Advertisement
ಕುಂದಾಪುರ, ಬೈಂದೂರು ತಾಲೂಕು ವ್ಯಾಪ್ತಿ ಯಲ್ಲಿಯೇ ಕಳೆದ 3 ವರ್ಷದಲ್ಲಿ ಬರೋಬ್ಬರಿ 335 ಮಂದಿ ಸಾವನ್ನಪ್ಪಿದ್ದು, ಅದರಲ್ಲೂ 2021ರಲ್ಲಿಯೇ ಗರಿಷ್ಠ 120 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆ.
2021 ರ ಜ.1 ರಿಂದ ಡಿ.31 ವರೆಗೆ ಕುಂದಾಪುರ, ಬೈಂದೂರು ತಾಲೂಕಿನ 7 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 120 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ರಲ್ಲಿ 110 ಮಂದಿ ಸಾವನ್ನಪ್ಪಿದ್ದರೆ, 2020 ರಲ್ಲಿ 105 ಮಂದಿ ಜೀವ ಕಳೆದುಕೊಂಡಿದ್ದರು. 40 ವರ್ಷ ಮೇಲ್ಪಟ್ಟವರೇ ಅಧಿಕ
ಆತ್ಮಹತ್ಯೆ ಮಾಡಿಕೊಂಡವರಲ್ಲಿ 40 ವರ್ಷ ಮೇಲ್ಪಟ್ಟವರ ಪ್ರಮಾಣವೇ ಅಧಿಕವಾಗಿದೆ. ಕಳೆದ 3 ವರ್ಷಗಳಲ್ಲಿ 40 ವರ್ಷ ಮೇಲ್ಪಟ್ಟವರು 216 ಮಂದಿ ಹಾಗೂ 40 ವರ್ಷಕ್ಕಿಂತ ಕೆಳಗಿನ 119 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ರಲ್ಲಿ 40 ವರ್ಷ ಮೇಲಿನ 77, 40 ವರ್ಷಕ್ಕಿಂತ ಕೆಳಗಿನ 33 ಮಂದಿ, 2020 ರಲ್ಲಿ 40 ವರ್ಷಕ್ಕಿಂತ ಮೇಲಿನ 76 ಹಾಗೂ ಅದಕ್ಕಿಂತ ಕೆಳಗಿನ 29 ಮಂದಿ, 2021 ರಲ್ಲಿ 40 ವರ್ಷ ಮೇಲ್ಪಟ್ಟ 63 ಮಂದಿ ಹಾಗೂ ಅದಕ್ಕಿಂತ ಕೆಳಗಿನ 57 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Related Articles
ಕುಂದಾಪುರ ಭಾಗದಲ್ಲಿ ಕಳೆದ ವರ್ಷ ಸಾವನ್ನಪ್ಪಿದವರ ಪೈಕಿ ಬಹುತೇಕ ಪ್ರಕರಣಗಳಲ್ಲಿ ಆರ್ಥಿಕ, ಸಾಲಬಾಧೆಯೇ ಹೆಚ್ಚು. ಇನ್ನು ಕೆಲವರು ಅನಾರೊಗ್ಯದಿಂದ, ಮತ್ತೆ ಕೆಲವರು ಕೋವಿಡ್, ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲೂ ಕಳೆದ ವರ್ಷ 40 ವರ್ಷ ಮೇಲ್ಪಟ್ಟ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನವರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಕಡಿಮೆ ಒಂದೇ ಆಗಿದ್ದು, ಇದಕ್ಕೆ ಹಣಕಾಸು, ಸಾಲ, ಔದ್ಯೋಗಿಕ ವಿಷಯಗಳೇ ಬಹುಮುಖ್ಯ ಕಾರಣವಾಗಿದೆ.
Advertisement
ಮನಶಾಸ್ತ್ರಜ್ಞರ ಸಲಹೆಗಳು1 ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೆ ಸಮಸ್ಯೆ ಬಗೆಹರಿಯವುದಿಲ್ಲ. ಜೀವ, ಜೀವನ ಎರಡೂ ಅಮೂಲ್ಯ.
2 ಸಂಕಷ್ಟದ ಸಮಯದಲ್ಲಿ ತಾಳ್ಮೆ, ಸಂಯಮವೇ ಮುಖ್ಯ.
3 ಎಲ್ಲರೂ ಅನೇಕ ಸಮಸ್ಯೆ, ಸಂಕಷ್ಟವನ್ನು ಎದುರಿಸಿ, ಗೆದ್ದು ಬಂದಿರುವುದು. ಜಗತ್ತು, ದೇಶ ಸಹ ಕೊರೊನಾದಂತಹ ಸಾಕಷ್ಟು ಮಹಾಮಾರಿಗಳನ್ನು ಕಂಡಿದೆ. ಅದರಿಂದ ಗೆದ್ದು ಬಂದಿದೆ ಸಹ.
4 ವಿವೇಚನೆಯಿಂದ ಅವಲೋಕಿಸಿ, ದುಡುಕಿನ ನಿರ್ಧಾರ ಬೇಡ.
5ಯುವಕರಿಗೂ ಜೀವನದಲ್ಲಿ ಸಾಕಷ್ಟು ಅವಕಾಶಗಳಿವೆ. ಒಂದು ಅವಕಾಶದಲ್ಲಿ ವಿಫಲವಾದರೆ ಬದುಕೇ ಮುಗಿದಿಲ್ಲ.
6 ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಆಶಾವಾದ ಬೆಳೆಸಿಕೊಳ್ಳಿ. ಅನಗತ್ಯ ಭಯ ಬೇಡ
ಆತ್ಮಹತ್ಯೆಗೆ ಈಗಿನ ಪ್ರಕಾರ ಕೋವಿಡ್‌ನಂತಹ ಪರಿಸ್ಥಿತಿ ಬಹುಮುಖ್ಯ ಕಾರಣ. ಇನ್ನು ಬಡತನ, ಹೆದರಿಕೆ, ಆತ್ಮಗೌರವಕ್ಕೆ ಧಕ್ಕೆ, ಇನ್ನಿತರ ಕಾರಣವೂ ಇರಬಹುದು. ಆದರೆ ಜೀವನ ಎಲ್ಲಕ್ಕಿಂತ ಮುಖ್ಯ. ನಕರಾತ್ಮಕ ಯೋಚನೆಗಳಿದ್ದವರು ಮನಶಾಸ್ತ್ರಜ್ಞರ, ಆಪ್ತ ಸಮಾಲೋಚಕರ ಸಲಹೆಗಳನ್ನು ಪಡೆಯಿರಿ. ಸಮಸ್ಯೆಗಳಿದ್ದರೆ ವೈದ್ಯಕೀಯ ಚಿಕಿತ್ಸೆ, ಕೌನ್ಸಿಲಿಂಗ್ ಪಡೆಯಿರಿ. ಅನಗತ್ಯ ಭಯ ಹುಟ್ಟಿಸುವಂತಹ ವೆಬ್‌ಸೈಟ್, ಸಾಮಾಜಿಕ ಜಾಲತಾಣ, ಮಾಧ್ಯಮ ಎಲ್ಲದರಿಂದಲೂ ದೂರ ಇರಿ.
– ಡಾ| ಪಿ.ವಿ. ಭಂಡಾರಿ, ಮನಶಾಸ್ತ್ರಜ್ಞರು ಉಡುಪಿ – ಪ್ರಶಾಂತ್ ಪಾದೆ