Advertisement

ಸೊಸೆ ಅಲ್ಲ, ಮಗಳು!

12:30 AM Mar 06, 2019 | |

“ಅತ್ತೆ ಎಷ್ಟಾದರೂ ಅತ್ತೆಯೇ, ಅಮ್ಮನಾಗಲು ಸಾಧ್ಯವಿಲ್ಲ’ ಅನ್ನುವುದು ಬಹುತೇಕ ಮಹಿಳೆಯರ ಮಾತು. ತನ್ನ ಅತ್ತೆ, ಅಮ್ಮನಂತೆಯೇ ಇರಬೇಕು ಎಂದು ಎಲ್ಲ ಯುವತಿಯರೂ ಬಯಸುತ್ತಾರೆ. ಕೆಲವರಂತೂ, ಅಮ್ಮನಿರುವ ಹುಡುಗನನ್ನು ಮದುವೆಯೇ ಆಗಬಾರದು ಅಂತ ನಿರ್ಧರಿಸಿದ್ದಾರೆ. ಆದರೆ, ಅತ್ತೆ ಅಮ್ಮನಾಗಬೇಕಾದರೆ, ಸೊಸೆಯೂ ಮಗಳಾಗಬೇಕಲ್ಲವೇ? ಅಷ್ಟಕ್ಕೂ ಅತ್ತೆಯ ಮನಸ್ಸನ್ನು ಗೆಲ್ಲೋದು ಹೇಗೆ?

Advertisement

1. ಮನೆಯವರಿಗೆ ಸಮಯ ನೀಡಿ
ಹೊಸದಾಗಿ ಮದುವೆಯಾದ ನೀವು ತವರಿನ ಗುಂಗಿನಲ್ಲೇ ಕಾಲ ಕಳೆಯದೆ, ಗಂಡ, ಅತ್ತೆ- ಮಾವಂದಿರ ಜೊತೆ ಸಮಯ ಕಳೆಯಿರಿ. ಸಂಜೆ ಅತ್ತೆಯ ಜೊತೆ ವಾಕ್‌ ಹೋಗುವುದು, ಎಲ್ಲರೊಡನೆ ಬೆರೆತು ಕಾಫಿ ಕುಡಿಯುವುದು… ಹೀಗೆ ನಿಮಗೆ ನೀವೇ ಮುಕ್ತ ವಾತಾವರಣವನ್ನು ನಿರ್ಮಿಸಿಕೊಳ್ಳಿ. ಅತ್ತೆ ಜೊತೆಗೆ ಸೇರಿ ಅಡುಗೆ ಮಾಡಿ. ಎಲ್ಲರೂ ನಮ್ಮವರೇ ಎಂದೇ ಭಾವಿಸಿದಾಗ ಜಗಳಕ್ಕೆ ಆಸ್ಪದವೇ ಇರುವುದಿಲ್ಲ. 

2. ಜೊತೆಗೆ ಶಾಪಿಂಗ್‌ ಮಾಡಿ 
ಅತ್ತೆಯ ಅಭಿರುಚಿ ನಿಮಗಿಂತ ಭಿನ್ನವಾಗಿರಬಹುದು. ನಾದಿನಿಯ ಆಯ್ಕೆ ನಿಮಗೆ ಇಷ್ಟವಾಗದಿರಬಹುದು. ಹಾಗಂತ ನಿಮ್ಮ ಪಾಡಿಗೆ ನೀವು ಒಬ್ಬರೇ ಶಾಪಿಂಗ್‌ ಮಾಡುವ ಬದಲು, ಅವರನ್ನೂ ಜೊತೆಗೆ ಕರೆದೊಯ್ಯಿರಿ. ಅತ್ತೆಯ ಆಯ್ಕೆಗೆ ನೀವು ಉತ್ತಮ ಅಂಕಗಳನ್ನು ನೀಡಿ. ಖರೀದಿಯಲ್ಲಿ ಅವರಿಗೆ ನೆರವಾಗಿ.

3. ಸಂಪ್ರದಾಯಗಳನ್ನು ಕೇಳಿ ತಿಳಿಯಿರಿ 
ನಿಮ್ಮ ತವರಿನ ಸಂಪ್ರದಾಯಗಳು, ಅತ್ತೆಯ ಮನೆಯ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಗಂಡನ ಮನೆಯ ಸಂಪ್ರದಾಯಗಳು ನನಗೆ ಹೊಸತು ಎಂದು ಎಲ್ಲ ಜವಾಬ್ದಾರಿಯನ್ನೂ ಅತ್ತೆಗೇ ವಹಿಸಿ ಸುಮ್ಮನಾಗಬೇಡಿ. ಅತ್ತೆಯ ಬಳಿ ಎಲ್ಲಾ ವಿಷಯವನ್ನೂ ಕೇಳಿ ತಿಳಿಯಿರಿ. ಹಬ್ಬ- ಹರಿದಿನಗಳಂದು ಲವಲವಿಕೆಯಿಂದ ಓಡಾಡಿ, ಅತ್ತೆಯ ಕೆಲಸದ ಭಾರವನ್ನು ಕಡಿಮೆ ಮಾಡಿ.

4. ಕಿರು ಪ್ರವಾಸ ಮಾಡಿ 
ಮನೆಮಂದಿಯೊಂದಿಗೆ ಆಗಾಗ್ಗೆ ಪ್ರವಾಸ ಹೋಗುತ್ತಿರಿ. ಸಾಧ್ಯವಾದರೆ, ಎರಡೂ ಕುಟುಂಬಗಳನ್ನು ಒಟ್ಟುಗೂಡಿಸಿಕೊಂಡು ಪ್ರವಾಸ ಮಾಡಿ. ದೂರದ ಪ್ರಯಾಣ ಮತ್ತು ಹೆಚ್ಚು ಅವಧಿಯ ಪ್ರವಾಸ ಮಾಡಿ ದಣಿಯುವುದಕ್ಕಿಂತ, ಎಲ್ಲರಿಗೂ ಅನುಕೂಲವಾಗುವಂಥ ಸ್ಥಳವನ್ನು ಆರಿಸಿಕೊಳ್ಳಿ. 

Advertisement

5. ನಾದಿನಿಯನ್ನು ಫ್ರೆಂಡ್‌ ಮಾಡಿಕೊಳ್ಳಿ 
ಗಂಡನಿಗೆ ಅಕ್ಕ-ತಂಗಿ ಇದ್ದರೆ ಅವರನ್ನು ಗೆಳತಿಯಂತೆ ಕಾಣಿ. ನಾದಿನಿಯೊಡನೆ ನೀವು ವರ್ತಿಸುವ ರೀತಿ ಅತ್ತೆಯ ವರ್ತನೆಯಲ್ಲಿ ಬದಲಾವಣೆ ತರುತ್ತದೆ ಎಂಬುದು ನೆನಪಿರಲಿ. 

6. ಮನೆಯವರಿಗೆ ಸರ್ಪ್ರೈಸ್‌ ನೀಡಿ…
ಗಂಡನ ಕುಟುಂಬದ ಸದಸ್ಯರ ಬಗ್ಗೆ ಕೇಳಿ ತಿಳಿದುಕೊಂಡು, ವಿಶೇಷ ದಿನಗಳಂದು ಸರ್ಪ್ರೈಸ್‌ ಗಿಫ್ಟ್ ನೀಡಿ. ಅತ್ತೆ- ಮಾವನ ಆ್ಯನಿವರ್ಸರಿ, ನಾದಿನಿಯ ಹುಟ್ಟು ಹಬ್ಬ… ಹೀಗೆ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಿ. ಆ ದಿನ ವಿಶೇಷ ಅಡುಗೆ ಮಾಡಿ ನೀವೇ ಎಲ್ಲರಿಗೂ ಬಡಿಸಿ. ಎಲ್ಲರೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗಲು ಇಂಥ ವಿಷಯಗಳು ಸಹಕರಿಸುತ್ತವೆ.

ಕಾವ್ಯಾ ಎಚ್‌.ಎನ್‌., ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next