Advertisement

ತ್ರಿಕೋನ ಪ್ರೇಮ­ಕಥೆಯಲ್ಲ

10:21 AM Jan 11, 2020 | mahesh |

“ತ್ರಿಕೋನ’ ಪ್ರೇಮ­ಕಥೆಯ ಸಿನಿಮಾಗಳ ಬಗ್ಗೆ ನೀವು ಕೇಳಿರಬಹುದು. ಈಗ “ತ್ರಿಕೋನ’ ಎನ್ನುವ ಹೆಸರಿನಲ್ಲೇ ಚಿತ್ರವೊಂದು ತೆರೆಗೆ ಬರುತ್ತಿದೆ. ಈ ಹಿಂದೆ ದಿಗಂತ್‌ ನಾಯಕ ನಟನಾಗಿ ಅಭಿನಯಿಸಿದ್ದ “ಬರ್ಫಿ’ ಚಿತ್ರವನ್ನು ನಿರ್ದೇಶಿಸಿದ್ದ ಪಿ. ರಾಜಶೇಖರ್‌ “ತ್ರಿಕೋನ’ ಚಿತ್ರಕ್ಕೆ ಕತೆ ,ಚಿತ್ರಕಥೆ ಬರೆದು ಅದನ್ನು ಚಂದ್ರಕಾಂತ್‌ ಅವರಿಂದ ನಿರ್ದೇಶನ ಮಾಡಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ “ತ್ರಿಕೋನ’ ಚಿತ್ರಕ್ಕೆ ಆಯಾ ಭಾಷೆ, ನೇಟಿವಿಟಿಗೆ ತಕ್ಕಂತೆ ಚಿತ್ರಕಥೆ ವಿಭಿನ್ನವಾಗಿ ಸಿದ್ಧಪಡಿಸಲಾಗಿದೆಯಂತೆ. ಸದ್ಯ ಮೊದಲ ಪ್ರತಿ ಹೊರಬಂದಿರುವ “ತ್ರಿಕೋನ’ ಚಿತ್ರ ಸೆನ್ಸಾರ್‌ ಅಂಗಳದಲ್ಲಿದ್ದು, ಇದೇ ವೇಳೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.

Advertisement

ಚಿತ್ರದ ಬಗ್ಗೆ ಮಾತಿಗಿಳಿದ ಚಿತ್ರತಂಡ, “ಒಂದೇ ಕಥೆಯನ್ನು ಮೂರು ಭಾಷೆಯಲ್ಲಿ ಮೂರು ವಿಭಿನ್ನ ರೀತಿಯಲ್ಲಿ ತೆರೆಮೇಲೆ ಹೇಳಿದ್ದೇವೆ. ಚಿತ್ರಕ್ಕೆ ಆಯಾ ಭಾಷೆ, ನೇಟಿವಿಟಿಗೆ ತಕ್ಕಂತೆ ಮೂರು ಸಂಗೀತ ನಿರ್ದೇಶಕರು ಸಂಗೀತ ಸಂಯೋ­ಜಿಸಿ­ದ್ದಾರೆ. ಎಲ್ಲರ ಜೀವನ­ದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆ ಇರುವ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಇಪ್ಪತ್ತೈದು ವಯಸ್ಸಿನವರು, ನಲವತ್ತು ವಯಸ್ಸಿನವರು ಮತ್ತು ಅರವತ್ತು ದಾಟಿದ ಹಿರಿಯ ನಾಗರೀಕರು ಹೀಗೆ ಮೂರು ವಯೋಮಾನದವರಿಗೂ ತಲುಪುವಂತ ಕಥೆ ಚಿತ್ರದಲ್ಲಿದೆ. ಸನ್ನಿವೇಶಗಳು ದೃಶ್ಯಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ’ ಎಂದು ಚಿತ್ರ ವಿಶೇಷತೆಗಳನ್ನು ತೆರೆದಿಟ್ಟಿತು.

“ಅಹಂ, ಶಕ್ತಿ ಮತ್ತು ತಾಳ್ಮೆ ಒಂದಕ್ಕೊಂದು ಪೈಪೋಟಿಗೆ ಬಿದ್ದಾಗ ಯಾವ ರೀತಿ ಇರುತ್ತದೆ. ಮನುಷ್ಯನ ವಯೋಮಾನದಲ್ಲಿ ಇವೆಲ್ಲವು ಬಂದು ಹೋಗುತ್ತದೆ. ಅಂತಿಮವಾಗಿ ಸಹಿಷ್ಣುತೆ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಹೇಳುವ ಪ್ರಯತ್ನವೇ ಚಿತ್ರದ ತಿರುಳಾಗಿದೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕರು.

“ತ್ರಿಕೋನ’ ಚಿತ್ರವನ್ನು ಬೆಂಗಳೂರು, ಸುಬ್ರಮಣ್ಯ, ಕಡಬ, ಪುತ್ತೂರು, ಮಂಗಳೂರು, ಸಕಲೇಶಪುರ ಸುತ್ತಮುತ್ತ ಸುಮಾರು 50 ದಿನಗಳ ಕಾಲ ನಾಲ್ಕು ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಲ್ಲಿಯವರೆಗೆ ಸ್ಟಂಟ್‌ಮ್ಯಾನ್‌, ಪೋಷಕ ಕಲಾವಿದ, ಕರಾಟೆ ಪಟು ಆಗಿ ಗುರುತಿಸಿಕೊಂಡಿರುವ, ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಜ್‌ವೀರ್‌ ಚಿತ್ರದಲ್ಲಿ ಯುವ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ನಲವತ್ತರ ವಯಸ್ಸಿನ ಜೋಡಿಗಳಾಗಿ ಅಚ್ಯುತರಾವ್‌-ಸುಧಾರಾಣಿ, ಹಿರಿಯ ದಂಪತಿಗಳಾಗಿ ಸುರೇಶ್‌ ಹೆಬ್ಳಿಕರ್‌-ಲಕ್ಷ್ಮೀ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಸಾಧು ಕೋಕಿಲ, ಮಾರುತೇಶ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕನ್ನಡ ಆವೃತ್ತಿಯ ಎರಡು ಹಾಡುಗಳಿಗೆ ಸುರೇಂದ್ರ ನಾಥ್‌ ಸಂಗೀತ ಸಂಯೋಜನೆಯಿದ್ದು, ಶ್ರೀನಿವಾಸ್‌ ಛಾಯಾಗ್ರಹಣ, ಜೀವನ್‌ ಪ್ರಕಾಶ್‌ ಸಂಕಲನ ಕಾರ್ಯ­ವಿದೆ. ಸುಮಾರು ಮೂರು ವರ್ಷಗಳ ಹಿಂದೆ ಶುರುವಾದ “ತ್ರಿಕೋನ’ ಚಿತ್ರ ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೇ ಫೆಬ್ರವರಿ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next