Advertisement

ಎಸ್‌ಸಿ/ಎಸ್‌ಟಿ ಕಾಯಿದೆಗೆ ನಮ್ಮ ವಿರೋಧವಿಲ್ಲ; ಸುಪ್ರೀಂ ಸ್ಪಷ್ಟನೆ

03:37 PM Apr 03, 2018 | udayavani editorial |

ಹೊಸದಿಲ್ಲಿ : “ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಗೆ ನಮ್ಮ ವಿರೋಧವಿಲ್ಲ; ಪ್ರತಿಭಟನಕಾರರು ನಮ್ಮ ತೀರ್ಪನ್ನು ಸರಿಯಾಗಿ ಓದಿಲ್ಲ” ಎಂದು ಸುಪ್ರೀಂ ಕೋರ್ಟ್‌ ಇಂದು ಸ್ಪಷ್ಟಪಡಿಸಿತು.

Advertisement

“ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯನ್ನು ನಾವು ಮೇಲ್ನೋಟಕ್ಕೆ ಪುನರ್‌ವಿಮರ್ಶಿಸಲು ಬಯಸುವುದಿಲ್ಲ. ಈ ಕಾಯಿದೆಯಡಿ ಅಮಾಯಕ ಸರಕಾರಿ ಅಧಿಕಾರಿಗಳು ಅಥವಾ ಪೌರರು, ಯಾವುದೇ ರೀತಿಯಲ್ಲಿ  ಪೂರ್ವ ಪರಿಶೀಲನೆಗೊಳಪಡದೆ, ಬಂಧನಕ್ಕೆ ಗುರಿಯಾಗುವುದನ್ನು ನಾವು ಬಯಸುವುದಿಲ್ಲ; ಪ್ರತಿಭಟನಕಾರರು ನಮ್ಮ ತೀರ್ಪನ್ನು ಸರಿಯಾಗಿ ಓದಿರುವಂತೆ ಕಾಣುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ಇದಕ್ಕೆ ಮೊದಲು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ, ಭಾರತ್‌ ಬಂದ್‌ ಪ್ರಯುಕ್ತ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಯ ದಳ್ಳುರಿಯಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ತಲೆದೋರಿದೆ. ಸಹಸ್ರಾರು ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ದೇಶಾದ್ಯಂತ 10 ಮಂದಿ ಅಸುನೀಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕೋಟಿಗಟ್ಟಲೆ ಆಸ್ತಿಪಾಸ್ತಿಗಳು ನಾಶಗೊಂಡಿವೆ. ಆದುದರಿಂದ ಸುಪ್ರೀಂ ಕೋರ್ಟ್‌ ತನ್ನ ಆದೇಶದ ಪುನರ್‌ ಪರಿಶೀಲನೆ ಮಾಡಬೇಕಾದ ಅಗತ್ಯ ಒದಗಿದೆ’ ಎಂದು ಹೇಳಿತ್ತು. 

ಆ ಸಂದರ್ಭದಲ್ಲಿ ಕೋರ್ಟ್‌ ಮಾರ್ಗದರ್ಶಿ (ಆ್ಯಮಿಕಸ್‌ ಕ್ಯೂರಿ) ಅಮರೇಂದ್ರ ಶರಣ್‌ ಅವರು “ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯ ಹೊಣೆಗಾರಿಕೆ ಸರಕಾರದ್ದು’ ಎಂಬ ಅಟಾರ್ನಿ ಜನರಲ್‌ ಅವರ ವಾದವನ್ನು ವಿರೋಧಿಸಿದರು. 

ಕಳೆದ ಮಾರ್ಚ್‌ 20ರಂದು ಸುಪ್ರೀಂ ಕೋರ್ಟ್‌ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯಡಿ ಅಮಾಯಕ ಸರಕಾರಿ ನೌಕರರು ಮತ್ತು ನಾಗರಿಕರು ಪೂರ್ವ ಪರಿಶೀಲನೆಗೊಳಪಡದೆ ನೇರವಾಗಿ ಬಂಧನಕ್ಕೆ ಗುರಿಯಾಗುವುದು ಸರಿಯಲ್ಲ ಎಂದು ಕಾಯಿದೆಯ ಕಾಠಿನ್ಯವನ್ನು ಕುಂಠಿತಗೊಳಿಸಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next