Advertisement

ಅಬ್ಬರದ ಪ್ರಚಾರ-ತಲೆಕೆಡಿಸಿಕೊಳ್ಳದ ಮತದಾರ

04:44 PM Apr 17, 2019 | Team Udayavani |

ಹೊನ್ನಾಳಿ: ದಾವಣಗೆರೆ ಲೋಕಸಭಾ ಕ್ಷೇತ್ರದ ಅರೆ ಮಲೆನಾಡು, ಬಯಲು ಸೀಮೆಗಳ ಪ್ರಾದೇಶಿಕ
ವೈವಿಧ್ಯತೆಯನ್ನೊಳಗೊಂಡ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಆರು ಹೋಬಳಿಗಳಿವೆ. ಈಚೆಗೆ ಹೊನ್ನಾಳಿ ತಾಲೂಕಿನಿಂದ ಬೇರ್ಪಟ್ಟಿರುವ ನ್ಯಾಮತಿ ಹೊಸ ತಾಲೂಕಾಗಿ ಉದಯಿಸಿದೆ. ನೂತನ ನ್ಯಾಮತಿ ತಾಲೂಕಿಗೆ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ, ಹೆಸರಿಗೆ ಮಾತ್ರ ತಾಲೂಕು ಆಗಿದೆ.

Advertisement

ತುಂಗಭದ್ರಾ ನದಿಯ ಇಕ್ಕೆಲಗಳಲ್ಲಿ ಹೊನ್ನಾಳಿ ತಾಲೂಕಿನ ವ್ಯಾಪ್ತಿ ಹರಡಿಕೊಂಡಿದೆ. ಲೋಕಸಭಾ ಚುನಾವಣೆ ಘೋಷಣೆಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ ಆದರೆ ಜನ ಮಾತ್ರ ಚುನಾವಣೆ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಮತದಾನದ ದಿನ ಯಾರಿಗಾದರೊಬ್ಬರಿಗೆ ಮತ ಹಾಕಿದರೆ ಸಾಕು ಎನ್ನುವ ಮೂಡ್‌ನ‌ಲ್ಲಿದ್ದಾರೆ.

ಮೂರು ಬಾರಿ ಗೆಲವು ಸಾಧಿಸಿರುವ ಜಿ.ಎಂ. ಸಿದ್ದೇಶ್ವರ್‌ ಅವರಿಗೇ ಟಿಕೆಟ್‌ ಸಿಗುತ್ತದೆ ಎನ್ನುವ ಗ್ಯಾರಂಟಿ ಮೇರೆಗೆ ಬಿಜೆಪಿ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರಕ್ಕಿಳಿದಿತ್ತು. ಇನ್ನು ಕಾಂಗ್ರೆಸ್‌ ಪರಿಸ್ಥಿತಿ ಭಿನ್ನ. ಕೊನೆ ಹಂತದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಟಿಕೆಟ್‌ ನೀಡಿದ ಕಾರಣ ಅವರು ತಡವಾಗಿ ಪ್ರಚಾರ ಆರಂಭಿಸಿದ್ದಾರೆ. ಮಂಜಪ್ಪ ಹೊನ್ನಾಳಿ ತಾಲೂಕಿನವರೇ ಆಗಿರುವುದು ಅವರಿಗೆ ಪ್ಲಸ್‌ ಪಾಯಿಂಟ್‌. ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಪರ ಶಾಸಕ ಎಂ.ಪಿ. ರೇಣುಕಾಚಾರ್ಯ
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಾಲೂಕಿನ ಪ್ರತಿಯೊಂದು ಹಳ್ಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಎಚ್‌.ಬಿ.ಮಂಜಪ್ಪ ಪರ ಮಾಜಿ ಶಾಸಕ ಡಿ.ಜಿ. ಶಾಂತನಗಗೌಡ ಪ್ರಚಾರ ನಡೆಸಿದ್ದಾರೆ.

ಸಮಸ್ಯೆಗಳು ನೂರಾರು: ತಾಲೂಕಿನಲ್ಲಿ ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ಇದ್ದು, ಅದನ್ನು ನೀಗಿಸಲು ರಾಜಕೀಯ ಜನಪ್ರತಿನಿಧಿಗಳು ಆಸಕ್ತಿ ತೋರಿಸಿಲ್ಲ ಎನ್ನುವುದು ಮತದಾರರ ವಾದ. ಹೊನ್ನಾಳಿ ತಾಲೂಕು ಕೇಂದ್ರದ ಸಮೀಪ ತುಂಗಭದ್ರಾ ನದಿ ಹರಿಯುತ್ತಿದೆ. ಹೊಳೆ ನೀರಿನ ಸೌಕರ್ಯವಿರುವ ಹೊನ್ನಾಳಿಯಲ್ಲಿ ಇದುವರೆಗೂ ಯಾವುದೇ ಕಾರ್ಖಾನೆ ಸ್ಥಾಪನೆಯಾಗಿಲ್ಲ. ನಿರುದ್ಯೋಗವನ್ನು ಕಡಿಮೆ ಮಾಡುವಂತಹ ಒಂದು ಕಾರ್ಖಾನೆ ಇಲ್ಲಿ ಸ್ಥಾಪನೆಯಾದರೆ ತಾಲೂಕಿನ ಯುವಕರಿಗೆ ಅನುಕೂಲವಾಗುತ್ತದೆ ಎಂಬುದು ಜನರ ಅನಿಸಿಕೆ.

ರೈತಾಪಿ ವರ್ಗದ ಜನರೇ ಹೆಚ್ಚಿರುವ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬು ಕಾರ್ಯವಾಗದೇ ಇರುವುದು ಜನರ ಚರ್ಚೆಯ ಇನ್ನೊಂದು ಪ್ರಮುಖ ವಿಷಯವಾಗಿದೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳೆರಡಿದ್ದರೂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಕೊರತೆ ಇಲ್ಲಿನ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಮಕ್ಕಳನ್ನು ಶಿಕ್ಷಣಕ್ಕಾಗಿ ದಾವಣಗೆರೆ ಇಲ್ಲವೇ ದೂರದ ನಗರಗಳಿಗೆ ಕಳುಹಿಸುವುದು ಪೋಷಕರಿಗೆ ಹೊರೆಯಾಗಿದ್ದು, ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಅಗತ್ಯವಿದೆ.

Advertisement

ಅಲ್ಲದೇ ತಾಲೂಕಿನಲ್ಲಿ ಭತ್ತ, ಮೆಕ್ಕೆಜೋಳ ಹೇರಳವಾಗಿ ಬೆಳೆಯುವುದರಿಂದ ಸಂಸ್ಕಾರಣಾ ಘಟಕಗಳನ್ನು ಪ್ರಾರಂಭಿಸಿದರೆ ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ದೊರಕುವ ಸಾಧ್ಯತೆಗಳಿವೆ. ಇದಲ್ಲದೇ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪುಲ್ವಾಮ, ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ಘಟನೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next