Advertisement

“ನಾನು ಅಪರಾಧಿಯಲ್ಲ..” ಆರೋಪ ಮಾಡಿದ ಕುಸ್ತಿಪಟುಗಳ ವಿರುದ್ಧ ಬ್ರಿಜ್‌ಭೂಷಣ್‌ ವಾಗ್ದಾಳಿ

02:08 PM Apr 29, 2023 | Team Udayavani |

ನವದೆಹಲಿ: ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಹೇಳಿದ್ದಾರೆ.

Advertisement

ʼಇಂಡಿಯಾ ಟುಡೇʼ ಯ ಸಂದರ್ಶನದಲ್ಲಿ ಮಾತನಾಡಿರುವ ಅವರು, “ನನ್ನ ವಿರುದ್ಧದ ಪ್ರತಿಭಟನೆ ಹಿಂದೆ ರಾಜಕೀಯವಾಗಿ ಕೆಲವರ ಕೈವಾಡವಿದೆ. ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ಪ್ರತಿಭಟನಾನಿರತ ಕುಸ್ತಿಪಟುಗಳ ಬೇಡಿಕೆ ನಿರಂತರವಾಗಿ ಬದಲಾಗುತ್ತಿದೆ. ಈ ವಿಚಾರವನ್ನು ರಾಜಕೀಯಗೊಳಿಸಲಾಗಿದೆ. ಯಾವುದೇ ಪ್ರಕರಣದಲ್ಲಿ ನನಗೆ ಯಾವುದೇ ನ್ಯಾಯಾಲಯದಿಂದ ಶಿಕ್ಷೆಯಾಗಿಲ್ಲ’’ ಎಂದಿದ್ದಾರೆ.

“ಬೇರೆ ರಾಜ್ಯಗಳ ಕುಸ್ತಿಪಟುಗಳಿದ್ದಾರೆ. ಅವರು ನನ್ನ ವಿರುದ್ಧ ಆರೋಪಗಳನ್ನು ಮಾಡಲಿಲ್ಲ,ಈ ಕುಸ್ತಿಪಟುಗಳು ಮಾತ್ರ ಯಾಕೆ ಆರೋಪ ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹಲವು ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಮೇಲೆ ದೆಹಲಿ ಪೊಲೀಸರು ಶುಕ್ರವಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ಒಂದು ವೇಳೆ ನಾನು ರಾಜೀನಾಮೆ ನೀಡಿದರೆ ಕುಸ್ತಿಪಟುಗಳ ಆರೋಪವನ್ನು ಒಪ್ಪಿಕೊಂಡಂತಾಗುತ್ತದೆ. ಸರ್ಕಾರ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ, 45 ದಿನಗಳಲ್ಲಿ ಚುನಾವಣೆ ನಡೆಯಲಿದೆ ಮತ್ತು ಚುನಾವಣೆಯ ನಂತರ ನನ್ನ ಅವಧಿ ಕೊನೆಗೊಳ್ಳಲಿದೆ, ”ಎಂದು ಹೇಳಿದರು.

Advertisement

“ನಾನು ನಿರಪರಾಧಿ ಮತ್ತು ತನಿಖೆಯನ್ನು ಎದುರಿಸಲು ಸಿದ್ಧ, ನಾನು ತನಿಖಾ ಸಂಸ್ಥೆಗೆ ಸಹಕರಿಸಲು ಸಿದ್ಧನಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇನೆ” ಎಂದು ಅವರು ಹೇಳಿದರು.

ನಾನು ಜನರಿಂದ ಸಂಸದನಾಗಿದ್ದೇನೆಯೇ ಹೊರತು ವಿನೇಶ್ ಫೋಗಟ್‌ನಿಂದಲ್ಲ. ಒಂದು ಕುಟುಂಬ ಮಾತ್ರ ಪ್ರತಿಭಟನೆ ನಡೆಸುತ್ತಿದೆ. ಹರಿಯಾಣದ 90% ಆಟಗಾರರು ಮಾತ್ರ ನನ್ನೊಂದಿಗಿದ್ದಾರೆ ಎಂದಿದ್ದಾರೆ.

ಲೈಂಗಿಕ ಕಿರುಕುಳ ಆರೋಪವನ್ನು ಮಾಡಿ, ಬಂಧನಕ್ಕೆ ಆಗ್ರಹಿಸಿ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಾಟ್‌, ಭಜರಂಗ್‌ ಪುನಿಯ ಮುಂತಾದ ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next