಂಬು ಗ್ರಾಮದ ಮೂಲಕ ಹಾದು ಹೋಗಿರುವ ಮುಖ್ಯ ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆ 25 ಮೀ. ವರೆಗೆ ವಾಣಿಜ್ಯ ಕಟ್ಟಡ, ಮನೆ ನಿರ್ಮಾಣಕ್ಕೆ ಅನುಮತಿ ನೀಡಲು ಗ್ರಾ.ಪಂ.ನಲ್ಲಿ ಅವಕಾಶ ಇಲ್ಲದೇ ಇರುವುದರಿಂದ ಗ್ರಾಮಸ್ಥರ ಜತೆಗೆ ಗ್ರಾ.ಪಂ.ನ ಆದಾಯಕ್ಕೂ ತೊಂದರೆಯಾಗಿದೆ. ಹೀಗಾಗಿ ಈ ನಿಯಮ ಸಡಿಲಿಕೆ ಯಾಗಬೇಕು.
–ವಿನುತಾ ಪುರುಷೋತ್ತಮ, ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.
ಕಿರಣ್ ಸರಪಾಡಿ