ನವದೆಹಲಿ: ಸ್ನೇಹಿತನ ಮದುವೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಪಾಳಕ್ಕೆ ಭೇಟಿ ನೀಡಿದ್ದು ,ಮಂಗಳವಾರ ಬಿಜೆಪಿ ಟ್ವೀಟ್ ಗಳ ಸುರಿಮಳೆಗೆ ಕಾರಣವಾಯಿತು.
ರಾಹುಲ್ ಗಾಂಧಿ ಪಬ್ ನಲ್ಲಿ ಪಾರ್ಟಿ ಮಾಡುತ್ತಾ ,ಮಹಿಳೆಯೊಂದಿಗೆ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೇಪಾಳಕ್ಕೆ ತೆರಳಿರುವ ರಾಹುಲ್ ಗಾಂಧಿ ಅವರು ನೈಟ್ ಪಾರ್ಟಿ ಮಾಡಿ ಮೋಜು ಮಸ್ತಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ರಾಹುಲ್ ಗಾಂಧಿ ಪಾರ್ಟಿ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರು ಸ್ವಂತ ಪಕ್ಷವನ್ನು ನಡೆಸುವುದಕ್ಕಿಂತ ಹೆಚ್ಚಾಗಿ ಪಕ್ಷಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ನಮ್ಮ ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡುತ್ತೇವೆ, ಆದರೆ ಅವರು ಪಾರ್ಟಿಗಳಿಗೆ ಹಾಜರಾಗುತ್ತಾರೆ” ಎಂದು ಬಿಜೆಪಿ ನಾಯಕ ಮತ್ತು ಬಿಹಾರ ಸಚಿವ ಸೈಯದ್ ಶಹನವಾಜ್ ಹುಸೇನ್ ಹೇಳಿದರು.
Related Articles
ಬಿಜೆಪಿ ವ್ಯಂಗ್ಯ
ರಾಹುಲ್ ಗಾಂಧಿ ಸಂಗೀತ ರಾತ್ರಿಯ ಪಾರ್ಟಿಯೊಂದರಲ್ಲಿ ಭಾಗಿಯಾಗಿರುವ ವೀಡಿಯೋವನ್ನು ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಮುಂಬಯಿ ದಾಳಿ ವೇಳೆಯಲ್ಲೂ ಅವರು ಪಾರ್ಟಿ ಮಾಡುತ್ತಿದ್ದರು. ಈಗ ಕಾಂಗ್ರೆಸ್‌ನಲ್ಲಿ ಸ್ಫೋಟ ಸದೃಶ ವಾತಾವರಣ ಇರುವಾಗಲೂ ರಾಹುಲ್ ಪಾರ್ಟಿ ಮಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನವನ್ನು ಹೊರಗುತ್ತಿಗೆಗೆ ನೀಡಲು ಕಾಂಗ್ರೆಸ್ ನಿರಾಕರಿಸಿದ್ದು, ಇಂಥ ಹೊತ್ತಿನಲ್ಲೇ ಅವರ ಪ್ರಧಾನಿ ಅಭ್ಯರ್ಥಿ ತಮ್ಮ ಕೆಲಸ ಮುಂದುವರಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
“ರಾಹುಲ್ ಅವರ ರಜೆ, ಪಾರ್ಟಿ, ಪ್ರವಾಸ, ಸಂತಸದ ಟ್ರಿಪ್, ಖಾಸಗಿ ವಿದೇಶ ಪ್ರವಾಸ ಇತ್ಯಾದಿಗಳು ಹೊಸದೇನಲ್ಲ. ಇವೆಲ್ಲವೂ ದೇಶಕ್ಕೆ ಗೊತ್ತಿರುವಂಥದ್ದೇ’ ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಗೆಳತಿಯ ವಿವಾಹಕ್ಕೆ ರಾಹುಲ್
ರಾಹುಲ್ ಗಾಂಧಿ ತಮ್ಮ ಸ್ನೇಹಿತೆ ಸುಮ್ನಿಯಾ ಉದಾಸ್ ಅವರ ವಿವಾಹಕ್ಕಾಗಿ ನೇಪಾಲಕ್ಕೆ ತೆರಳಿದ್ದಾರೆ. ಮಂಗಳವಾರವೇ ವಿವಾಹ ನಡೆದಿದ್ದು, ಗುರುವಾರ ಆರತಕ್ಷತೆ ಸಮಾರಂಭವಿದೆ. ರಾಹುಲ್ ಸೋಮವಾರ ಸಂಜೆ ಕಾಠ್ಮಂಡುವಿಗೆ ತೆರಳಿದ್ದು, ಅಲ್ಲಿನ ಹೊಟೇಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ ಎಂದು ನೇಪಾಲಿ ಪತ್ರಿಕೆಯೊಂದರ ಮೂಲಗಳು ಹೇಳಿವೆ. ಅಂದ ಹಾಗೆ, ಸುಮ್ನಿಯಾ ಅವರು ಸಿಎನ್‌ಎನ್ ಸುದ್ದಿಸಂಸ್ಥೆಯ ಮಾಜಿ ಉದ್ಯೋಗಿ. ಇವರ ತಂದೆ ಭೀಮ್ ಉದಾಸ್ ಮ್ಯಾನ್ಮಾರ್‌ನಲ್ಲಿ ನೇಪಾಲದ ರಾಯಭಾರಿಯಾಗಿದ್ದರು.
ಕಾಂಗ್ರೆಸ್ ತಿರುಗೇಟು
ಅತ್ಯಾಪ್ತ ದೇಶವೊಂದಕ್ಕೆ, ಅದೂ ವಿವಾಹಕ್ಕಾಗಿ ಪ್ರವಾಸ ಹೋಗುವುದು ತಪ್ಪೇ ಎಂದು ಕಾಂಗ್ರೆಸ್, ಬಿಜೆಪಿ ನಾಯಕರನ್ನು ಪ್ರಶ್ನಿಸಿದೆ. ಇದು 2015ರಲ್ಲಿ ಪ್ರಧಾನಿ ಮೋದಿ ಅವರು ಪಾಕ್ ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿಯ ವಿವಾಹಕ್ಕೆ ಹೋದದ್ದಕ್ಕಿಂತ ಅಪರಾಧವೇನಲ್ಲ ಎಂದು ತಿರುಗೇಟು ನೀಡಿದೆ. ರಾಹುಲ್ ಗಾಂಧಿಯವರೇನೂ ಪಾಕಿಸ್ಥಾನಕ್ಕೆ ಹೋಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.