ಓಸ್ಲೋ(ನಾರ್ವೆ): ನಾರ್ವೆ ರಾಜಕುಮಾರಿ ಮಾರ್ಥಾ ಲೂಯಿಸ್ (Martha Louise) ಹಾಗೂ ಸ್ವಯಂಘೋಷಿತ ದೇವ(ಮಾಂತ್ರಿಕ)ಮಾನವ ಡ್ಯುರೆಕ್ ವೆರ್ರೆಟ್ ಜೊತೆ 2025ರ ಆಗಸ್ಟ್ 31ರಂದು ವಿವಾಹವಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಾವನ್ನೇ ಗೆದ್ದು ಬಂದವ (Risen from the dead) ಎಂದು ಬಿಂಬಿಸಿಕೊಂಡಿರುವ ಶಮಾನ್(ಮಾಂತ್ರಿಕ) ಡ್ಯುರೆಕ್ ಮತ್ತು ರಾಜಕುಮಾರಿ ಮಾರ್ಥಾ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾದ Fjords ತೀರದ ಗೈರಾಂಗರ್ ನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿ ವಿವರಿಸಿದೆ.
ರಾಜಕುಮಾರಿ ಮಾರ್ಥಾ ಲೂಯಿಸ್ (52ವರ್ಷ) ನಾರ್ವೆ ರಾಜ ಹರಾಲ್ಡ್ V ಅವರ ಮೊದಲ ಪುತ್ರಿಯಾಗಿದ್ದಾರೆ. ವೆರ್ರೆಟ್ (49) ಸ್ವಯಂಘೋಷಿತ ದೇವಮಾನವ, ಹಾಲಿವುಡ್ ಸ್ಪ್ರಿಚ್ಯುವಲ್ ಗುರು ಎಂದೇ ಜನಪ್ರಿಯರಾಗಿದ್ದಾರೆ.
2020ರಲ್ಲಿ ವ್ಯಾನಿಟಿ ಫೇರ್ ಗೆ ನೀಡಿದ್ದ ಸಂದರ್ಶನದಲ್ಲಿ ಡ್ಯುರೆಕ್ , ಅಂಗಾಂಗ ವೈಫಲ್ಯ, ರೋಗದಿಂದ 28ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದೆ. ಆ ಕ್ಷಣದಲ್ಲಿ ಉರಿಯುತ್ತಿರುವ ಚಾಕುಗಳು ತನ್ನನ್ನು ಇರಿಯುವಂತೆ ಭಾಸವಾಗಿ, ನನ್ನ ಅಜ್ಜಿಯ ಆತ್ಮ ನನ್ನನ್ನು ಬಿಡುವಂತೆ ಹೇಳಿರುವುದು ಕೇಳಿಸಿತ್ತು. ಆಗ ನನ್ನ ನೆನಪುಗಳು ತಾಯಿ ಗರ್ಭದ ಸಂದರ್ಭಕ್ಕೆ ತೆರಳಿತ್ತು. ಹೀಗೆ ನನ್ನ ಪುನರ್ಜನ್ಮದ ಒಂದೊಂದು ಕ್ಷಣದ ಅನುಭವ ನನಗಾಗತೊಡಗಿತ್ತು ಎಂದು ಹೇಳಿದ್ದರು.
ಹೀಗೆ ಎರಡು ತಿಂಗಳ ಕಾಲ ಕೋಮಾದಲ್ಲಿದ್ದ ಡ್ಯುರೆಕ್ ಗೆ 2021ರಲ್ಲಿ ಆತನ ಸಹೋದರಿ ಕಿಡ್ನಿ ಕೊಡುವವರೆಗೆ 8 ವರ್ಷಗಳ ಕಾಲ ನಿರಂತರ ಡಯಾಲಿಸ್ ಗೆ ಒಳಗಾಗಿದ್ದ. ಹೀಗಾಗಿ ತನ್ನ ಆತ್ಮದ ಮುಂದುವರಿಕೆಗಾಗಿ ನಾನು ಮರು ಹುಟ್ಟು ಪಡೆದಿರುವುದಾಗಿ ಸಂದರ್ಶನದಲ್ಲಿ ಡ್ಯುರೆಕ್ ತಿಳಿಸಿದ್ದರು.
ಮಾರ್ಥಾ ಲೂಯಿಸ್ ಮತ್ತು ಲೇಖಕ, ಕಲಾವಿದ ಆರಿ ಬೆಹ್ನ್ ಜೊತೆ ಈ ಮೊದಲು ವಿವಾಹವಾಗಿದ್ದು, ದಂಪತಿಗೆ ಮೂವರು ಪುತ್ರಿಯರು. 2017ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು. ತೀವ್ರ ಡಿಪ್ರೆಶನ್ ನಿಂದ ಬಳಲುತ್ತಿದ್ದ ಬೆಹ್ನ್ 2019ರ ಡಿಸೆಂಬರ್ 25ರಂದು ಆತ್ಮಹತ್ಯೆಗೆ ಶರಣಾಗಿದ್ದರು.